ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯದ ಯಾವುದೇ ಎಪಿಎಂಸಿ, ಯಾವುದೇ ಭಾಗ ಇಲ್ಲವೇ, ದೇಶದ ಎಲ್ಲಿಯಾದರೂ ತಮಗೆ ಅನುಕೂಲವಾಗುವ ಬೆಲೆಯಲ್ಲಿ ಮಾರಾಟ ಮಾಡಲು ಎಪಿಎಂಸಿ ಕಾಯ್ದೆಗೆ ತಿದ್ದಪಡಿ ತರಲಾಗಿದೆ.

ವಿಧಾನ ಪರಿಷತ್‌(ಸೆ.21): ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ನೀಡುವ ಹಾಗೂ ಎಪಿಎಂಸಿ ಹೊರತುಪಡಿಸಿ ಬೇರೆಡೆ ಮಾರಾಟ ಮಾಡಿದರೆ ದಂಡ ವಿಧಿಸುವ ನಿಯಮ ರದ್ದು ಮಾಡುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯದ ಯಾವುದೇ ಎಪಿಎಂಸಿ, ಯಾವುದೇ ಭಾಗ ಇಲ್ಲವೇ, ದೇಶದ ಎಲ್ಲಿಯಾದರೂ ತಮಗೆ ಅನುಕೂಲವಾಗುವ ಬೆಲೆಯಲ್ಲಿ ಮಾರಾಟ ಮಾಡಲು ಎಪಿಎಂಸಿ ಕಾಯ್ದೆಗೆ ತಿದ್ದಪಡಿ ತರಲಾಗಿದೆ. ಅದೇ ರೀತಿ ಹಿಂದೆ ಎಪಿಎಂಸಿ ಹೊರತು ಪಡಿಸಿ ಬೇರೆಡೆ ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತಿತ್ತು. ಈಗ ನಿಯಮವನ್ನೇ ತೆಗೆದು ಹಾಕಲಾಗಿದೆ. ಈ ತಿದ್ದುಪಡಿಯಿಂದ ಒಬ್ಬನೇ ಒಬ್ಬ ರೈತ ತಮಗೆ ತೊಂದರೆಯಾಗಿದೆ ಎಂದು ಒಂದೇ ಒಂದು ದೂರು ಬಂದಿಲ್ಲ. ಹಾಗಾಗಿ ತಿದ್ದುಪಡಿ ಕಾಯ್ದೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

Mysuru: ದಸರಾ ಗೋಲ್ಡ್‌ ಕಾರ್ಡ್‌ ಬಗ್ಗೆ ಶೀಘ್ರದಲ್ಲೇ ತೀರ್ಮಾನ: ಸಚಿವ ಸೋಮಶೇಖರ್‌

ಅಧಿಕಾರ ಇಲ್ಲ:

ಕೃಷಿ ಉತ್ಪನ್ನಗಳ ಬೆಲೆ ಕುಸಿತದ ವೇಳೆ ಬೆಂಬಲ ಬೆಲೆಯಲ್ಲಿ ಖರೀದಿಸುವ ಬದಲು ಎಪಿಎಂಸಿ ಮಾರುಕಟ್ಟೆಯಲ್ಲಿ ವೈಜ್ಞಾನಿಕವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಗಳನ್ನು ನಿಗದಿಪಡಿಸಲು ಅವಕಾಶ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಯಾವುದೇ ಕೃಷಿ ಉತ್ಪನ್ನದ ಬೆಲೆ ಕಡಿಮೆಯಾದಾಗ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತದೆ. ಆದರೆ ರಾಜ್ಯದ ಮಾರುಕಟ್ಟೆಗಳಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಆದ ಸಂದರ್ಭದಲ್ಲಿ ಕೇಂದ್ರದ ಒಪ್ಪಿಗೆ ಪಡೆದು ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಸರ್ಕಾರವೇ ಖರೀದಿಸಲಿದೆ ಎಂದು ವಿವರಿಸಿದರು.