Asianet Suvarna News Asianet Suvarna News

ಬೆಳಗಾವಿ ಗಡಿ ವ್ಯಾಜ್ಯ ಉಸ್ತುವಾರಿಗೆ ಸಚಿವರ ನೇಮಿಸಿ: ಸಿದ್ದರಾಮಯ್ಯ

ವಿಪಕ್ಷಗಳಿರುವ ಸಲಹಾ ಸಮಿತಿ ರಚಿಸಿ: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ

Appoint Minister in Charge of the Belagavi Border Dispute Says Siddaramaiah grg
Author
First Published Nov 24, 2022, 10:30 AM IST

ಬೆಂಗಳೂರು(ನ.24): ಬೆಳಗಾವಿ ಗಡಿ ವಿವಾದದ ನ್ಯಾಯಾಂಗ ಹೋರಾಟವನ್ನು ರಾಜ್ಯ ಸರ್ಕಾರ ತೀವ್ರವಾಗಿ ನಿರ್ಲಕ್ಷಿಸಿದೆ. ಗಡಿ ಸಂರಕ್ಷಣೆಗಾಗಿ ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್‌ರಚಿಸಬೇಕು. ಜತೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಾದಕ್ಕೆ ನಮ್ಮ ವಕೀಲರನ್ನು ಮತ್ತಷ್ಟು ಸನ್ನದ್ಧಗೊಳಿಸಬೇಕು ಎಂಬುದು ಸೇರಿದಂತೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ನ್ಯಾಯಾಂಗ ಹೋರಾಟದ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ತಕ್ಷಣ ಪ್ರತಿಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು ಸಲಹಾ ಸಮಿತಿ ರಚಿಸಬೇಕು. ಗಡಿ ವ್ಯಾಜ್ಯದ ಮೇಲುಸ್ತುವಾರಿಯನ್ನು ಹಿರಿಯ ಸಚಿವರಿಗೆ ಒಪ್ಪಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ಅವರು ಬುಧವಾರ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ವಿವರಗಳನ್ನು ಪತ್ರಿಕಾ ಹೇಳಿಕೆ ಮೂಲಕ ಬಿಡುಗಡೆ ಮಾಡಿದ್ದಾರೆ.

ಫಡ್ನವೀಸ್‌ ಕನಸು ನನಸಾಗುವುದಿಲ್ಲ : ಸಿಎಂ ಬೊಮ್ಮಾಯಿ ತಿರುಗೇಟು

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೀವು ಬರೆದಿರುವ ಪತ್ರ ತಲುಪಿದೆ. ಗಡಿ ವಿವಾದದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ನೀವು ತಡವಾಗಿ ಎಚ್ಚೆತ್ತುಕೊಂಡಿದ್ದೀರಿ. ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಚ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ಎದುರಿಸಲು ವಿರೋಧಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು 16 ಸದಸ್ಯರ ಸಲಹಾ ಸಮಿತಿಯನ್ನೂ ಕೂಡಾ ರಚಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಈ ಸಮಿತಿ ಈಗಾಗಲೇ ಸಭೆ ನಡೆಸಿ ನ್ಯಾಯಾಂಗದ ಹೋರಾಟಕ್ಕೆ ಕಾರ್ಯತಂತ್ರಗಳನ್ನು ರೂಪಿಸಿದೆ. ವ್ಯಾಜ್ಯದ ಮೇಲುಸ್ತುವಾರಿಗೆ ಇಬ್ಬರು ಸಚಿವರ ಸಮಿತಿಯನ್ನೂ ರಚಿಸಿದೆ. ಆದರೆ ನಿಮ್ಮ ನೇತೃತ್ವದಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದ್ದಾರೆ.

