ರಾಜ್ಯದಲ್ಲಿ ಭಾರೀ ಕಟ್ಟೆಚ್ಚರ : ಜನರಿಗೆ ಪೊಲೀಸರ ಸೂಚನೆಗಳೇನು?
ಇಂದು ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ. ಯಾವುದೇ ಅಹಿತಕರ ಘಟನೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು [ನ.09] ಇಂದು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಸೂಕ್ಷ್ಮ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಡಾ. ಅಮರ್ ಕುಮಾರ್‌ಪಾಂಡೆ ಹೇಳಿದ್ದಾರೆ.
ರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ. ಯಾವುದೇ ಅಹಿತಕರ ಘಟನೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು, ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಹಾಗೂ ಹುಬ್ಬಳ್ಳಿ ಸೇರಿದಂತೆ ಕೆಲ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಜಿಲ್ಲೆಗಳೆಂದು ಈಗಾಗಲೇ ಘೋಷಿಸಲಾಗಿದೆ. ಅಂತಹ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.
ರಾಜ್ಯದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡುವಂತೆ ಪೊಲೀಸ್ ಆಯುಕ್ತರು, ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ತೀರ್ಪಿನ ಹಿನ್ನೆಲೆ ಯಲ್ಲಿ ಎರಡು ಸಮುದಾಯದವರ ನಡುವೆ ಶಾಂತಿ ಸಭೆ ನಡೆಸಬೇಕು. ಯಾವುದೇ ತೀರ್ಪು ಹೊರಬಿದ್ದರೂ ಕೂಡ ವಿಜಯೋತ್ಸವ ಆಚರಿಸದಂತೆ ಎರಡು ಸಮುದಾಯ ದವರಿಗೂ ಸೂಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸುಮಾರು 65 ಸಾವಿರಕ್ಕೂ ಹೆಚ್ಚು ಮಂದಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. 170 ಕೆಎಸ್‌ಆರ್‌ಪಿ ತುಕಡಿಯನ್ನು ಬಳಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಎರಡು ಅರೆಸೇನಾಪಡೆಯನ್ನು ಬಳಸಿಕೊಳ್ಳಲಾಗಿದ್ದು, ಒಂದು ಪಡೆ ಬೆಂಗಳೂರು ಹಾಗೂ ಮತ್ತೊಂದು ಪಡೆಯನ್ನು
ಮಂಗಳೂರಿನಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.
ಅಯೋಧ್ಯೆ ಐತಿಹಾಸಿಕ ತೀರ್ಪು : ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ..
ಠಾಣೆಯಲ್ಲಿರುವ ಪ್ರತಿಯೊಬ್ಬ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕರಿಸಬೇಕು. ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಬಾರದು. ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು. ಯಾರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಇನ್ನು ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸಮಾಜಘಾತುಕ ಕೃತ್ಯ ಎಸಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಡಿಕೇರಿ ಸೇರಿದಂತೆ ಕೆಲ ಜಿಲ್ಲೆಗಳಿಗೆ ವಿಶೇಷವಾಗಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಸೂಚಿಸಲಾಗಿದೆ. ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟಗೊಳ್ಳಲಿದ್ದು, ಮುಂಜಾಗೃತ ಕ್ರಮವಾಗಿ ಬೆಳಗ್ಗೆಯಿಂದಲೇ ಗಸ್ತು ಪಡೆಗಳು ಗಸ್ತು ತಿರುಗಲಿವೆ.
ಭದ್ರತೆ ದೃಷ್ಟಿಯಿಂದ ಯಾವುದೇ ಹಂತದ ಸಿಬ್ಬಂದಿಗೆ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಯಾವುದೇ ರಜೆ ನೀಡದಂತೆ ಠಾಣಾಧಿಕಾರಿಗಳು, ಎಸಿಪಿ, ಎಸ್ಪಿಗಳಿಗೆ ಸೂಚಿಸಲಾಗಿದೆ. ಠಾಣೆಯ ಪ್ರತಿ ಸಿಬ್ಬಂದಿಯೂ ಬೀಟ್ ನಡೆಸಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳ ಸಿಬ್ಬಂದಿ, ಹಿರಿಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಅನುಮಾನಾಸ್ಪದ, ಅಪರಿಚಿತ ವ್ಯಕ್ತಿಗಳ ಬಗ್ಗೆ ಆಗಾಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಪೊಲೀಸರ ಸೂಚನೆ : ತೀರ್ಪಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್ ಹಾಗೂ ಮೊಬೈಲ್‌ಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ವಿಡಿಯೋ, ಪೋಸ್ಟ್‌ಗಳನ್ನು, ಕಾಮೆಂಟ್‌ಗಳನ್ನು ಹಾಕುವಂತಿಲ್ಲ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಗುರುವಾರದಿಂದಲೇ ಹೊಸ ನಿಯಮ ಅನ್ವಯವಾಗಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗುವುದು. ತಪ್ಪು ಸಂದೇಶಗಳನ್ನು ಯಾರು, ಯಾರಿಗೂ ಕಳುಹಿಸಬೇಡಿ. ನಿಮ್ಮ ಮಕ್ಕಳು, ಸಹೋದರು, ಸಹೋದರಿಯರು, ಸ್ಥಳೀಯರು ಹಾಗೂ ಸಂಬಂಧಿಗಳಿಗೆ ಈ ಮಾಹಿತಿ ಗಮನಕ್ಕೆ ತನ್ನಿ. ಯಾವುದೇ ರಾಜಕೀಯ, ಧಾರ್ಮಿಕ ವಿಷಯದ ಬಗ್ಗೆ ನಿಂದನೆಯ ಸಂದೇಶಗಳನ್ನು ಕಳುಹಿಸುವುದು ಅಪರಾಧ. ಹೀಗೆ ಸಂದೇಶಗಳನ್ನು ಕಳುಹಿಸಿದರೆ, ವಾರೆಂಟ್ ಇಲ್ಲದೆ ಬಂಧಿಸಲಾಗುವುದು. ಇದು ದೇಶದ ಅತೀ ಗಂಭೀರ ವಿಚಾರವಾಗಿದ್ದು, ಇಂದಿನಿಂದ ಸಾಮಾಜಿಕ ಜಾಲತಾಣಗಳ ಎಲ್ಲ ಸದಸ್ಯರು ಎಚ್ಚರದಿಂದ ಇರಬೇಕು. ತಪ್ಪು ಸಂದೇಶ ಕಳುಹಿಸಬಾರದು.