ಮಲ್ಲಿಕಾರ್ಜುನ ಹೊಸಮನಿ

ಬಾದಾಮಿ(ಜ.24): ಸಾಮಾನ್ಯವಾಗಿ ಜಾತ್ರೆ ಅಂದ್ರೆ ಸಾಕು ಒಂದು ದಿನವೋ ಅಥವಾ ಐದು ದಿನವೋ ನಡೆಯೋದು ಸಾಮಾನ್ಯ. ಆದ್ರೆ ಜಾತ್ರೆಯೊಂದು ಹಗಲು ರಾತ್ರಿ ನಿರಂತರವಾಗಿ ಲಕ್ಷಾಂತರ ಜನರ ಮಧ್ಯೆ ಒಂದು ತಿಂಗಳುಗಳ ಕಾಲ ನಡೆಯುತ್ತೇ ಅಂದ್ರೆ ವಿಶೇಷವೇ ಸರಿ.  

ಇಂತಹವೊಂದು ಅಪರೂಪದ ಜಾತ್ರೆ ನಡೆಯೋದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿಯಲ್ಲಿ. ಅಪ್ಪ-ಅವ್ವನ್ನ ಬಿಟ್ರೆ ಎಲ್ಲವೂ ಸಿಗೋ ಜಾತ್ರೆ ಬನಶಂಕರಿ ಜಾತ್ರೆ  ಪ್ರಸಿದ್ಧಿ ಪಡೆದಿದೆ.

"
 
ಪ್ರತಿವರ್ಷ ಬನದಹುಣ್ಣಿಮೆಯಿಂದ  ಒಂದು ತಿಂಗಳ ಕಾಲ ನಡೆಯೋ ಈ ಜಾತ್ರೆಯ ವಿಶೇಷವೇ ಹತ್ತು ಹಲವು. ಹಿಂದೆ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರೋ ಈ ದೇವಾಲಯ ಪುರಾತನವಾಗಿದ್ದು, ತನ್ನದೇಯಾದ ವೈಶಿಷ್ಟ್ಯತೆಯನ್ನ ಹೊಂದಿದೆ.

ಹಲವು ಪ್ರತೀತಿಯೊಂದಿಗೆ ಜನಪ್ರಿಯಗೊಂಡಿರೋ ಈ ಜಾತ್ರೆ ಬಂದ್ರೆ ಸಾಕು ಜನ ಒಂದು ತಿಂಗಳ ಮುಂಚೆಯೇ ತಯಾರಿ ನಡೆಸ್ತಾರೆ. ಯಾಕಂದ್ರೆ ಇದು ಒಂದು ತಿಂಗಳುಗಳ ಕಾಲ ಹಗಲು ರಾತ್ರಿ ವೇಳೆ ನಡೆಯುವಂತ ಜಾತ್ರೆ ಅನ್ನೋದು ವಿಶೇಷ.

"

ಹೀಗಾಗಿ ಬೆಳಗಿನ ವೇಳೆಯಲ್ಲಿ ಕಿಟಕಿ, ಬಾಗಿಲು, ಬೀಸುವ ಕಲ್ಲು, ಬಾಂಡೆ ಸಾಮಾನು ಹೀಗೆ ಮನೆಗೆ ಬೇಕಾಗೋ ಸಾಮಾನುಗಳು, ರೈತಾಪಿ ವರ್ಗದ ಸಲಕರಣೆಗಳು, ಸಿಹಿ ತಿಂಡಿ-ತಿನಿಸು ಹೀಗೆ ಜನ್ರ ಖರೀದಿಯ ಭರಾಟೆ ಜೋರಾಗಿದ್ರೆ ಸಂಜೆಯಾದ್ರೆ ಸಾಕು ರಾತ್ರಿಯಿಡೀ ನಾಟಕಗಳ ಮತ್ತು ಸಿನಿಮಾಗಳ ಭರಾಟೆ ಜೋರಾಗಿಯೇ ಇರುತ್ತದೆ. 

ಈ ಮಧ್ಯೆ ಈ ಬಾರಿ ಸ್ಥಳೀಯ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ರಥೋತ್ಸವಕ್ಕೆ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದ್ರು. ಲಕ್ಷಾಂತರ ಜನ್ರ ಮಧ್ಯೆಯೇ ಸಿದ್ದರಾಮಯ್ಯ ನಿಂತು ರಥೋತ್ಸವದ ಬಳಿಕ ಬನಶಂಕರಿ ದೇವಿ ದರ್ಶನ ಪಡೆದು ಮರಳಿದ್ರು. ಇನ್ನು ಈ ಜಾತ್ರೆಗೆ ದೂರದ ಬೆಂಗಳೂರು, ಮೈಸೂರು, ಗುಲ್ಬರ್ಗಾ ಸೇರಿದಂತೆ ರಾಜ್ಯವಲ್ಲದೆ ಮಹಾರಾಷ್ಟ್ರದಿಂದಲೂ ಯಥೇಚ್ಚವಾಗಿ ಭಕ್ತರು ಹರಿದು ಬಂದು ದೇವಿಯ ಆಶೀರ್ವಾದ ಪಡೆಯುತ್ತಾರೆ.

"

ಒಟ್ಟಿನಲ್ಲಿ ಇಂದಿನ ಕಂಪ್ಯೂರ್ ಯುಗದಲ್ಲೂ ಒಂದು ತಿಂಗಳವರೆಗೆ ಜಾತ್ರೆ ನಡೆಯುವುದು ಹೆಮ್ಮೆಯ ಸಂಗತಿಯಾಗಿದೆ.