ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪಿಗಳೇ ಈ ಕೆಇಎ ಪರೀಕ್ಷೆ ಅಕ್ರಮದ ಹಿಂದಿರುವ ಶಂಕೆ ಇದೆ. ಕಲಬುರಗಿಯಲ್ಲಿ ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಮೇಲೆ ಕೇಸ್‌ ದಾಖಲಾಗಿರುವುದು ಮತ್ತು ಆರ್‌.ಡಿ.ಪಾಟೀಲನ ಊರಾದ ಅಫಜಲ್ಪುರದ ಸೊನ್ನ ಗ್ರಾಮದವರ ಹಲವರು ಇರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

ಆನಂದ್‌ ಎಂ. ಸೌದಿ

ಯಾದಗಿರಿ(ಅ.29): ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಪ್ರಶ್ನೆಪತ್ರಿಕೆಯಲ್ಲಿ ಬ್ಲೂಟೂತ್‌ ಅಕ್ರಮ ಪ್ರಕರಣದ ಬೆನ್ನತ್ತಿದ್ದಾಗ ಸಿಕ್ಕ ಮಾಹಿತಿ ಖಾಕಿಪಡೆಯನ್ನೇ ಬೆಚ್ಚಿ ಬೀಳಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ಜತೆಗೆ ಡೀಲ್‌ ಕುದುರಿಸಲಾಗಿದೆ, ಅಕ್ರಮಕ್ಕೆ ಬಳಸಾದ ಬ್ಲೂಟೂತ್‌ ಪೂರೈಸಲೆಂದೇ ಪ್ರತಿ ಅಭ್ಯರ್ಥಿಯಿಂದ ಸುಮಾರು ಎರಡು ಲಕ್ಷ ರು. ವರೆಗೆ ಮುಂಗಡ ಪಡೆಯಲಾಗಿದೆ ಎಂಬ ಮಾಹಿತಿ ಇದೆ.

ಕನ್ನಡಪ್ರಭಕ್ಕೆ ಲಭ್ಯ ಪೊಲೀಸ್‌ ಮೂಲಗಳ ಪ್ರಕಾರ, ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪಿಗಳೇ ಈ ಕೆಇಎ ಪರೀಕ್ಷೆ ಅಕ್ರಮದ ಹಿಂದಿರುವ ಶಂಕೆ ಇದೆ. ಕಲಬುರಗಿಯಲ್ಲಿ ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಮೇಲೆ ಕೇಸ್‌ ದಾಖಲಾಗಿರುವುದು ಮತ್ತು ಆರ್‌.ಡಿ.ಪಾಟೀಲನ ಊರಾದ ಅಫಜಲ್ಪುರದ ಸೊನ್ನ ಗ್ರಾಮದವರ ಹಲವರು ಇರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಏನಿಲ್ಲವೆಂದರೂ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ಜೊತೆ ಡೀಲ್‌ ನಡೆಸಲಾಗಿತ್ತು ಎನ್ನುವ ಅಂಶ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ.

ಬ್ಲೂಟೂತ್‌ ಬಳಸಿ ಅಭ್ಯರ್ಥಿಗಳು ಅಕ್ರಮ ಎಸಗುತ್ತಿದ್ದುದು ಹೇಗೆ?

5ರಿಂದ 8 ಲಕ್ಷ ರು: 

ಪರೀಕ್ಷೆಯಲ್ಲಿ ಪಾಸಾಗಲು ಪ್ರತಿ ಅಭ್ಯರ್ಥಿಯಿಂದ 5ರಿಂದ 8 ಲಕ್ಷ ರು. ವರೆಗೆ ವ್ಯವಹಾರ ಕುದುರಿಸಲಾಗಿದೆ. ಪರೀಕ್ಷೆಗೆ ಮುನ್ನ ಬ್ಲೂಟೂತ್‌ ಡಿವೈಸ್ ಅಳವಡಿಕೆಗೆ ಮುಂಗಡ 1 ರಿಂದ 2 ಲಕ್ಷ ರು. ಹಣ ಪಡೆದಿದ್ದಾರೆನ್ನಲಾಗಿದೆ.
ಎರಡು ದಿನಗಳ (ಅ.28 ಹಾಗೂ ಅ.29) ಪರೀಕ್ಷೆಗೆಂದು ಒಂದು ದಿನ ಲಾಡ್ಜ್‌ಗಳಲ್ಲಿ ಉಳಿದು, ಕೇಂದ್ರದ ಸುತ್ತಮುತ್ತಲ ಸ್ಥಳ ವೀಕ್ಷಿಸಿ, ಅಕ್ರಮದ ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ ವೇಳೆ ವಾಕಿಟಾಕಿ, ಬ್ಲೂಟೂತ್‌ ಡಿವೈಎಸ್‌ ಸೇರಿ ಅತ್ಯಾಧುನಿಕ ಉಪಕರಣಗಳು ಪತ್ತೆಯಾಗಿವೆ. ಬೆಳಗ್ಗಿನ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಬಾತ್‌ರೂಮಿನಲ್ಲೂ ಬ್ಲೂಟೂತ್‌ ಪತ್ತೆಯಾಗಿದೆ.

