ರಾಜ್ಯದ ಜನರೇ ಗಮನಿಸಿ- ನಾಳೆಯಿಂದ ಸರ್ಕಾರಿ ಸೇವೆ ಅಲಭ್ಯ: ಕಚೇರಿಗೆ ಹೋದರೂ ಕೆಲಸ ಆಗೊಲ್ಲ
ರಾಜ್ಯದಾದ್ಯಂದ ನಾಳೆಯಿಂದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಸೇವೆ ಲಭ್ಯ ಇರುವುದಿಲ್ಲ. ಕಚೇರಿಗಳ ಬಾಗಿಲು ತೆರೆದಿದ್ದರೂ, ಸೇವೆ ನೀಡುವ ಅಧಿಕಾರಿಗಳು ಲಭ್ಯವಿರುವುದಿಲ್ಲ.
ಬೆಂಗಳೂರು (ಫೆ.28): ರಾಜ್ಯ ಸರ್ಕಾರದಿಂದ 7ನೇ ವೇತನ ಆಯೋಗ ಜಾರಿ ಹಾಗೂ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವಂತೆ ಆಗ್ರಹಿಸಿ ಸರ್ಕಾರದ ಬಹುತೇಕ ಇಲಾಖೆಗಳ ನೌಕರರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ವಿಧಾನಸೌಧ ಸೇರಿ ಸರ್ಕಾರದ ಎಲ್ಲ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಸರ್ಕಾರಿ ನೌಕರರು ಪ್ರಮುಖವಾಗಿ ಎರಡು ಬೇಡಿಕೆಗಳಾದ 7ನೇ ವೇತನ ಆಯೋಗ ಜಾರಿ ಹಾಗೂ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ, ಈಗ ಬಿಜೆಪಿ ಸರ್ಕಾರದ ಆಡಳಿತಾವಧಿ ಕೊನೆಗೊಳ್ಳುವ ಹಂತದಲ್ಲಿದ್ದು, ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟವನ್ನು ಆರಂಭಿಸಿದ್ದಾರೆ. ಹೀಗಾಗಿ, ನಾಳೆಯಿಂದ ವಿವಿಧ ಸರ್ಕಾರಿ ಇಲಾಖೆಗಳ ನೌಕರರು ತಮ್ಮ ಸೇವೆಯನ್ನು ಬಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ.
7th Pay Commission: ಮಾರ್ಚ್ 1ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು!
ನಾಳೆಯೊಳಗೆ ಮಧ್ಯಂತರ ಆದೇಶ ಹೊರಡಿಸಲು ಗಡುವು: ಈಗಾಗಲೇ ಕಳೆದ ಕೆಲವು ತಿಂಗಳಿನಿಂದ ಏಳನೇ ವೇತನ ಆಯೋಗ ಜಾರಿ ಹಾಗೂ ಎನ್‌ಪಿಎಸ್ ರದ್ದತಿ ಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗದೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರು ನಿರ್ಧಾರ ಮಾಡಿದ್ದಾರೆ. 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಸರ್ಕಾರ ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದರೆ ಮಾತ್ರ ಪ್ರತಿಭಟನೆ ವಾಪಸ್ ಪಡೆಯಲಾಗುತ್ತದೆ. ನಾಳೆಯೊಳಗೆ ಸರ್ಕಾರ ಆದೇಶ ಹೊರಡಿಸದೇ ಇದ್ದರೆ 10 ಲಕ್ಷ ಉದ್ಯೋಗಿಗಳು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ನಾಳೆ ಯಾವೆಲ್ಲ ಇಲಾಖೆಗಳು ಬಂದ್ ಆಗಲಿವೆ:
- - ವಿಧಾನಸೌಧದ ಎಲ್ಲಾ ಕಚೇರಿಗಳು ಬಂದ್
- - ಸಚಿವಾಲಯದ ಎಲ್ಲಾ ಕಚೇರಿಗಳು
- - ಬಿಬಿಎಂಪಿ
- - ತಾಲೂಕು ಕಚೇರಿ
- - ಜಿಲ್ಲಾಧಿಕಾರಿ ಕಚೇರಿ
- - ಗ್ರಾಮ ಪಂಚಾಯಿತಿ
- - ಸರ್ಕಾರಿ ಶಾಲೆಗಳು
- - ಸರ್ಕಾರಿ ಆಸ್ಪತ್ರೆ
- - ಪ್ರಾಥಮಿಕ ಆರೋಗ್ಯ ಕೇಂದ್ರ
- - ಪುರಸಭೆ
- - ಸರ್ಕಾರಿ ಹಾಸ್ಟೆಲ್ ಗಳು
- - ಪುರಸಭೆ
- - ತಾಲೂಕು ಕಚೇರಿ, ಜಿಲ್ಲಾ ಕಚೇರಿ
- - ಆರೋಗ್ಯ ಇಲಾಖೆ
- - ಕಂದಾಯ ಇಲಾಖೆ
ಬೆಂಗಳೂರಿನ ಜನರಿಗೆ ನಾಳೆ ಯಾವ ಸೇವೆ ಸಿಗಲ್ಲ:
- ಬಿಬಿಎಂಪಿ ಯ ಎಲ್ಲಾ ಕಚೇರಿಗಳು ಬಂದ್
- ಕಂದಾಯ ಇಲಾಖೆ ಬಂದ್
- ಜಿಲ್ಲಾಧಿಕಾರಿಗಳ ಕಚೇರಿ ಬಂದ್.
