Asianet Suvarna News Asianet Suvarna News

ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್‌ ಪಟ್ಟ!

ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್‌ ಪಟ್ಟ!| ಕ್ಯಾನ್ಸರ್‌ಕಾರಕ ಎಂಬ ಆರೋಪ ಮಧ್ಯೆ ಮತ್ತೊಂದು ಕಳಂಕ| ‘ಕೃಷಿ ಮಾರಾಟ ವಾಹಿನಿ’ಯಲ್ಲಿ ಅಡಕೆಗೆ ‘ಮಾದಕವಸ್ತು’ ಹಣೆಪಟ್ಟಿ

Arecanut Under Drugs List in Karnataka State Govt Website pod
Author
Bangalore, First Published Jan 28, 2021, 7:46 AM IST

ಗೋಪಾಲ್‌ ಯಡಗೆರೆ

ಶಿವಮೊಗ್ಗ(ಜ.28): ರಾಜ್ಯದ ಅಡಕೆ ಬೆಳೆಗಾರರಿಗೆ ಅದೇಕೋ ಗ್ರಹಚಾರವೇ ಸರಿ ಇದ್ದಂತಿಲ್ಲ. ಒಂದೆಡೆ, ಅಡಕೆ ಕ್ಯಾನ್ಸರ್‌ಕಾರಕ ಎಂಬ ಆರೋಪ ಈಗಾಗಲೇ ಕೇಳಿಬಂದಿದ್ದರೆ, ಮತ್ತೊಂದೆಡೆ ಸ್ವತಃ ರಾಜ್ಯ ಸರ್ಕಾರದಿಂದಲೇ ‘ಮಾದಕವಸ್ತು’ ಎಂಬ ಹಣೆಪಟ್ಟಿಅಂಟಿಸಿಕೊಂಡಿದೆ. ರಾಜ್ಯ ಸರ್ಕಾರದ ಕೃಷಿ ಮಾರುಕಟ್ಟೆಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕೃತ ವೆಬ್‌ಸೈಟ್‌ ಆಗಿರುವ ‘ಕೃಷಿ ಮಾರಾಟ ವಾಹಿನಿ’ಯಲ್ಲಿ ಅಡಕೆಯನ್ನು ‘ಔಷಧ ಮತ್ತು ಮಾದಕವಸ್ತು’ ವಿಭಾಗದಡಿ ಪಟ್ಟಿಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಧಾರಣೆ ಲಭಿಸುತ್ತಿರುವ ಬೆಳೆಗಾರರನ್ನು ಇದು ತಬ್ಬಿಬ್ಬುಗೊಳಿಸಿದ್ದು, ಇದರ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದಾರೆ.

ಈ ಬಗ್ಗೆ ವಿವರಣೆ ಕೋರಿದ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಕೃಷಿ ಮಾರಾಟ ಮಂಡಳಿ ನಿರ್ದೇಶಕ ಕರೀಗೌಡ, ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಹೀಗಾಗಿದೆ. ಅಡಕೆ ತೋಟಗಾರಿಕೆ ಬೆಳೆಯಾಗಿದ್ದು, 2-3 ದಿನದಲ್ಲಿ ತಿದ್ದುಪಡಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ವೆಬ್‌ಸೈಟ್‌ನಲ್ಲೇ ಡ್ರಗ್ಸ್‌ ಪಟ್ಟ:

ರಾಜ್ಯದ ಎಲ್ಲ ಕೃಷ್ಯುತ್ಪನ್ನ ಮಾರುಕಟ್ಟೆಗಳ ಕುರಿತು ವಿವರವಾದ ಮಾಹಿತಿ ನೀಡಲು ಕರ್ನಾಟಕ ಸರ್ಕಾರ ‘ಕೃಷಿ ಮಾರಾಟ ವಾಹಿನಿ’ ಎಂಬ ವೆಬ್‌ಸೈಟ್‌ ಹೊಂದಿದೆ. ಇದರಲ್ಲಿ ಪ್ರತಿನಿತ್ಯ ಎಲ್ಲ ಕೃಷಿ ಉತ್ಪನ್ನಗಳ ಮಾರಾಟ ಧಾರಣೆಗಳನ್ನೂ ಕೊಡಲಾಗುತ್ತದೆ. ಈ ವೆಬ್‌ಸೈಟ್‌ ಅನ್ನು ತೆರೆದು ನಮಗೆ ಬೇಕಾದ ಹುಟ್ಟುವಳಿಗಳ ಮೇಲೆ ಕ್ಲಿಕ್ಕಿಸಿದಲ್ಲಿ ಧಾರಣೆಯ ಪುಟ ತೆರೆದುಕೊಳ್ಳುತ್ತದೆ. ಗೋಧಿ, ರಾಗಿ ದರ ಪರಿಶೀಲಿಸಬೇಕಿದ್ದರೆ ‘ಧಾನ್ಯ’ಗಳ ಪಟ್ಟಿನೋಡಿದರಾಯಿತು. ಆದರೆ, ಅಡಕೆ ಧಾರಣೆ ಬೇಕಿದ್ದರೆ ಮಾದಕ ವಸ್ತುಗಳ ಪಟ್ಟಿ(ಈ್ಟ್ಠಜs - Na್ಟ್ಚಟಠಿಜ್ಚಿs)ಯ ಕೆಳಗೆ ನೋಡಬೇಕಾಗುತ್ತದೆ. ಅಡಕೆಗೆ ಔಷಧ ಗುಣವಿದೆ ಎಂಬುದು ಸತ್ಯ. ಆದರೆ ಅಡಕೆ ಮಾದಕ ವಸ್ತುಗಳ ಪಟ್ಟಿಗೆ ಸೇರ್ಪಡೆಯಾಗುವ ಉತ್ಪನ್ನ ಖಂಡಿತಾ ಅಲ್ಲ. ಆದರೂ ಇದನ್ನು ಮಾದಕವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ.

