ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ತಮ್ಮ ವಿರುದ್ಧ ಹೈಕೋರ್ಟ್ ಜಡ್ಜ್ ಎಚ್.ಪಿ.ಸಂದೇಶ್ ಮಾಡಿರುವ ಟೀಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನವದೆಹಲಿ (ಜು.18): ಲಂಚ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿರುವ, ಅಮಾನತುಗೊಂಡ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣವೊಂದರ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ತಮ್ಮ ವಿರುದ್ಧ ಕೆಲ ಅನಪೇಕ್ಷಿತ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ತಮ್ಮ ವಿರುದ್ಧ ‘ಮಾಧ್ಯಮ ವಿಚಾರಣೆ’ (ಮೀಡಿಯಾ ಟ್ರಯಲ್) ಆರಂಭವಾಗಿದೆ’ ಎಂದು ಮಂಜುನಾಥ್ ಅರ್ಜಿಯಲ್ಲಿ ದೂರಿದ್ದಾರೆ. ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡದೆಯೇ ನನ್ನ ವಿರುದ್ಧ ನ್ಯಾಯಮೂರ್ತಿಗಳು ಕೆಲವೊಂದು ಅನಪೇಕ್ಷಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಕೋರಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಮಂಜುನಾಥ್ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು, ಇದೇ ಪ್ರಕರಣದಲ್ಲಿ ಎಸಿಬಿ ಮತ್ತು ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿಗಳ ಜೊತೆಗೆ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ಸಮ್ಮತಿಸಿದೆ. ಈ ಅರ್ಜಿಗಳು ಜು.18ರ ಸೋಮವಾರ ವಿಚಾರಣೆಗೆ ಬರಲಿವೆ. ಹೀಗಾಗಿ ಇಂದು ನಡೆಯಲಿರುವ ಅರ್ಜಿ ವಿಚಾರಣೆಯಲ್ಲಿ ಯಾವ ತೀರ್ಪು ಹೊರಬರಲಿದೆ ಎನ್ನುವ ಕುತೂಹಲ ಇದೆ.
ಇನ್ನು ಕೆಲ ದಿನಗಳ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆ ಹಾಕಿರುವ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಬೇಕು ಮತ್ತು ಅವರಿಗೆ ವಿಶೇಷ ಭದ್ರತೆ ಒದಗಿಸಬೇಕು ಎಂದು ಕೋರಿ ಹೈಕೋರ್ಚ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ತುಮಕೂರು ನಿವಾಸಿಯಾಗಿರುವ ವಕೀಲ ರಮೇಶ್ ಎಲ್.ನಾಯಕ್ ಅವರು ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿ ವಿಚಾರಣೆಗೆ ಬರಬೇಕಿದೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯವೈಖರಿ ಮತ್ತು ಅದರ ಮುಖ್ಯಸ್ಥರ ವಿರುದ್ಧ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಅತ್ಯುನ್ನತ ಭದ್ರತೆ ಒದಗಿಸಬೇಕು. ಈ ರೀತಿಯ ಬೆದರಿಕೆಗಳು ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿಯಾಗುತ್ತವೆ. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸುವ ಹಾಗೂ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಡೀಸಿ ಕಚೇರಿಯಲ್ಲಿ ಲಂಚ ಕೇಳಿದ ಕೇಸ್: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಪ್ರಕರಣದಲ್ಲಿ ಜಾಮೀನು ಕೋರಿ ಉಪ ತಹಶೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆದಿಲ್ಲವೆಂಬ ಕಾರಣಕ್ಕೆ ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ ತಮಗೆ ಪರೋಕ್ಷವಾಗಿ ವರ್ಗಾವಣೆಯ ಬೆದರಿಕೆ ಒಡ್ಡಲಾಗಿದೆ ಎಂಬ ವಿಚಾರವನ್ನು ನ್ಯಾಯಮೂರ್ತಿಗಳು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದರು
