ಸುಳ್ಯ:ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆಬಳಿ ಅ.24ರಂದು ನಡೆದ ಘರ್ಷಣೆಗೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ಆಕೆಯ ಆರು ಮಂದಿ ಸಹಚರರಿಗೆ ಕೊನೆಗೂ ಜಾಮೀನು ದೊರೆತಿದೆ. 

ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನ.3ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಚೈತ್ರಾ ಕುಂದಾಪುರ ಅನಾರೋಗ್ಯದ ನೆಪವೊಡ್ಡಿ ಅಂದು ಹಾಜರಾಗಿರಲಿಲ್ಲ. 

ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು ಗೈರು ಹಾಜರಿಗೆ ಕಾರಣ ಕೇಳಿದ್ದರು. ಅಲ್ಲದೆ ಜೈಲು ಸೂಪರಿಡೆಂಟ್‌ ಹಾಗೂ ಜಿಲ್ಲಾ ವೈದ್ಯಾಧಿಕಾರಿಯನ್ನು ನ.5ರಂದು ಸುಳ್ಯ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ ಆದೇಶಿಸಿದ್ದರು. ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಚೈತ್ರಾಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.