ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ ಎಂದು ವಿಜಯಾನಂದ ಕಾಶಪ್ಪನವರ ಘೋಷಿಸಿದ್ದಾರೆ. ಸ್ವಾಮೀಜಿಗಳ ಸಿಡಿ ಹಾಗೂ ಆಸ್ತಿಗಳ ಬಗ್ಗೆ ಸಮಯ ಬಂದಾಗ ದಾಖಲೆ ಸಮೇತ ಬಯಲು ಮಾಡುವುದಾಗಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಬಾಗಲಕೋಟೆ (ಸೆ.21): ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಸ್ವಾಮೀಜಿ ವಿರುದ್ಧ ಸಿಡಿ ಬಗ್ಗೆ ಬಾಂಬ್ ಸಿಡಿಸಿದ್ದಾರೆ.

ಇಂದು ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳನ್ನ ಪೀಠದಿಂದ ಉಚ್ಚಾಟಿಸಿರುವ ವಿಚಾರವಾಗಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಸಮಯ ಬಂದಾಗ ಸ್ವಾಮೀಜಿ ಬಗ್ಗೆ ಎಲ್ಲ ಬಿಚ್ಚಿಡುವೆ:

ಜಯಮೃತ್ಯುಂಜಯ ಸ್ವಾಮೀಜಿ ಎಲ್ಲೆಲ್ಲಿ ಆಸ್ತಿ ಮಾಡ್ಯಾರ, ಎಲ್ಲೆಲ್ಲಿ ಇವರ ಸಿಡಿ ಹೋಗ್ಯಾವ ಎಲ್ಲವನ್ನೂ ಸಮಯ ಬಂದಾಗ ಹೊರ ತೆಗೆಯುವೆ. ನಮ್ಮ ಹತ್ರ ಎಲ್ಲ ದಾಖಲೆಗಳಿವೆ. ಸ್ವಾಮೀಜಿ ಎಲ್ಲ ಕರ್ಮಗಳನ್ನ ಸಮಯ ಬಂದಾಗ ಬಯಲು ಮಾಡುತ್ತೇನೆ ಎಂದು ಭಾಷಣದ ನಡುವೆ ಸ್ಫೋಟಖ ಹೇಳಿಕೆ ನೀಡಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ!

ಪಂಚಮಸಾಲಿ ಪೀಠಾಧಿಪತಿ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬೆನ್ನಲ್ಲೆ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಜಡಿದಿದ್ದು ಬಿಕೋ ಎನ್ನುತ್ತಿದೆ. ಪೀಠದೊಳಗಿನ ವಿದ್ಯುತ್ ದ್ವೀಪ ಮಾತ್ರ ಆನ್ ಆಗಿವೆ. ಪೀಠದ ಕಡೆ ಯಾರೂ ಸುಳಿದಿಲ್ಲ. ಪೀಠ ಲಾಕ್ ಮಾಡಿಕೊಂಡು ಟಸ್ಟ್‌ ಸಿಬ್ಬಂದಿ ಹೋಗಿದ್ದಾರೆ.