ಕೆಇಎ ಹಗರಣ: ಪರೀಕ್ಷಾ ಅಕ್ರಮದ ಸುಳಿವಿದ್ದರೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು?
ಪರೀಕ್ಷೆ ವೇಳೆ, ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿಲ್ಲ. ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ತೆರಳುವ ಮುನ್ನ ನಾಮ್ ಕೆ ವಾಸ್ತೆಯಂತೆ ಒಂದಿಷ್ಟು ಮೈದಡವಿ ಚೆಕ್ ಮಾಡಿದ್ದು ಬಿಟ್ಟರೆ, ಅಂತಹ ಭದ್ರತೆ ಕೈಗೊಂಡಿರಲಿಲ್ಲ.
ಯಾದಗಿರಿ(ಅ.29): ಈ ಹಿಂದೆ ಪಿಎಸೈ ನೇಮಕ ಪರೀಕ್ಷೆಯಲ್ಲಿ ನಡೆದಂತಹ ಅಕ್ರಮದ ಮಾದರಿಯಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳಿಗೆ ಶನಿವಾರ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ನಡೆಯಬಹುದು. ಇದನ್ನು ತಡೆಗಟ್ಟಿ ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದ ಮುಖಂಡ ರವಿಶಂಕರ್ ಮಾಲೀಪಾಟೀಲ್ ಅವರು ಕೆಲವು ದಿನಗಳ ಹಿಂದಷ್ಟೇ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಹೀಗಾಗಿ, ಅಕ್ರಮದ ಸುಳಿವಿದ್ದರೂ ಕೂಡ, ಬಿಗಿ ಕ್ರಮ ಕೈಗೊಳ್ಳಬೇಕಿದ್ದ ಪ್ರಾಧಿಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ? ಎಂಬ ಅನುಮಾನ ಕಾಡುತ್ತಿದೆ.
ಈ ಪರೀಕ್ಷೆಗಳಲ್ಲಿ ‘ಬ್ಲೂಟೂತ್’ ದುರ್ಬಳಕೆಯಾಗುವ ಸಾಧ್ಯತೆಯಿದೆ. ಜೊತೆಗೆ, ಪಿಎಸೈ ನೇಮಕ ಪರೀಕ್ಷೆಯಲ್ಲಿನ ಅಕ್ರಮ ಮಾದರಿಯಲ್ಲೇ ಉತ್ತರಗಳ ಜಾಗ ಖಾಲಿ ಬಿಟ್ಟು, ನಂತರ ಅದನ್ನು ತುಂಬುವ ಸಂಚು ನಡೆಯುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ. ಇದನ್ನು ತಡೆಗಟ್ಟಿ ಎಂದು ರವಿಶಂಕರ್ ಮಾಲೀಪಾಟೀಲ್ ಕೆಲವು ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ ಖರ್ಗೆ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು.
ಕೆಇಎ ಬ್ಲೂಟೂತ್ ಅಕ್ರಮ: 300 ಅಭ್ಯರ್ಥಿಗಳ ಜತೆ ₹5-8 ಲಕ್ಷಕ್ಕೆ ಡೀಲ್?
ಆದರೆ, ಪರೀಕ್ಷೆ ವೇಳೆ, ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿಲ್ಲ. ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ತೆರಳುವ ಮುನ್ನ ನಾಮ್ ಕೆ ವಾಸ್ತೆಯಂತೆ ಒಂದಿಷ್ಟು ಮೈದಡವಿ ಚೆಕ್ ಮಾಡಿದ್ದು ಬಿಟ್ಟರೆ, ಅಂತಹ ಭದ್ರತೆ ಕೈಗೊಂಡಿರಲಿಲ್ಲ. ಕೆಲ ತಿಂಗಳುಗಳ ಹಿಂದೆ ನಡೆದ ಶಿಕ್ಷಕರ ನೇಮಕಾತಿ ಪರೀಕ್ಷೆಯ ವೇಳೆ ಟಾರ್ಚ್ ಹಾಕಿ ಕಿವಿಯನ್ನೂ ಸಹ ತಪಾಸಿಸುತ್ತಿದ್ದ ಸಿಬ್ಬಂದಿಗಳು, ಯಾವುದೇ ಅತ್ಯಾಧುನಿಕ ಉಪಕರಣಗಳು ಕೇಂದ್ರದೊಳಗೆ ನುಸುಳದಂತೆ ತಡೆಗಟ್ಟಿದ್ದರು. ಆದರೆ, ಈ ಪರೀಕ್ಷೆ ವೇಳೆ ಅಂತಹ ಭದ್ರತಾ ತಪಾಸಣೆ ಕಂಡು ಬರಲಿಲ್ಲ.
ಈ ಮಧ್ಯೆ, ಯಾದಗಿರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ, ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮತ್ತಿತರ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತಂದು ಕೊಠಡಿಗಳಲ್ಲಿ ತಪಾಸಣೆ ಶುರು ಮಾಡಿದರು. ಆದರೆ, ಅಷ್ಟರಲ್ಲಾಗಲೇ ಪರೀಕ್ಷೆ ಬಹುತೇಕ ಮುಗಿದಿತ್ತು.