Azan vs Hanuman Chalisa ಅಜಾನ್ ವಿರುದ್ಧ ಹನುಮಾನ್ ಚಾಲೀಸಾ, ಕಾನೂನು ಕೈಗೆತ್ತಿಕೊಂಡವರಿಗೆ ಸರ್ಕಾರದ ಎಚ್ಚರಿಕೆ!
- ಅಜಾನ್ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಮುತಾಲಿಕ್ ಆಕ್ರೋಶ
- ಹನುಮಾನ್ ಚಾಲೀಸಾ ಅಭಿಯಾನ ಆರಂಭಿಸಿದ ಶ್ರೀರಾಮ ಸೇನೆ
- ಶಾಂತಿ ಕದಡಲು ಅವಕಾಶವಿಲ್ಲ, ಕಾನೂನು ಕೈಗೆತ್ತಿಕೊಂಡರೆ ಶಿಕ್ಷೆ
ಬೆಂಗಳೂರು(ಮೇ 09): ಮಸೀದಿಗಳಲ್ಲಿನ ಆಜಾನ್ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರಕ್ಕೆ ಇದೀಗ ಶ್ರೀರಾಮ ಸೇನೆ ಮತ್ತೊಂದು ಸವಾಲೆಸೆದಿದೆ. ಅಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಸುಪ್ರಭಾತ ಪಠಣ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದು ರಾಜ್ಯದಲ್ಲಿ ಮತ್ತೊಂದು ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಲಕ್ಷಣಗಳು ಕಾಣಿಸುತ್ತಿದೆ. ಇದರ ನಡುವೆ ಗೃಹ ಸಚಿವ ಅರಗ ಜ್ಞಾನೇಂದ್ರ ಕಾನೂನು ಕೈಗೆತ್ತಿಕೊಂಡರೆ ಕಠಿಣ ಶಿಕ್ಷೆ ಎದುರಿಸಬೇಕು ಎಂದು ಎಚ್ಚರಿಸಿದ್ದಾರೆ.
ಕೋರ್ಟ್ ಆದೇಶವನ್ನು ಪಾಲಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಶಬ್ದ ಮಾಲಿನ್ಯ ಸೃಷ್ಟಿಸುತ್ತಿರುವ ಅಜಾನ್ ವಿರುದ್ಧ ಸರ್ಕಾರ ಇದುವವರೆಗೂ ಕ್ರಮ ಕೈಗೊಂಡಿಲ್ಲ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರೀತಿಯಲ್ಲಿ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಇದೇ ವೇಳೆ ಅಜಾನ್ ವಿರುದ್ಧ ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗು ಸುಪ್ರಭಾತ ಪಠಣ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಆಜಾನ್ ವಿವಾದ: ಹಿಂದೂ ಕಾರ್ಯಕರ್ತರನ್ನು ಸ್ವಾಗತಿಸಿ, ಸತ್ಕರಿಸಿ: ಮೌಲಾನ ಮಕ್ಸೂದ್ ಇಮ್ರಾನ್
ಅಜಾನ್ ಹಾಗೂ ಹುನುಮಾನ್ ಚಾಲೀಸಾ ಇದೀಗ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೋರ್ಟ್ ಆದೇಶದಲ್ಲಿ ಶಬ್ದಮಾಲಿನ್ಯ ಕಾರಣವಾಗುತ್ತಿರುವ ಎಲ್ಲಾ ಧಾರ್ಮಿಕ ಕೇಂದ್ರ ಹಾಗೂ ಇತರ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಸರ್ಕಾರ ಕಾನೂನು ಅಡಿಯಲ್ಲಿ ಕ್ರಮಕೈಗೊಳ್ಳುತ್ತಿದೆ. ಹೀಗಾಗಿ ಯಾವುದೇ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ನಿಯಮ ಉಲ್ಲಂಘಿಸಿದರೆ ಶಿಕ್ಷೆ ಎದುರಿಸಬೇಕು ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 301 ಕೇಂದ್ರಗಳಿಗೆ ಲೌಡ್‌ಸ್ಪೀಕರ್ ಸಂಬಂದ ನೋಟಿಸ್ ನೀಡಲಾಗಿದೆ. 125 ಮಸೀದಿ, 22 ಚರ್ಚ್, 12 ಕೈಗಾರಿಕೆ, 59 ಪಬ್ ಹಾಗೂ 89 ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಸರ್ಕಾರದ ಕ್ರಮ ಸರಿಯಾಗಿಲ್ಲ. ಯುಪಿ ರೀತಿಯ ಕ್ರಮ ಅಗತ್ಯವಿದೆ. ಕೋರ್ಟ್ ಆದೇಶವನ್ನು ಪಾಲಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಸರ್ಕಾರಕ್ಕೆ ಹನುಮಾನ್ ಚಾಲೀಸಾ ಮಾತ್ರ ಕಾಣುತ್ತಿದೆ. ಅಜಾನ್ ವಿಪರೀತ ಶಬ್ಧ ಕೇಳಿಸುತ್ತಿಲ್ಲ. ಕೋರ್ಟ್ ಆದೇಶದ ರೀತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಪ್ರಮೋತ್ ಮುತಾಲಿಕ್ ಆಗ್ರಹಿಸಿದ್ದಾರೆ. ಮುತಾಲಿಕ್ ಬೆಳಗ್ಗೆ 5 ರಿಂದ 6 ಗಂಟೆ ವರೆಗೆ ಹನುಮಾನ್ ಚಾಲೀಸಾ ಹಾಗೂ ಸುಪ್ರಭಾತ ಪಠಣ ಅಭಿಯಾನ ಆರಂಭಿಸಲಾಗಿದೆ.
ರಾಜ್ಯದಲ್ಲೀಗ ಆಜಾನ್ VS ಸುಪ್ರಭಾತ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ವಿವರ
ಮುಸ್ಲಿಮರು ಕಾನೂನಿಗಿಂತ ಮಿಗಿಲು ಎಂಬುದನ್ನು ಕಾಂಗ್ರೆಸ್ ನೋಡಿಕೊಂಡಿದೆ. ಇದರಿಂದ ಈ ಅವಾಂತರಕ್ಕೆ ಕಾರಣವಾಗಿದೆ. ಮುಸ್ಲಿಮರ ಒಲೈಕೆಗೆ ಕಾಂಗ್ರೆಸ್ ನಡೆದುಕೊಂಡ ರೀತಿಯಿಂದ ದೇಶದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ
ಅಜಾನ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಯಲಿದೆ. ಕೋರ್ಟ್ ಆದೇಶವನ್ನು ಪಾಲಿಸಲು ಸಾಧ್ಯವಾಗದ ಸರ್ಕಾರದಿಂದಲೇ ಇದೀಗ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಮುತಾಲಿಕ್ ಹೇಳಿದ್ದಾರೆ. ಇನ್ನು ಹೆಚ್ಚಿನ ಮಂದಿರಗಳಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ತಯಾರಿ ನಡೆಯುತ್ತಿದೆ.