- ಜಲಮಂಡಳಿ ಬಂದ್. ನೀರು ಸರಬರಾಜು ತೊಂದರೆ ಸಾಧ್ಯತೆ
- ಬಿಬಿಎಂಪಿ ಆಸ್ಪತ್ರೆ ಗಳು ಬಂದ್
- ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್
Bengaluru: ಮಾ.1ರಿಂದ ಬಿಬಿಎಂಪಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹ
ಬಿಬಿಎಂಪಿ ಕಚೇರಿಗಳು ಬಂದ್ ಮಾತ್ರವಲ್ಲದೆ ಕಸವೂ ಸ್ವಚ್ಛ ಆಗೊಲ್ಲ: ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ನಮಗೆ ಹೇಳಿಕೆ, ಭರವಸೆ ಬೇಡ. ನಮ್ಮ ಬೇಡಿಕೆ ಈಡೇರಿಕೆಗೆ ಆದೇಶ ಹೊರಡಿಸುವರರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಅಲ್ಲಿಯವರೆಗೆ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ. ಬಿಬಿಎಂಪಿ 17 ಸಾವಿರ ನೌಕರರು ನಾಳೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಾಳೆ ಪೌರಕಾರ್ಮಿಕರು ಕೆಲಸಕ್ಕೆ ಹಾಜರಾಗುವುದಿಲ್ಲ. 2.5 ಸಾವಿರ ಖಾಯಂ ಪೌರ ಕಾರ್ಮಿಕರು ಕಸ ಸಂಗ್ರಹಣೆ ಮಾಡಲ್ಲ. ಆರೋಗಯ ಪರಿವೀಕ್ಷಕರ ಗೈರಿನಿಂದ ಕಸ ವಿಲೇವಾರಿಯಲ್ಲಿ ವ್ಯತ್ಯಯ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ರೋಗಿಗಳಿಗೆ ಆಸ್ಪತ್ರೆ ಸೇವೆಯೂ ಸಿಗುವುದಿಲ್ಲ: ನಾಳೆಯಿಂದ ಸರ್ಕಾರಿ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳು ಕೂಡ ಬಂದ್ ಆಗಲಿವೆ. ರೋಗಿಳು ಪರದಾಡುವ ಸ್ಥಿತಿ ನಿರ್ಮಾಣ ಆಗಲಿದೆ. ಸಂಪೂರ್ಣವಾಗಿ ಸರ್ಕಾರಿ ಆಸ್ಪತ್ರೆಗಳು ಸ್ತಬ್ಧ ಆಗುತ್ತವೆ. ನಾಳೆಯಿಂದ ಆಸ್ಪತ್ರೆಗಳ ಹೊರ ರೋಗಿ ವಿಭಾಗ ಸಂಪೂರ್ಣ ಸ್ತಬ್ದವಾಗಲಿದೆ. ಆಸ್ಪತ್ರೆ ಹೊರರೋಗಿ ವಿಭಾಗದಲ್ಲಿ ಕೆಲಸ ನಿರ್ವಹಿಸದೇ ಇರಲು ಸರ್ಕಾರಿ ಆರೋಗ್ಯ ನೌಕರರ ಸಂಘ ನಿರ್ಧಾರ ಮಾಡಿದೆ. ಓಪಿಡಿ ಹೊರತು ಪಡಿಸಿ ಉಳಿದಂತೆ, ಐಸಿಯು, ಎಮರ್ಜೆನ್ಸಿ ಸೇವೆಗಳು ಮಾತ್ರ ಲಭ್ಯ. ಅತಿ ತುರ್ತು ಸೇವೆಗಳು ಮಾತ್ರ ನಾಳೆಯಿಂದ ಲಭ್ಯ. ಸದ್ಯ ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳಿದ್ದಾರೆ. ಏಕಕಾಲದಲ್ಲಿ ಓಪಿಡಿ ಬಂದ್ ಮಾಡಲು ನೌಕರರ ಸಂಘ ನಿರ್ಧಾರ ಮಾಡಿದೆ ಎಂದು ಸರ್ಕಾರಿ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ವಿವೇಕ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಮಧ್ಯಂತರ ವರದಿ ಬಂದ ಕೂಡಲೇ 7ನೇ ವೇತನ ಆಯೋಗ ಜಾರಿ
ಸರ್ಕಾರಿ ನೌಕರರ 7ನೇ ವೇತನ ಆಯೋಗ ಜಾರಿ ಬಗ್ಗೆ ಕ್ರಮವಹಿಸಲಾಗಿದೆ. ಸರ್ಕಾರಿ ನೌಕರರ ಯುನಿಯನ್ ಜೊತೆಗೆ ನಮ್ಮಅಧಿಕಾರಿಗಳು ಮಾತನಾಡುತ್ತಿದ್ದಾರೆ. ವೇತನ ಹೆಚ್ಚಳಕ್ಕೆ ಈಗಾಗಲೇ ಬಜೆಟ್ ಅನುದಾನ ಮೀಸಲಿಟ್ಟದ್ದೇವೆ. ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೇನೆ. ಮಧ್ಯಂತರ ವರದಿ ಸಿದ್ಧಪಡಿಸುತ್ತಿದ್ದೇವೆ. ಮಧ್ಯಂತರ ವರದಿ ಬಂದ ಕೂಡಲೇ ಜಾರಿಗೊಳಿಸಿ 2023-24 ನೇ ಸಾಲಿನಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