ಮತಾಂತರ ನಿಷೇಧ ಕಾಯ್ದೆ ಎನ್ನುವುದು ಒಂದು ಪಾಲಿಟಿಕಲ್ ಗಿಮಿಕ್ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ 

 ಮಂಗಳೂರು (ಡಿ.13): ಮತಾಂತರ ನಿಷೇಧ ಕಾಯ್ದೆ (Anti Conversion Bill) ಎನ್ನುವುದು ಒಂದು ಪಾಲಿಟಿಕಲ್ ಗಿಮಿಕ್ ಎಂದು ಮಾಜಿ ಸಚಿವ ಯು.ಟಿ (UT khader) ಖಾದರ್ ಅಸಮಾಧಾನ ಹೊರಹಾಕಿದ್ದಾರೆ. ಮಂಗಳೂರಿನಲ್ಲಿಂದು (Mangaluru) ಮಾತನಾಡಿದ ಕೈ ಮುಖಂಡ (Congress Leader) ಯುಟಿ ಖಾದರ್ ಇವರು ಎರಡು ವರ್ಷದಲ್ಲಿ ಬಡವರಿಗೆ ರೇಷನ್ ಕಾರ್ಡ್ (Ration Card), ಮನೆ ಕೊಟ್ಟಿಲ್ಲ. ಬಿಟ್ ಕಾಯಿನ್ (Bit Coin) ಹಗರಣದಲ್ಲಿ ಇಡೀ ಜಗತ್ತೇ ದೇಶದತ್ತ ಬೊಟ್ಟು ಮಾಡಿದರೂ ಇವರು ಮಾತನಾಡಲ್ಲ. ಬಿಟ್ ಕಾಯಿನ್ ದೇಶಕ್ಕೆ ಮಾಡಿದ ಹಾನಿಗಿಂತಲೂ ಮತಾಂತರ ಬಿಲ್ ಮುಖ್ಯನಾ ಎಂದು ಪ್ರಶ್ನೆ ಮಾಡಿದರು. 

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ (BJP) ಸರ್ಕಾರ ಜನರನ್ನ ದಾರಿ ತಪ್ಪಿಸಲು ಇದೆಲ್ಲಾ ಮಾಡುತ್ತಿದೆ. ಬಲವಂತದ ಮತಾಂತರಕ್ಕೆ ಯಾವ ಪಕ್ಷ ಮತ್ತು ಯಾವ ಧರ್ಮವೂ ಬೆಂಬಲಿಸಿಲ್ಲ. ಬಲವಂತದ ಮತಾಂತರಕ್ಕೆ ಈಗಾಗಲೇ ಐಪಿಸಿ ಸೆಕ್ಷನ್ (IPC section) ನಡಿ ಕಾನೂನು ಇದೆ. ಕ್ರಿಸ್ ಮಸ್ ಹಬ್ಬದ ಹೊತ್ತಲ್ಲಿ ಈ ಗೊಂದಲ ಸೃಷ್ಟಿಸುತ್ತಾ ಇದ್ದಾರೆ. ಬ್ರಿಟಿಷರು (British)ಇದ್ದಾಗಲೇ ಈ ದೇಶದಲ್ಲಿ ಸನಾತನ ಹಿಂದೂ ಧರ್ಮ (Hindu) ಇದೆ. ಆಗಲೇ ಯಾರಿಗೂ ಅದನ್ನ ಬದಲಿಸಲು ಆಗಿಲ್ಲ, ಜನರೇ ಅದನ್ನ ಉಳಿಸಿಕೊಂಡು ಬರುತ್ತಾರೆ ಎಂದು ಖಾದರ್ (khader) ಹೇಳಿದರು. 

ನೀವು ತಂದ ಗೋ ಹತ್ಯೆ ಕಾನೂನು ಸಂಪೂರ್ಣ ವಿಫಲವಾಗಿದೆ, ಅದನ್ನ ಗೃಹ ಸಚಿವರೇ ಒಪ್ಪಿದ್ದಾರೆ. ಕಾನೂನು ಬರುವುದು ಮುಖ್ಯವಲ್ಲ, ಅದನ್ನ ಜಾರಿಗೆ ತರುವ ಅಧಿಕಾರಿಗಳು ಬೇಕು ಎಂದರು.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಶೈಕ್ಷಣಿಕ ಮತ್ತು ಆರೋಗ್ಯ (Health) ವಿಚಾರದಲ್ಲಿ ಸ್ವರ್ಗ. 120 ವರ್ಷಗಳ ಹಿಂದೆ ಕ್ರೈಸ್ತ ಮಿಷನರಿಗಳು ಶೈಕ್ಷಣಿಕ, ಆರೋಗ್ಯ ಕೇಂದ್ರ ಸ್ಥಾಪಿಸಿದ ಕಾರಣ ಇದು ಸ್ವರ್ಗವಾಗಿದೆ. ಅವರ ನಂತರ ಬೇರೆ ಬೇರೆ ಧರ್ಮದವರು ಇದನ್ನೆಲ್ಲಾ ಸ್ಥಾಪಿಸಿದರು. ಆ ಹೊತ್ತಲ್ಲಿ ಕುಷ್ಠ ರೋಗ ಬಂದಾಗಲೂ ಎಲ್ಲರೂ ಕ್ರೈಸ್ತರ ಆಸ್ಪತ್ರೆಗಳಿಗೆ (Hospital) ಹೋಗುತ್ತಿದ್ದರು ಎಂದು ಹೇಳಿದರು. 

