ಬೆಂಗಳೂರು(ಸೆ.14): ಬಿಬಿಎಂಪಿ ಸದಸ್ಯರ ಅಧಿಕಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಾಜಧಾನಿಯ ನಾಗರಿಕರ ಸಮಸ್ಯೆ ಕೇಳಿ ಸ್ಪಂದಿಸುವ ಉದ್ದೇಶದಿಂದ ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್‌ ಅಧಿಕಾರಿ ನೇಮಿಸಲು ಮುಂದಾಗಿದೆ.

ಪಾಲಿಕೆಯ 198 ವಾರ್ಡ್‌ನ ಸದಸ್ಯರ ಅಧಿಕಾರ ಅವಧಿ ಸೆ.10ಕ್ಕೆ ಮುಕ್ತಾಯಗೊಂಡಿದೆ. ಇಷ್ಟು ದಿನ ಪಾಲಿಕೆ ಸದಸ್ಯರು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ವಾರ್ಡ್‌ನ ಪಾಲಿಕೆ ಸದಸ್ಯರು ಇಲ್ಲ ಎಂಬ ಕಾರಣಕ್ಕೆ ನಾಗಕರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಬಿಬಿಎಂಪಿ ಆಯುಕ್ತರು 198 ವಾರ್ಡ್‌ಗಳಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸುವುದಕ್ಕೆ ಮುಂದಾಗಿದ್ದಾರೆ.

ಪಾಲಿಕೆಯ ಎಂಟು ವಿಶೇಷ ಅಯುಕ್ತರು, ಉಪ ಆಯುಕ್ತರು, ವಲಯ ಹಾಗೂ ಇತರೆ ವಿಭಾಗದ ಜಂಟಿ ಆಯುಕ್ತರು, ಎಂಟು ವಲಯದ ಮುಖ್ಯ ಎಂಜಿನಿಯರ್‌, ರಸ್ತೆ ಮತ್ತು ಘನತ್ಯಾಜ್ಯ ವಿಭಾಗ ಸೇರಿದಂತೆ ಎಲ್ಲ ವಿಭಾಗದ ಮುಖ್ಯ ಎಂಜಿನಿಯರ್‌ಗಳು ಹಾಗೂ ಸಹಾಯಕ ಕಾರ್ಯಪಾಲ ಎಂಜಿನಿಯರ್‌ಗಳಿಗೆ ತಾವು ವಾಸವಿರುವ ವಾರ್ಡ್‌ನ ಹೆಸರು, ಅಧಿಕಾರಿ ಹೆಸರು, ಹುದ್ದೆ ವಿವರವನ್ನು ಸೋಮವಾರ ಸಂಜೆ ಒಳಗೆ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮಳೆ ಕಾಟ, ಕಾರ್ಪೊರೇಟರ್‌ಗಳಿಗೆ ಫೋಟೋ ಸೆಷನ್‌ನಲ್ಲಿ ನಲಿದಾಟ!

ತಾವು ಸೇರಿದಂತೆ ಪಾಲಿಕೆಯಲ್ಲಿ ವಿಶೇಷ ಆಯುಕ್ತರಿಂದ ಸಹಾಯಕ ಎಂಜಿನಿಯರ್‌ ಮಟ್ಟದಲ್ಲಿ ಸುಮಾರು 250 ರಿಂದ 300 ಮಂದಿ ಲಭ್ಯವಾಗಲಿದ್ದಾರೆ. ಅವರಲ್ಲಿ ಹಿರಿಯ ಅಧಿಕಾರಿಯನ್ನು ವಾರ್ಡ್‌ಗೆ ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗುವುದು. ಒಂದು ವಾರ್ಡ್‌ನಲ್ಲಿ ಯಾವುದೇ ಅಧಿಕಾರಿ ಇಲ್ಲ ಎಂದರೆ ಸಮೀಪ ವಾರ್ಡ್‌ನ ಮತ್ತೊಬ್ಬ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ನೋಡಲ್‌ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ:

