ಬೆಂಗಳೂರು (ಅ.20):  ಕೋವಿಡ್‌-19 ಹಿನ್ನೆಲೆಯಲ್ಲಿ ಸಂಪರ್ಕಗಳನ್ನು ಪತ್ತೆಹಚ್ಚಲು ರೂಪಿಸಲಾಗಿರುವ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಹಾಗೂ ಬಳಕೆ ಮಾಡದವರಿಗೆ ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಲಾಗುವುದು ಎಂದು ಸರ್ಕಾರದ ಯಾವುದೇ ಇಲಾಖೆ ಅಥವಾ ಪ್ರಾಧಿಕಾರ ಹೇಳಿಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಗಮನಕ್ಕೆ ತಂದಿದೆ. 

ಆರೋಗ್ಯ ಆ್ಯಪ್‌ ಸೇತು ಬಳಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಆಕ್ಷೇಪಿಸಿ ಅನಿವರ್‌ ಎ. ಅರವಿಂದ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರಿ ವಕೀಲರು ಹಾಜರಾಗಿ, ಆಕ್ಷೇಪಣೆ ಸಲ್ಲಿಸಲು ಮತ್ತೆ ಕಾಲಾವಕಾಶ ಕೋರಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠವು ನ.3ರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.

ಕೊರೋನಾ; ಪ್ರಧಾನಿ ಮೋದಿ ಕೊಟ್ಟ 'ರಿಕವರಿ' ಮಾಹಿತಿ .

ಕಾಲಾವಕಾಶಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಸಿಬ್ಬಂದಿ ತರಬೇತಿ ಇಲಾಖೆಯು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮತ್ತು ಬಳಕೆಯನ್ನು ಕಡ್ಡಾಯಗೊಳಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ, ಯಾವುದೇ ಕಾನೂನು ಜಾರಿ ಇಲ್ಲದ ವೇಳೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳದವರಿಗೆ ಷರತ್ತುಗಳನ್ನು ವಿಧಿಸಲು ಆಗುತ್ತಾ? ಅವಕಾಶವಿದ್ದರೂ ಅನೇಕರು ಮೊಬೈಲ್‌ ಬಳಸುವುದಿಲ್ಲ, ಅಂತಹವರಿಗೆ ಕಡ್ಡಾಯ ಎಂಬ ಷರತ್ತು ಹೇಗೆ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಕೇಂದ್ರ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಆರೋಗ್ಯ ಸೇತು ಮೊಬೈಲ್‌ ಆ್ಯಪ್‌ ಬಳಕೆ ವಿಚಾರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ತೀರ್ಮಾನವೇ ಅಂತಿಮ. ಎನ್‌ಇಸಿ ಸಹ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಹಾಗೂ ಬಳಕೆ ಕಡ್ಡಾಯವಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಆ ಆದೇಶಕ್ಕೆ ಯಾವುದೇ ಇಲಾಖೆ ಹಾಗೂ ಪ್ರಾಧಿಕಾರವಾಗಲಿ ಬದ್ಧವಾಗಿರಬೇಕು. ಆ್ಯಪ್‌ ಬಳಕೆ ಮಾಡಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಸೌಲಭ್ಯವನ್ನು ನಿರಾಕರಿಸಲಾಗುವುದು ಎಂದು ಈವರೆಗೂ ಯಾವುದೇ ಇಲಾಖೆ ಅಥವಾ ಪ್ರಾಧಿಕಾರ ತಿಳಿಸಿಲ್ಲ ಎಂಬುದಾಗಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ನ.3ರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.