ಮಾರ್ಗನ್ಸ್ ಗೇಟ್ ಮತಾಂತರ ಕೇಸ್ನಲ್ಲೂ ಮೂವರ ಕೊಲೆ, ಒಂದು ಆತ್ಮಹತ್ಯೆ ಆಗಿದೆ. ಅವನು ಮೂವರನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನ ನಾವು ನಾಲ್ವರ ಆತ್ಮಹತ್ಯೆ ಅಂತ ಹೇಳಲು ಆಗುವುದಿಲ್ಲ. ಇದರಲ್ಲಿ ಯಾರ ತಪ್ಪಿದ್ದರೂ ಅವರಿಗೆ ಕಾನೂನು ‌ಪ್ರಕಾರ ಶಿಕ್ಷೆಯಾಗಲಿ ಎಂದು ಮಾಜಿ ಸಚಿವ ಖಾದರ್ ಹೇಳಿದರು. 

ರಾವತ್ ಸಾವು ಸಂಭ್ರಮಿಸಿದ ವಿಚಾರ : ಜನರಲ್ ಬಿಪಿನ್ ರಾವತ್ (Bipin Rawat) ಸಾವು ಸಂಭ್ರಮಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ.ಖಾದರ್ ಸಾವಿನಲ್ಲಿ ಸಂಭ್ರಮಿಸುವ ವಿಕೃತಿಯನ್ನು ಬಲವಾಗಿ ಖಂಡಿಸುತ್ತೇನೆ. ಈ ರೀತಿ ಗೊಂದಲ ಸೃಷ್ಟಿಸುವವರ ವಿರುದ್ದ ಬಿಜೆಪಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. 

ಅವರ ಮುಖವಾಡ ಬಯಲು ಮಾಡಿ ಗಡಿಪಾರು ಮಾಡುವ ಕೆಲಸ ಮಾಡಲಿ. ಈ ಬಗ್ಗೆ ಬಿಜೆಪಿ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಮಾತನಾಡದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದರು.

ಈ ಹಿಂದೆ ಮಾಜಿ ಐಎಎಸ್ (IAS) ಅಧಿಕಾರಿ ಸೆಂಥಿಲ್ ರಾಜೀನಾಮೆ ಕೊಟ್ಟಾಗ ಅವರನ್ನು ಬಿಜೆಪಿಗರು ದೇಶದ್ರೋಹಿ ಅಂದಿದ್ದರು. ಆದರೆ ಈಗ ಯಾವೊಬ್ಬ ಬಿಜೆಪಿ ನಾಯಕನೂ ರಾವತ್ ಅವರ ಸಾವನ್ನು ಸಂಭ್ರಮಿಸುತ್ತಿರುವವರ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ರಾಜ್ಯದ ಗೃಹ ಸಚಿವರು ಮತ್ತು ಡಿಜಿಪಿ ಉತ್ತರ ಕೊಡಲಿ. ಅಂಥವರ ವಿರುದ್ದ ಕ್ರಮ ಕೈಗೊಳ್ಳಲು ಯಾರು ಇವರ ಕೈ ಕಟ್ಟಿ ಹಾಕಿದ್ದಾರೆ ಎಂದು ಖಾದರ್ ಪ್ರಶ್ನೆ ಮಾಡಿದರು. 

ಜನರಲ್ ರಾವತ್ ಅವರ ಸಾವಿನ ಸಂಬಂಧ ವಿಕೃತಿ ಮೆರೆದವರ ವಿರುದ್ಧ ಕೇಸು ಹಾಕಿದರೆ ಮುಗಿಯಲ್ಲ. ಮಾಧ್ಯಮದ ಮೂಲಕ ಅವರ ಮುಖ ತೋರಿಸಿ. ಈ ಕೆಲಸ ತಕ್ಷಣವೇ ಸರ್ಕಾರದಿಂದ ಅಗಲೇ ಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಿ ನಾಲ್ಕೈದು ದಿ‌ನ ಆಗಿದೆ. ಆದರೂ ಕ್ರಮ ಆಗಿಲ್ಲ. ಅವರು ಮೂರು ಸೇನೆಯ ಮುಖ್ಯಸ್ಥ, ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ನನಗೆ ಅಂಥ ವಿಕೃತ ಮನಸ್ಸಿನವನ ಮುಖ ನೋಡಬೇಕು ಎಂದರು.

 ಈ ದೇಶದ ಅತ್ಯುನ್ನತ ಸ್ಥಾನದಲ್ಲಿರುವವರು ಹೆಲಿಕಾಪ್ಟರ್ ದುರಂತಕ್ಕೀಡಾದ ಕಾರಣ ಸರ್ಕಾರ ತಿಳಿಸಬೇಕು. ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು. ಬೇರೆ ದೇಶಗಳಲ್ಲಿ ಆಗಿದ್ದರೆ ಅಲ್ಲಿನ ರಕ್ಷಣಾ ಸಚಿವರೇ ರಾಜೀನಾಮೆ ಕೊಡುತ್ತಿದ್ದರು. ಆದರೆ ಇಲ್ಲಿ ಮಾತ್ರ ಅದನ್ನ ದೊಡ್ಡ ವಿಚಾರವಾಗಿ ತೆಗೆದುಕೊಂಡಿಲ್ಲ. ಏರ್ ಪೋರ್ಸ್ ಮುಖ್ಯಸ್ಥರನ್ನೇ ಈ ವಿಚಾರದಲ್ಲಿ ತನಿಖೆ ನಡೆಸಲಿ ಎಂದು ಖಾದರ್ ಆಗ್ರಹಿಸಿದರು.