ಶಾಲಾ ಮಕ್ಕಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ ಆರೋಪಿ ಬಂಧನ|ಪೋಷಕರು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಇತರೆ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು| ಕಾರ್ಯಾಚರಣೆ ನಡೆಸಿ ಆರೋಪಿ ಬಂಧನ| ಆರೋಪಿಗೆ ಯಾರಿಂಗ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ| 

ಬೆಂಗಳೂರು(ಆ.29): ಸಾಫ್ಟ್‌ವೇರ್‌ ಉದ್ಯೋಗಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದ ಮಾದಕ ದ್ರವ್ಯ ಜಾಲದ ದಂಧೆಕೋರರು ಇದೀಗ ಪ್ರತಿಷ್ಠಿತ ಶಾಲೆಯ ಹದಿಹರೆಯದ ಶಾಲಾ ಮಕ್ಕಳ ಬೆನ್ನು ಬಿದಿದ್ದು, 14 ವರ್ಷದ ವರ್ಷದ ಬಾಲಕನೊಬ್ಬನಿಗೆ ಕೊರಿಯರ್‌ ಮೂಲಕ ಗಾಂಜಾ ಪೂರೈಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಗಾಂಜಾ ಪೂರೈಕೆ ಮಾಡಿದ್ದ ಪೆಡ್ಲರ್‌ ದೀರಜ್‌ ಕಪೂರ್‌ (32) ಎಂಬಾತನನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕ ಡ್ರಗ್ಸ್‌ ವ್ಯಸನಿಯಾಗಿದ್ದ ಎಂಬ ಆಘಾತಕಾರಿ ಅಂಶ ಕೂಡ ಇದೇ ವೇಳೆ ಬೆಳಕಿಗೆ ಬಂದಿದೆ.

ಕಿರುತೆರೆ ನಟಿಯ ಡ್ರಗ್ಸ್‌ ಮಾಫಿಯಾ; ಸ್ಟಾರ್‌ ನಟರ ಹೆಸರು ರಿವೀಲ್?

ದೀರಜ್‌ ಕಪೂರ್‌ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಡ್ರಗ್ಸ್‌ ವ್ಯಸನಿಯೂ ಆಗಿದ್ದ. ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗ್ರಾಹಕರನ್ನಾಗಿ ಮಾಡಿಕೊಂಡು ಗಾಂಜಾ ಪೂರೈಕೆ ಮಾಡುತ್ತಿದ್ದ. ಹದಿಹರೆಯದ ಬಾಲಕರನ್ನು ಬಳಸಿಕೊಳ್ಳಲು ಯತ್ನಿಸಿದ್ದ ಆರೋಪಿ ಶ್ರೀಮಂತರ ಮಕ್ಕಳಿಗೆ ಗಾಂಜಾ ಆಮಲು ತಗುಲುವಂತೆ ನೋಡಿಕೊಂಡಿದ್ದ. ಹೀಗೆ ಸದಾಶಿವನಗರ ನಿವಾಸಿಯೊಬ್ಬರ ಪುತ್ರನಿಗೆ ಆರೋಪಿ ಆ.15ರಂದು ಕೊರಿಯರ್‌ ಮೂಲಕ ಪಾರ್ಸಲ್‌ ಕಳುಹಿಸಿದ್ದ.

ಬಾಲಕನ ತಂದೆ ಪಾರ್ಸಲ್‌ ತೆಗೆದು ನೋಡಿದಾಗ ಗಾಂಜಾ ಇರುವುದು ಕಂಡು ಬಂದಿದೆ. ಪಾರ್ಸಲ್‌ ಮೇಲಿದ್ದ ವಿಳಾಸವನ್ನು ಪರಿಶೀಲನೆ ನಡೆಸಿದಾಗ ದೀರಜ್‌ ಕಪೂರ್‌ ಎಂಬಾತ ಪೂರೈಕೆ ಮಾಡಿರುವುದು ಗೊತ್ತಾಗಿದೆ. ನಗರದ ಪ್ರತಿಷ್ಠಿತ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುತ್ರನನ್ನು ಕೇಳಿದರೆ ನನಗೂ ಅದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತನೆ ತೋರಿದ್ದಾನೆ. ಪುತ್ರನ ಭವಿಷ್ಯದ ಬಗ್ಗೆ ಆತಂಕಗೊಂಡ ಬಾಲಕನ ತಂದೆ ಕಬ್ಬನ್‌ಪಾರ್ಕ್ ಠಾಣೆಗೆ ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ದೀರಜ್‌ ಕಪೂರ್‌ ಕೆಲ ತಿಂಗಳಿಂದ ಮಾದಕ ದ್ರವ್ಯ ಸಾಗಾಟ ಜಾಲತದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈತನಿಗೆ ಯಾರಿಂಗ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಾಲಕ ವ್ಯಸನಿಯಾಗಿದ್ದ ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಕ್ಕಳ ಬಗ್ಗೆ ಎಚ್ಚರದಿಂದಿರಿ!

ಪೋಷಕರು ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುವುದರ ಜತೆಗೆ ಅವರ ನಿತ್ಯ ಚಲನವಲನದ ಬಗ್ಗೆ ಗಮನ ಹರಿಸಬೇಕು. ಶ್ರೀಮಂತರ ಮಕ್ಕಳನ್ನು ದಂಧೆಕೋರರು ಟಾರ್ಗೆಟ್‌ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದ್ದು, ಪೋಷಕರು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಇತರೆ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಕಬ್ಬನ್‌ ಪಾರ್ಕ್ ಇನ್ಸ್‌ಪೆಕ್ಟರ್‌ ಭರತ್‌ ಮನವಿ ಮಾಡಿದ್ದಾರೆ.