ಅಂಜನಾದ್ರಿ ಕ್ಷೇತ್ರವನ್ನು ಪ್ರವಾಸೋದ್ಯಮ‌, ಪೌರಾಣಿಕ ಹಾಗೂ ಅಧ್ಯಾತ್ಮಿಕ ಮಹತ್ವ ತಿಳಿಸುವ ರೀತಿ ಅಭಿವೃದ್ಧಿ ಪಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು (ಸೆ.04): ಕೊಪ್ಪಳ ಜಿಲ್ಲೆಯ ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 200 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದ್ದು, ಕ್ಷೇತ್ರವನ್ನು ಪ್ರವಾಸೋದ್ಯಮ‌, ಪೌರಾಣಿಕ ಹಾಗೂ ಅಧ್ಯಾತ್ಮಿಕ ಮಹತ್ವ ತಿಳಿಸುವ ರೀತಿ ಅಭಿವೃದ್ಧಿ ಪಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಕಾವೇರಿ ನಿವಾಸದಲ್ಲಿ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಅವರು, ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಲ್ಲೂ ಉತ್ತರ ಭಾರತದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬರುತ್ತಾರೆ. ವಯಸ್ಕರೂ ಬೆಟ್ಟದ ತುದಿಗೆ ತಲುಪಲು ಅಗತ್ಯ ಸವಲತ್ತು ಕಲ್ಪಿಸುವುದು ಹಾಗೂ ಇದಕ್ಕಾಗಿ ಪ್ರದಕ್ಷಿಣೆ ಮಾರ್ಗ ನಿರ್ಮಿಸಬೇಕಿದೆ. ಯಾತ್ರಿಕರು ಉಳಿದುಕೊಳ್ಳಲು ಡಾರ್ಮೆಟರಿ ವ್ಯವಸ್ಥೆ, ಹಿರಿಯ ಭಕ್ತಾದಿಗಳು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ, ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತಮುತ್ತ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು. ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಬೇಕಿದ್ದು, ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.

ಕ್ಷೇತ್ರಕ್ಕೆ ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ಕಾಗಿ ಹಂತ-1 ಮತ್ತು ಹಂತ-2ರಲ್ಲಿ 200 ಕೋಟಿ ರು. ಕಾಮಗಾರಿಗಳು ಮಂಜೂರಾಗಿದ್ದು, ಈವರೆಗೆ ಕಾಮಗಾರಿಗಳಿಗೆ 10 ಕೋಟಿ ರು. ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಬೇಕಿರುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಯವರ ಗಮನಕ್ಕೆ ತಂದರು.

ಅಲ್ಲದೆ, ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಿ ಜಮೀನು ಕೊರತೆ ಇರುವುದರಿಂದ, ಪ್ರಸ್ತಾಪಿಸಿರುವ 77.28 ಖಾಸಗಿ ಜಮೀನನ್ನು ಅನುದಾನದ ಕೊರತೆಯಿರುವುದರಿಂದ ಈವರೆಗೂ ಭೂ-ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ, ಹೆಚ್ಚುವರಿ ಜಮೀನು ಒಳಗೊಂಡಂತೆ ಒಟ್ಟು 101 ಎಕರೆ 30ಗುಂಟೆ ಖಾಸಗಿ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಒದಗಿಸಬೇಕಿರುತ್ತದೆ ಎಂದು ಕೂಡ ವಿವರಿಸಿದರು. ಇದಕ್ಕೆ ಮುಖ್ಯಮಂತ್ರಿ ಅವರು, ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಹಾಗೂ ಭೂಸ್ವಾಧೀನಕ್ಕೆ ಬೇಕಿರುವ ಅನುದಾನ ಒದಗಿಸಲು ಹಂತ ಹಂತವಾಗಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಮಧ್ಯೆ, 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅಂಜನಾದ್ರಿ ಬೆಟ್ಟವೂ ಒಳಗೊಂಡಂತೆ ರಾಜ್ಯದ 11 ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆ ನೀಡಿರುವುದು ಗಮನಾರ್ಹ. ಸಭೆಯಲ್ಲಿ ಕಾನೂನು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.