ಆಹಾರ ಸುರಕ್ಷತೆಯ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಪಟ್ಟಣದಲ್ಲಿ ಮಾರಾಟವಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕೆಂಪು ಬಣ್ಣ ಕಾಣಿಸಿಕೊಂಡಿದೆ.
ಕುಣಿಗಲ್ (ಮಾ.02): ಆಹಾರ ಸುರಕ್ಷತೆಯ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಪಟ್ಟಣದಲ್ಲಿ ಮಾರಾಟವಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕೆಂಪು ಬಣ್ಣ ಕಾಣಿಸಿಕೊಂಡಿದ್ದು ಸ್ಥಳೀಯ ನಿವಾಸಿ ಶಿವರಾಂ ಎಂಬುವರು ನೀಡಿದ ದೂರಿನ ಮೇಲೆ ಸ್ಥಳಕ್ಕೆ ಪುರಸಭಾ ಅಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. ಶಿವರಾಂ ಅವರು ಇಲ್ಲಿನ ಮಹಾತ್ಮ ಗಾಂಧಿ ಕಾಲೇಜು ಬಳಿ ತಮಿಳುನಾಡು ಮೂಲದ ವ್ಯಕ್ತಿ ಮಾರುತ್ತಿದ್ದ ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಿದ್ದರು. ಮನೆಯಲ್ಲಿ ಹಣ್ಣನ್ನು ಕತ್ತರಿಸುವ ಸಂದರ್ಭದಲ್ಲಿ ತಮ್ಮಲ್ಲಿದ್ದ ಬಿಳಿಯ ಟಿಶ್ಯೂ ಪೇಪರನ್ನು ಹಣ್ಣಿನ ಮೇಲೆ ಇರಿಸಲಾಗಿದೆ. ಬಿಳಿಯ ಟಿಶ್ಯೂ ಪೇಪರ್ ಕೆಂಪು ಬಣ್ಣಕ್ಕೆ ತಿರುಗಿದೆ.
ಇದರಿಂದ ಅನುಮಾನಗೊಂಡು ಪುರಸಭಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಪುರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳಾದ ಶ್ರೀಕಾಂತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಕಲ್ಲಂಗಡಿ ಹಣ್ಣಿನಲ್ಲಿ ಕೆಂಪು ಬಣ್ಣ ಅತಿ ಹೆಚ್ಚಾಗಿ ಕಾಣುವುದರ ಜೊತೆಗೆ ಟಿಶ್ಯೂ ಪೇಪರ್ ಗೆ ಅಂಟಿದೆ. ಇದರಿಂದ ಕೂಡಲೇ ಅಂಗಡಿಯಲ್ಲಿರುವ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು ಹೆಚ್ಚಿನ ತನಿಖೆಗೆ ತುಮಕೂರು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಕರೆಯಿಸಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಟಿಎಚ್ಒ ಮರಿಯಪ್ಪ ಸಹ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಬಾಂಬೇ ಮಿಠಾಯಿಗೆ ನಿಷೇಧಿತ ಬಣ್ಣ ಬಳಕೆ: ನಗರದಲ್ಲಿ ಬಾಂಬೇ ಮಿಠಾಯಿ(ಕಾಟನ್ ಕ್ಯಾಂಡಿ)ಗೆ ನಿಷೇಧಿತ ಕೃತಕ ಬಣ್ಣ ಬಳಸಿ ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚಿ 5 ಸಾವಿರ ರು. ದಂಡ ವಿಧಿಸಲಾಗಿದೆ. ನಗರದ ಹುಕ್ಕೇರಿಮಠದ ಜಾತ್ರೆಯಲ್ಲಿ ಶುಕ್ರವಾರ ಹುಬ್ಬಳ್ಳಿಯಿಂದ ಆಗಮಿಸಿ ಕೆಲವು ಬಾಂಬೇ ಮಿಠಾಯಿ ವ್ಯಾಪಾರಿಗಳು ನಿಷೇಧಿತ ಕೃತಕ ಬಣ್ಣ ಬಳಸಿ ಮಾರಾಟ ಮಾಡುತ್ತಿದ್ದ ಸಮಯದಲ್ಲಿ, ಆಹಾರ ಸುರಕ್ಷತಾಧಿಕಾರಿ ಶ್ರೀಧರ ಅಗಸೀಬಾಗಿಲ ಅವರು ಪತ್ತೆಹಚ್ಚಿ ದಂಡವಿಧಿಸಿ, ನಿಷೇಧಿತ ಕೃತಕ ಬಣ್ಣ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ಇಡ್ಲಿಗೆ ಡೆಡ್ಲಿ ಪ್ಲಾಸ್ಟಿಕ್ ಬಳಸಿದವರಿಗೆ ನೋಟಿಸ್ ಜಾರಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯಾದ್ಯಾಂತ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ನಿಷೇಧಿಸಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ಅಭಿಯಾನ ನಡೆಸಿ, ಕೃತಕ ಬಣ್ಣಗಳ ಬಳಕೆ ನಿಷೇಧ ಕುರಿತು ವ್ಯಾಪಾರಸ್ಥರಿಗೆ ನೊಟೀಸ್ ನೀಡುವುದರ ಮೂಲಕ ಅರಿವು ಮೂಡಿಸಲಾಗಿದೆ. ಸಂಶಯಾಸ್ಪದ ಆಹಾರ ಮಾದರಿಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿ, ಅಸುರಕ್ಷಿತ ಎಂದು ಕಂಡುಬಂದ ಪ್ರಕರಣಗಳಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಅಂಕಿತಾಧಿಕಾರಿಗಳ ಹಂತದಲ್ಲಿ ದಂಡ ವಿಧಿಸಲಾಗಿದೆ.