ಇಷ್ಟು ದಿನ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಾರ್ಡ್‌ ಸಮಿತಿ ಅಸ್ಥಿತ್ವದಲ್ಲಿ ಇತ್ತು. ವಾರ್ಡ್‌ ಸಮಿತಿ ಹಾಗೂ ಪಾಲಿಕೆ ಮಾಸಿಕ ಸಭೆಯಲ್ಲಿ ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೀಗ ಪಾಲಿಕೆ ಸದಸ್ಯರು ಇಲ್ಲದ ಕಾರಣ ವಾಡ್‌ಗೆ ನೇಮಿಸಲಾಗುವ ನೋಡಲ್‌ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಆ ವಾರ್ಡ್‌ನ ಸಹಾಯಕ ಎಂಜಿನಿಯರ್‌ ಅಥವಾ ಆರೋಗ್ಯ ಅಧಿಕಾರಿ ಕಾರ್ಯದರ್ಶಿ ಆಗಿರುತ್ತಾರೆ.

ಸಮಿತಿಯಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿಯ ಸಂಘಗಳ ಸದಸ್ಯರನ್ನು ನೇಮಿಸಲಾಗುತ್ತದೆ. ಅವರೊಂದಿಗೆ ನೋಡಲ್‌ ಅಧಿಕಾರಿ ತಿಂಗಳಿಗೆ ಎರಡು ಸಭೆ ನಡೆಸಿ ಸಮಸ್ಯೆ ಅರಿತು ಪರಿಹಾರ ಕೈಗೊಳ್ಳಲು ಸೂಚಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಎನ್‌. ಮಂಜುನಾಥ ಪ್ರಸಾದ್‌ ಇಡೀ ಬಿಬಿಎಂಪಿಗೆ ಆಯುಕ್ತರಾಗಿದ್ದರೂ ಸಹ ತಾವು ವಾಸವಿರುವ ವಸಂತ ನಗರ ವಾರ್ಡ್‌ನ ನೋಡಲ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ನೋಡಲ್‌ ಅಧಿಕಾರಿ ಕಾರ್ಯ ಏನು?:

ವಾರದಲ್ಲಿ ಕನಿಷ್ಠ ಮೂರು ದಿನ ವಾರ್ಡ್‌ನ ರಸ್ತೆ, ಉದ್ಯಾನವನ, ಮೈದಾನ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುವುದು. ಅದಕ್ಕೆ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸುವುದು. ತಿಂಗಳಲ್ಲಿ ಎರಡು ಬಾರಿ ವಾರ್ಡ್‌ ಸಮಿತಿ ಸಭೆ ನಡೆಸುವುದು. ವಾರ್ಡ್‌ ಜನರ ಸಮಸ್ಯೆ ಕೇಳಿ ಸ್ಪಂದಿಸುವುದಾಗಿರಲಿದೆ.

ವಾರ್ಡ್‌ಗೆ ಒಬ್ಬ ನೋಡಲ್‌ ಅಧಿಕಾರಿ ನೇಮಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಅಧಿಕಾರಿಗಳು ವಾಸಿಸುತ್ತಿರುವ ವಾರ್ಡ್‌ನ ವಿವರ ಕೇಳಲಾಗಿದೆ. ಒಂದರೆಡು ದಿನದಲ್ಲಿ 198 ವಾರ್ಡ್‌ಗೆ ತಲಾ ಒಬ್ಬ ನೋಡಲ್‌ ಅಧಿಕಾರಿ ನೇಮಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ತಿಳಿಸಿದ್ದಾರೆ. 

ವಿಧಾನಸಭಾ ಕ್ಷೇತ್ರವಾರು ಸಭೆ

ಕೌನ್ಸಿಲ್‌ ಸಭೆ ಇಲ್ಲದ ಕಾರಣ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರವಾರು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಜನರ ಸಮಸ್ಯೆಗಳ ಕುರಿತು ಚರ್ಚೆಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಬಿಬಿಎಂಪಿ ಆಯುಕ್ತರು ಚಿಂತನೆ ನಡೆಸಿದ್ದು, ಈ ಕುರಿತು ಶೀಘ್ರದಲ್ಲಿ ಆದೇಶಿಸಲಿದ್ದಾರೆ.