ಕಾಂಗ್ರೆಸ್‌ನವರ ರಕ್ತದ ಕಣಕಣದಲ್ಲೂ ಹಿಂದೂ ವಿರೋಧಿ ಭಾವನೆ ಇದೆ. ವಿಪಕ್ಷ ನಾಯಕ ಆರ್ ಅಶೋಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದರು.
ಚಿಕ್ಕಬಳ್ಳಾಪುರ (ಜ.1) : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದರು.
ಭಾನುವಾರ ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಎದುರು ಸೂಲಾಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀ ವೀರಾಂಜನೆಯಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೇ ಕಾಯಿ ಪರಿಷೆಯಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮುಸ್ಲಿಮರಿಗೆ 11 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಮಾಡಿದರು, ಶಾದಿ ಭಾಗ್ಯ ತಂದರು. ಅವರು ಹಿಂದೂ ವಿರೋಧಿ. ಅದಕ್ಕಾಗಿಯೇ ಇದೆಲ್ಲಾ ಮಾಡಿದ್ದಾರೆ ಎಂದರು.
ಕಾಂಗ್ರೆಸ್‌ನಿಂದ ಸ್ಪರ್ಧೆ ಸುಳ್ಳು; ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋಲ್ಲ: ಸೋಮಣ್ಣ ಸ್ಪಷ್ಟನೆ
ರಾಮರಾಜ್ಯ ಬಿಜೆಪಿ ಗುರಿ
ಶ್ರೀರಾಮ ಈ ಆದರ್ಶ ಪುರುಷ. ಕಳೆದ 30 ವರ್ಷಗಳಿಂದಲೂ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸುತ್ತಿದ್ದೆವು. ಆ ಪ್ರಕಾರ ಮಂದಿರ ಕಟ್ಟಿದ್ದೇವೆ. ಮಂದಿರ ಕಟ್ಟುವುದಷ್ಟೇ ಅಲ್ಲ ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿ ನಿಲುವು ಮತ್ತು ನಮ್ಮ ಗುರಿ ಎಂದರು.
ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ. ಕಾಂಗ್ರೆಸ್ ನವರಿಂದ ಹೆಚ್ಚಿಗೆ ಏನೂ ಬಯಸುವುದಿಲ್ಲ. ರಾಮ ಅನ್ನೋದು ಅವರ ಜನ್ಮದಲ್ಲೇ ಬರಲ್ಲ. ಅವರು ಟಿಪ್ಪು ಸಂಸ್ಕೃತಿಯವರು. ರಾಮಜಪ ಮಾಡಿದ ಕಾರಣಕ್ಕೆ ನಾವು ರಾಮಮಂದಿರ ನಿರ್ಮಿಸಿದೇವೆ. ಕಾಂಗ್ರೆಸ್‌ನವರು ರಾಮಮಂದಿರದ ಬಗ್ಗೆ ಮಾತನಾಡಿಲ್ಲ, ಹೋರಾಟ ಮಾಡಿಲ್ಲ. ನಮ್ಮ ಮೇಲೆ ಗುಂಡು ಹಾರಿಸಿದವರು, ಜೈಲಿಗೆ ಹಾಕುವವರು ಎಂದರು.
ಎತ್ತಿನಹೊಳೆಗೆ ಸರ್ಕಾರ ಹಣ ನೀಡಿಲ್ಲ
ಬಯಲು ಸೀಮೆಯ ಜಿಲ್ಲೆಗಳಿಗೆ ನೀರಿನ ದಾಹ ತೀರಿಸಲು ಎತ್ತಿನಹೊಳೆ ಯೋಜನೆಯನ್ನು ಬಿಜೆಪಿಯ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಆರಂಭಿಸಿದರು. ಅದು ನಮ್ಮ ಸರ್ಕಾರ ಇದ್ದಾಗ ಹೆಚ್ಚು ಅನುದಾನ ನೀಡಿದೆವು. ಆದರೆ ಈ ಸರ್ಕಾರ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರೀಸಬೇಕು ಎಂದು ಬಜೆಟ್ ನಲ್ಲಿ ಹಣ ಮೀಸಲಿಟ್ಟಿತ್ತು. ಆದರೆ ಈ ಸಿದ್ದರಾಮಯ್ಯ ಸರ್ಕಾರ ಮೂರನೇ ಹಂತದಲ್ಲಿ ಶುದ್ದೀಕರಿಸುವುದಕ್ಕೆ ಎಳ್ಳು ನೀರು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸೋಮಣ್ಣ ಪಕ್ಷ ಬಿಡುವುದಿಲ್ಲ
ಒಂದು ತಿಂಗಳಲ್ಲಿ ಬಿಜೆಪಿಯ ಎಲ್ಲಾ ಆಂತರಿಕ ಸಮಸ್ಯೆಗಳು ಪರಿಹಾರ ಆಗಲಿವೆ. ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಿ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಿಸಲಾಗುವುದು. ಮಾಜಿ ಸಚಿವ ವಿ. ಸೋಮಣ್ಣ ಬಿಜೆಪಿ ತೊರೆಯುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ವಿ. ಸೋಮಣ್ಣ ಅವರ ಜೊತೆ ಮಾತನಾಡಿದ್ದೇನೆ. ಅವರು ಸೋಲಿನ ನೋವುಗಳ ಬಗ್ಗೆ ಹೇಳಿದ್ದಾರೆ. ಪಕ್ಷದಲ್ಲಿಯೇ ಉಳಿಯುವ ತೀರ್ಮಾನ ಮಾಡಿದ್ದಾರೆ. ಜ.4ರಂದು ಅವರ ಮನೆಗೆ ಭೇಟಿ ನೀಡಿ ಮತ್ತೊಮ್ಮೆ ಮಾತುಕತೆ ನಡೆಸುವೆ ಎಂದರು.
ಪೊಲೀಸರು ಕಾಂಗ್ರೆಸ್ ಶಾಸಕರ ಮನೆಯ ಏಜೆಂಟ್ ತರ ಕೆಲಸ ಮಾಡುತ್ತಿದ್ದಾರೆ: ಮಾಜಿ ಶಾಸಕ ಪಿ ರಾಜೀವ್ ಆರೋಪ
ಯತ್ನಾಳ್ ಆರೋಪ ಮಾಡಿರುವ ಕೊರೋನಾ ಸಮಯದ 45 ಸಾವಿರ ಕೋಟಿ ಅವ್ಯವಹಾರದ ಬಗ್ಗೆ ಕೇಳಿದಾದ ಕೊರೋನಾ ಸಮಯದಲ್ಲಿ 5 ಸಾವಿರ ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿತ್ತು. ಇನ್ನು ಎಲ್ಲಿಂದ 45 ಸಾವಿರ ಕೋಟಿ ಅವ್ಯವಹಾರವಾಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಯತ್ನಾಳ ಅವರ ಬಗ್ಗೆ ಪಕ್ಷದ ಕೇಂದ್ರ ನಾಯಕರು ಗಮನಹರಿಸಿದ್ದಾರೆ ಎಂದರು.
ಈ ವೇಳೆ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ, ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮತ್ತಿತರರು ಇದ್ದರು.
ಸಿಕೆಬಿ-8 ಚಿಕ್ಕಬಳ್ಳಾಪುರ ನಗರದ ಶ್ರೀ ವೀರಾಂಜನೆಯಸ್ವಾಮಿ ದೇವಾಲಯ ಆವರಣದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಿಎಂ ಬಸವರಾಜ ಬೋಮ್ಮಾಯಿ ಕುಳಿತಿರುವುದು.