ಬೆಂಗಳೂರು(ಮಾ.20):  ಸೀಡಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಆರು ಸಚಿವರು ನ್ಯಾಯಾಲಯಕ್ಕೆ ಹೋಗಿದ್ದು ತಪ್ಪೇನಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ಸಚಿವರು ನ್ಯಾಯಾಲಯಕ್ಕೆ ಅರ್ಜಿ ಹಾಕಿರುವುದನ್ನು ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ ಎಂದಲ್ಲ. ಆದರೆ, ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಲ್ಲ. ಅವರು ನ್ಯಾಯಾಲಯಕ್ಕೆ ಹೋದರೆ ಕಾಂಗ್ರೆಸ್‌ಗೆ ಏನು ಸಮಸ್ಯೆ. ಅವರೆಲ್ಲಾ ನ್ಯಾಯಾಲಯಕ್ಕೆ ಹೋಗಿರುವುದು ತಮ್ಮ ವಿರುದ್ಧ ತೇಜೋವಧೆ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಎಂದು ಸಮರ್ಥಿಸಿಕೊಂಡರು.

‘ಸಿ.ಡಿ ಪ್ರಕರಣದಲ್ಲಿ ಆರೋಪ ಕೇಳಿದ ತಕ್ಷಣವೇ ಸಚಿವ ಸ್ಥಾನಕ್ಕೆ ರಮೇಶ್‌ ಜಾರಕಿಹೊಳಿ ಅವರಿಂದ ನೈತಿಕತೆಯ ಆಧಾರದ ಮೇಲೆ 24 ಗಂಟೆಯಲ್ಲಿ ರಾಜೀನಾಮೆ ಪಡೆದುಕೊಳ್ಳಲಾಯಿತು. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್‌ನಲ್ಲಿ ಇಂತಹ ಸನ್ನಿವೇಶ ಇರಲ್ಲ. ಕಾಂಗ್ರೆಸ್‌ ರಾಜಕೀಯವಾಗಿ ಸಿ.ಡಿ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ ಕೆಳಗೆ ಬೀಳುತ್ತಿರುವ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಸಿ.ಡಿ ವಿಚಾರದಲ್ಲಿಯೂ ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ’ ಎಂದು ಟೀಕಾಪ್ರಹಾರ ನಡೆಸಿದರು.

ನನ್ನ ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಯತ್ನಾಳ್‌ ವಿರುದ್ಧ ಬಿಜೆಪಿ ನಾಯಕ ಗರಂ

ಯತ್ನಾಳ್‌ ಹೇಳಿಕೆ ಗಂಭೀರವಲ್ಲ: ಅರುಣ್‌ ಸಿಂಗ್‌

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯತ್ನಾಳ್‌ ಹೇಳಿಕೆಯನ್ನು ನಾನಾಗಲಿ, ಪಕ್ಷದ ಕಾರ್ಯಕರ್ತರಾಗಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಮಾಧ್ಯಮದವರು ಸಹ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಯತ್ನಾಳ್‌ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಅವರು ಮಾತನಾಡುತ್ತಲೇ ಇರುತ್ತಾರೆ’ ಎಂದು ತಿಳಿಸಿದರು. ‘ಯತ್ನಾಳ ಅವರಿಗೆ ಪಕ್ಷದಲ್ಲಿ ಕೆಲವರ ಬೆಂಬಲ ಇದೆಯಾ?’ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಿಂಗ್‌, ‘ಇರಬಹುದು’ ಎಂದಷ್ಟೇ ಹೇಳಿದರು.