ಈಗಾಗಲೇ ಅಡಕೆ ಕುರಿತು ಸಾಕಷ್ಟುವಿವಾದಗಳಿದ್ದು, ಅಡಕೆ ಧಾರಣೆಯನ್ನು ಆಗಾಗ್ಗೆ ಪಾತಾಳ ತಲುಪುವಂತೆ ಮಾಡುತ್ತಿದೆ. ಇದರಿಂದ ಅಡಕೆ ಬೆಳೆಗಾರರು ನಿತ್ಯ ಆತಂಕದಲ್ಲಿ ಬದುಕುಬೇಕಾಗಿದೆ. ರಾಜ್ಯದ ಮಲೆನಾಡು, ಕರಾವಳಿ ಮತ್ತು ಮಧ್ಯ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಅಡಕೆ ಬೆಳೆಯುತ್ತಿದ್ದು, ಅಡಕೆ ವಿಷಯ ಚುನಾವಣೆಯಲ್ಲೂ ಸದ್ದು ಮಾಡುತ್ತದೆ. ಹಿಂದಿನ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅಡಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಇದೆ ಎಂಬ ಸಾಲು ರೈತರನ್ನು ತೂಗುಗತ್ತಿಯ ಅಡಿ ತಂದು ನಿಲ್ಲಿಸಿದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರದ ಇಲಾಖೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ಅಡಕೆಯನ್ನು ಮಾದಕ ವಸ್ತು ಎಂದು ನಿರ್ಧರಿಸಿರುವುದು ರೈತರ ಆತಂಕ ಇನ್ನಷ್ಟುಹೆಚ್ಚುವಂತೆ ಮಾಡಿದೆ. ಸರ್ಕಾರದ ಈ ಕ್ರಮಕ್ಕೆ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮಾಮ್‌ಕೋಸ್‌) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಹೋರಾಟ ನಡೆಸಲು ಮುಂದಾಗಿದೆ.

ಅಡಕೆ ಆರೋಗ್ಯಕ್ಕೆ ಉತ್ತಮ ಎಂದು ಪ್ರಾಚೀನ ಕಾಲದಿಂದಲೂ ದೃಢಪಟ್ಟಿದೆ. ಇಂಥ ಸನ್ನಿವೇಶದಲ್ಲಿ ಅಡಕೆ ಹಾನಿಕಾರಕ ಎಂಬರ್ಥದಲ್ಲಿ ಸರ್ಕಾರಿ ವೆಬ್‌ಸೈಟ್‌ನಲ್ಲಿ ಸೇರಿಸಿರುವುದು ಸರಿಯಲ್ಲ. ಇದನ್ನು ತಕ್ಷಣ ತೆಗೆಯುವ ಕೆಲಸ ಆಗಬೇಕು.

- ಸುಬ್ರಹ್ಮಣ್ಯ ವೈ.ಎಸ್‌. ಮಾಮ್‌ಕೋಸ್‌ ಉಪಾಧ್ಯಕ್ಷ

ವೀಳ್ಯದೆಲೆಗೂ ಮಾದಕವಸ್ತುವಿನ ಪಟ್ಟ!

ಅಡಕೆ ರೀತಿಯಲ್ಲೇ ಔಷಧೀಯ ಗುಣಗಳುಳ್ಳ ವೀಳ್ಯದೆಲೆಯನ್ನೂ ಮಾದಕವಸ್ತುಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ವೀಳ್ಯದೆಲೆ ಯಾವ ಆಧಾರದ ಮೇಲೆ ಈ ಗುಂಪಿಗೆ ಸೇರುತ್ತದೆ ಎಂಬುದು ಬೆಳೆಗಾರರ ಪ್ರಶ್ನೆಯಾಗಿದೆ.

Follow Us:
Download App:
  • android
  • ios