ಬೆನ್ನಟ್ಟಿ ಬಂಧನ: 

ಪೊಲೀಸರು ಪರೀಕ್ಷಾ ಅಕ್ರಮ ಭೇದಿಸುತ್ತಿದ್ದಂತೆ ಹೊರಗೆ ವಾಹನದಲ್ಲಿದ್ದುಕೊಂಡು ಉತ್ತರ ಹೇಳುತ್ತಿದ್ದ ಕೆಲವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯಾದಗಿರಿಯ ಪರೀಕ್ಷಾ ಕೇಂದ್ರದಲ್ಲಿ ಟಾಟಾ ಸುಮೋದಲ್ಲಿ ಕುಳಿತಿದ್ದ ಕೆಲವರು ಪೊಲೀಸರನ್ನು ಕಂಡು ಕಾಲ್ಕೀಳುವ ಪ್ರಯತ್ನ ನಡೆಸಿದರಾದರೂ ಪೊಲೀಸರು ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾದಗಿರಿ: ಬ್ಲೂಟೂತ್ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದ ಆರೋಪಿ ಅರೆಸ್ಟ್

ಮೊದಲ ಪರೀಕ್ಷೆಯಲ್ಲೇ ಅಕ್ರಮ ಬಯಲಾಗಿದ್ದರಿಂದ ನಂತರದ ಪರೀಕ್ಷೆಗೆ ಕೆಲವರು ಗೈರಾಗಿದ್ದಾರೆ. ಅನುಮಾನಾಸ್ಪದರ ಮೇಲೆ ಕಣ್ಣಿಟ್ಟಿದ್ದರಿಂದ ಅ.29ರಂದು ನಡೆಯುವ ಎರಡನೇ ದಿನದ ಪರೀಕ್ಷೆಗೂ ಅವರು ಬಂಧನ ಭೀತಿಯಿಂದ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂಡರ್‌ವೇರ್‌, ಕಾಲರ್‌ನಲ್ಲೂ ಬ್ಲೂಟೂತ್ ಡಿವೈಸ್‌!

ಪರೀಕ್ಷಾ ಅಕ್ರಮಕ್ಕಾಗಿ ಅಭ್ಯರ್ಥಿಗಳು ಶರ್ಟ್‌ನ ಕಾಲರ್‌, ಅಂಡರ್‌ವೇರ್‌ ಸೇರಿ ಒಳಉಡುಪಿನಲ್ಲಿ ಬ್ಲೂಟೂತ್‌ ಕನೆಕ್ಟರ್‌ ಅಳವಡಿಸಿಕೊಂಡಿದ್ದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಯಾದಗಿರಿಯ ನ್ಯೂ ಕನ್ನಡ ಶಾಲೆ ಪರೀಕ್ಷಾ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಸುಮ್ಮನೆ ಕೂತಿದ್ದ ಪರೀಕ್ಷಾರ್ಥಿಯೊಬ್ಬನನ್ನು ಅನುಮಾನದ ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಶರ್ಟ್‌ ಕಾಲರ್‌ನ ತುದಿಯಲ್ಲಿ ಆತ ಬ್ಲೂಟೂತ್‌ ಕನೆಕ್ಟರ್‌ ಅಳವಡಿಸಿಕೊಂಡಿದ್ದು ಬೆಳಕಿಗೆ ಬಂದಿದೆ.