ಸುಪ್ರೀಂಕೋರ್ಟ್‌ ಗಡಿ ವಿವಾದದ ಮೊಕದ್ದಮೆ ವಿಚಾರಣೆ ನಡೆಯಲಿದ್ದರೂ ಇಲ್ಲಿಯವರೆಗೆ ರಾಜ್ಯ ಸರ್ಕಾರವು ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸುವ ಸೌಜನ್ಯವನ್ನೂ ತೋರಿಲ್ಲ. ಮುಖ್ಯಮಂತ್ರಿಗಳಾದ ನೀವು ನ.22 ರಂದು ವಕೀಲರ ಜತೆ ವಿಡಿಯೋ ಸಂವಾದ ನಡೆಸಿದ್ದೀರಿ. ನಾನು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಮಾಜಿ ಸಚಿವ ಎಚ್‌.ಕೆ. ಪಾಟಿಲ್‌ ಅವರನ್ನು ಗಡಿಭಾಗದ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದೆ. ಆದರೆ ಈಗಿನ ಸರ್ಕಾರದಲ್ಲಿ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸದೆ ನಿರ್ಲಕ್ಷ್ಯ ತೋರುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನಾ ಚಟುವಟಿಕೆ ಕಾಂಗ್ರೆಸ್‌ನ ಪಾಪದ ಕೂಸುಗಳು: ಶಾಸಕ ಪಿ.ರಾಜೀವ್ ಆರೋಪ

ಇಷ್ಟು ಮಾತ್ರವಲ್ಲ ಗಡಿ ಸಂರಕ್ಷಣಾ ಸಮಿತಿ ಕೂಡ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಭೆ ನಡೆಸದೆ ನಿಷ್ಕ್ರೀವಾಗಿದೆ. ನ್ಯಾ. ಕೆ.ಎಲ್‌. ಮಂಜುನಾಥ್‌ ಸೇರಿದಂತೆ ಸಮಿತಿಯ ಇಬ್ಬರು ಸದಸ್ಯರು ಮೃತರಾಗಿದ್ದಾರೆ. ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್‌ರಚಿಸುವ ಜತೆಯಲ್ಲಿ ಉನ್ನತಾಧಿಕಾರದ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದರೂ ಸ್ಪಂದಿಸಿಲ್ಲ.

ಮಹಾಜನ್‌ ವರದಿಗೆ ಬದ್ಧವಾಗಿರಬೇಕು:

ಕೇಂದ್ರ ಸರ್ಕಾರವೇ ನೇಮಿಸಿರುವ ಮಹಾಜನ ಆಯೋಗದ ವರದಿಯೇ ಅಂತಿಮ, ಆಯೋಗದ ಶಿಫಾರಸಿಗೆ ಕರ್ನಾಟಕ ಬದ್ದವಾಗಿದ್ದು ಅದಕ್ಕಿಂತ ಹೊರತಾದ ಯಾವುದೇ ಬದಲಾವಣೆಯನ್ನು ಕರ್ನಾಟಕ ಒಪ್ಪುವುದಿಲ್ಲ ಎನ್ನುವುದು ಈವರೆಗಿನ ಎಲ್ಲ ರಾಜ್ಯ ಸರ್ಕಾರಗಳ ನಿಲುವಾಗಿದೆ. ಗಡಿ ವಿವಾದವನ್ನು ತೀರ್ಮಾನಿಸಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ನ್ಯಾಯಾಲಯ ಅಲ್ಲ ಎನ್ನುವುದು ಕರ್ನಾಟಕ ಸರ್ಕಾರದ ನಿಲುವಾಗಿದೆ. ಕರ್ನಾಟಕಕ್ಕೆ ಸೇರಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಚ್‌ಗೆ ಮೊರೆ ಹೋದ ದಿನದಿಂದ ಇದು ನಮ್ಮ ನಿಲುವಾಗಿದೆ. ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಇದೇ ನಿಲುವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಈ ನಿಲುವಿಗೆ ಸರ್ಕಾರ ಬದ್ಧರಾಗಿ ಕಾನೂನು ಹೋರಾಟ ನಡೆಸಬೇಕು ಎಂಬುದಾಗಿ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios