‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇರುವ ತನಕ ಹಾಗೂ ಪಕ್ಷದ ನೇತೃತ್ವ ವಹಿಸಿಕೊಂಡಿರುವವರೆಗೆ ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯಲ್ಲ’ ಎಂದು ಪದಚ್ಯುತ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ತುಮಕೂರು (ಸೆ.04): ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇರುವ ತನಕ ಹಾಗೂ ಪಕ್ಷದ ನೇತೃತ್ವ ವಹಿಸಿಕೊಂಡಿರುವವರೆಗೆ ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯಲ್ಲ’ ಎಂದು ಪದಚ್ಯುತ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಮಧುಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜಣ್ಣ ಬಿಜೆಪಿಗೆ ಹೋಗೋದು ನೂರಕ್ಕೆ ನೂರು ಸತ್ಯ’ ಎಂಬ ತಮ್ಮದೇ ಪಕ್ಷದ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದರು. ‘ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಯಾವನು ಹೇಳಿದ್ದು? ಅವನು ಹೇಳೋದು ಹೇಳಿಕೊಳ್ಳಲಿ, ಅವನೇ ಬೇಕಾದರೂ ಬ್ರೈನ್‌ ಮ್ಯಾಪಿಂಗ್ ಮಾಡಿಕೊಳ್ಳಲಿ’ ಎಂದು ಏಕವಚನದಲ್ಲಿ ತಿರುಗೇಟು ನೀಡಿದರು.

‘ನಾನ್ಯಾಕೆ ಬಿಜೆಪಿಗೆ ಹೋಗಲಿ. ನಾನ್ಯಾಕೆ ಪಕ್ಷ ಬಿಡಲಿ. ಪಕ್ಷ ನನಗೇನು ಕಡಿಮೆ ಮಾಡಿದೆ? ಸಿದ್ದರಾಮಯ್ಯ ಸಿಎಂ ಆಗಿ ಇರುವ ತನಕ ಹಾಗೂ ಪಕ್ಷದ ನೇತೃತ್ವ ವಹಿಸಿಕೊಂಡಿರುವವರೆಗೆ ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಅವರು ಪಕ್ಷದಲ್ಲಿ ಇರುವವರೆಗೂ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯನವರ ಕೈಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಇರೋವರೆಗೂ ನನ್ನ ಭವಿಷ್ಯಕ್ಕೆ ಏನೂ ತೊಂದರೆ ಇಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯಲ್ಲ’ ಎಂದರು. ರಾಹುಲ್‌ ಗಾಂಧಿ ನಡೆಸುತ್ತಿರುವ ಮತ ಕಳ್ಳತನ ಹೋರಾಟವನ್ನು ಬೆಂಬಲಿಸುತ್ತೇನೆ ಎಂದೂ ಅವರು ಸ್ಪಷ್ಟಪಡಿಸಿದರು. ಮತಗಳ್ಳತನ ವಿರೋಧಿ ಹೋರಾಟದ ವಿರುದ್ಧ ಮಾತನಾಡಿದ್ದಕ್ಕೇ ರಾಜಣ್ಣ ವಜಾ ಆಗಿದ್ದು ಇಲ್ಲು ಗಮನಾರ್ಹ.

ಮತ್ತೆ ಸಚಿವಗಿರಿಗೆ ಇಂಗಿತ: ‘ದೆಹಲಿಗೆ ತೆರಳಿ, ವರಿಷ್ಠರನ್ನು ಭೇಟಿ ಮಾಡಿ, ನನ್ನನ್ನು ಮತ್ತೆ ಸಚಿವನನ್ನಾಗಿ ಮಾಡಲು ಒತ್ತಾಯಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ’ ಎಂದೂ ರಾಜಣ್ಣ ಹೇಳಿದರು. ‘ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಮೋಸ ಮಾಡಿಲ್ಲ. ಆದರೂ ಸಚಿವ ಸ್ಥಾನ ಕಳೆದುಕೊಂಡೆ. ಹಾಗಂತ ನನಗೆ ಬೇಸರ ಇಲ್ಲ. ನನ್ನ ಮಂತ್ರಿ ಸ್ಥಾನ ಹೋದರೂ ನಿಮ್ಮ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ನಿಮ್ಮ ಕೆಲಸ ಮಾಡಲು ಸಚಿವ ಸ್ಥಾನ ಇರಬೇಕು ಅಂತೇನಿಲ್ಲ. 35,500 ಮತಗಳ ಲೀಡ್ ನಲ್ಲಿ ಗೆದ್ದಿದ್ದೇನೆ. ಈಗ ಚುನಾವಣೆ ನಡೆದರೂ ಹಿಂದಿಗಿಂತ ಹೆಚ್ಚು ಲೀಡಲ್ಲಿ ಗೆಲ್ಲುತ್ತೇನೆ. ನಾನು ಎಲ್ಲೇ ನಿಲ್ಲಲಿ, ಯಾವುದೇ ಪಕ್ಷದಿಂದ ನಿಲ್ಲಲಿ, ಗೆಲ್ಲುತ್ತೇನೆ. ಪಕ್ಷೇತರನಾಗಿ ಸ್ಪರ್ಧಿಸಿದರೂ ಗೆಲ್ಲುವ ಸಾಮರ್ಥ್ಯವಿದೆ. ಹಾಗಂತ ಕಾಂಗ್ರೆಸ್‌ ಬಿಡುವ ಪ್ರಶ್ನೆ ಇಲ್ಲ’ ಎಂದರು.

ಅಪೆಕ್ಸ್‌ ಬ್ಯಾಂಕ್‌ಗೂ ಪಕ್ಷ ರಾಜಕೀಯಕ್ಕೂ ನಂಟಿಲ್ಲ: ‘ನಾನು ಕಾಂಗ್ರೆಸ್ಸಿಗ, ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನಾನು ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷನಾಗಿದ್ದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ, ಬಿಜೆಪಿಗರು ಅಧ್ಯಕ್ಷರಾಗಿದ್ದಾರೆ. ಇದಕ್ಕೂ, ಸರ್ಕಾರಕ್ಕೂ ಸಂಬಂಧ ಇಲ್ಲ. ಇದೊಂದು ಸಂಸ್ಥೆ ಅಷ್ಟೆ. ಹಾಗಿದ್ದರೆ, ಜೆಡಿಎಸ್‌ನ ಜಿ.ಟಿ.ದೇವೇಗೌಡರು ಯಾಕೆ ಕೋ- ಆಪರೇಟಿವ್ ಫೆಡರೇಷನ್ ನಲ್ಲಿ ಇದ್ದಾರೆ?’ ಎಂದು ಪ್ರಶ್ನಿಸಿದರು.