ಕಾವೇರಿ ಎಸ್‌.ಎಸ್‌.

 ಬೆಂಗಳೂರು [ಮಾ.01]:   ಅಂಗನವಾಡಿ ದಾಖಲಾತಿ, ಮಕ್ಕಳ ಅಪೌಷ್ಟಿಕತೆಯ ನಿಖರ ಸಂಖ್ಯೆ, ಟಿ.ಟಿ. ಚುಚ್ಚುಮದ್ದು ಸೇರಿದಂತೆ ವಿವಿಧ ಮಾಹಿತಿಯನ್ನು ಸಕಾಲಕ್ಕೆ ನೀಡಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ 66 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ‘ಸ್ಮಾರ್ಟ್‌ ಫೋನ್‌’ ನೀಡಲು ಉದ್ದೇಶಿಸಿದೆ.

ರಾಜ್ಯದಲ್ಲಿ 62,580 ಅಂಗನವಾಡಿ, 3,331 ಮಿನಿ ಅಂಗನವಾಡಿ ಕೇಂದ್ರಗಳಿದ್ದು, ಒಟ್ಟಾರೆ 66 ಸಾವಿರ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಪೋಷಣ್‌ ಅಭಿಯಾನ ಯೋಜನೆ’ಯಡಿ ಎಲ್ಲ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ನೀಡಲು ಸುಮಾರು 129 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. 19 ಜಿಲ್ಲೆಗಳ 42 ಸಾವಿರ ಕಾರ್ಯಕರ್ತರಿಗೆ ಪ್ರಾಥಮಿಕ ಹಂತದಲ್ಲಿ ಹಾಗೂ ಇತರೆ 11 ಜಿಲ್ಲೆಗಳ 24 ಸಾವಿರ ಕಾರ್ಯಕರ್ತೆಯರಿಗೆ ಎರಡನೇ ಹಂತದಲ್ಲಿ ಫೋನ್‌ಗಳನ್ನು ವಿತರಿಸಲಿದೆ. ಮಾಚ್‌ರ್‍ ತಿಂಗಳಾಂತ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಎಲ್ಲಾ ಕಾರ್ಯಕರ್ತೆಯರ ಕೈ ಸೇರಲಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಯಾಮ್‌ಸಂಗ್‌ ಕಂಪನಿಯ ಎ10 ಎಸ್‌ ಸ್ಮಾರ್ಟ್‌ಫೋನ್‌ನಲ್ಲಿ ‘ಸ್ನೇಹ ಅಪ್ಲಿಕೇಶನ್‌’ ಹಾಗೂ ಟ್ರ್ಯಾಕಿಂಗ್‌ ಸಿಸ್ಟಮ್‌ ಅಳವಡಿಸಲಾಗುತ್ತದೆ. ಒಂದು ಸ್ಮಾರ್ಟ್‌ಫೋನ್‌ನ ಬೆಲೆ 10 ಸಾವಿರ ರು. ಆಗಿದ್ದು, ಪ್ರತಿ ಜಿಲ್ಲೆಯ ಕಾರ್ಯಕರ್ತೆಯರಿಗೂ ಹಂಚಿಕೆಯಾಗಲಿದೆ.

ಫೋನ್‌ ಜತೆ ಪವರ್‌ ಬ್ಯಾಂಕ್‌:

ಎ10 ಎಸ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ 10,000 ಎಂಎಎಚ್‌ ಬ್ಯಾಟರಿಯ ಪವರ್‌ ಬ್ಯಾಂಕ್‌ ಸಹ ನೀಡಲು ಇಲಾಖೆ ಮುಂದಾಗಿದೆ. ಮೊಬೈಲ್‌ನಲ್ಲಿ 32 ಜಿ.ಬಿ. ಮೆಮೊರಿ ಕಾರ್ಡ್‌ ಕೂಡ ಇರಲಿದೆ. ಇಲಾಖೆಯಿಂದಲೇ ಸಿಮ್‌ ಕಾರ್ಡ್‌ ನೀಡಲಿದ್ದು, ಪ್ರತಿ ತಿಂಗಳು ಇಂಟರ್‌ನೆಟ್‌ ಬಿಲ್‌ ಅನ್ನು ಇಲಾಖೆಯೇ ಭರಿಸಲಿದೆ. ಫೋನ್‌ಗಳು ಜಿಲ್ಲಾಧಿಕಾರಿ ಮೂಲಕ ವಿತರಣೆಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪೌಷ್ಟಿಕ ಮಕ್ಕಳ ನಿಖರ ಮಾಹಿತಿ ಲಭ್ಯ

ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿಯೂ ‘ಸ್ನೇಹ ಆ್ಯಪ್‌’ ಅಳವಡಿಸಲಾಗುವುದು. ಕಾರ್ಯಕರ್ತೆಯರು ಅಂಗನವಾಡಿ ಎಷ್ಟುಗಂಟೆಗೆ ಆರಂಭವಾಯಿತು, ಎಷ್ಟುಗಂಟೆಗೆ ಬಾಗಿಲು ಹಾಕಲಾಯಿತು, ಹಾಜರಿರುವ ಮಕ್ಕಳ ಸಂಖ್ಯೆ ಮತ್ತು ಮಕ್ಕಳ ಹೆಸರನ್ನು ಆ್ಯಪ್‌ನಲ್ಲಿ ನೋಂದಣಿ ಮಾಡಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಪ್‌ನಲ್ಲಿ ಪ್ರತಿಯೊಂದು ಮಗುವಿನ ಹೆಸರಿನಲ್ಲಿ ಖಾತೆ ತೆರೆದು ಆ ಮಗುವಿಗೆ ಪ್ರತಿ ತಿಂಗಳು ವೈದ್ಯಕೀಯ ಪರೀಕ್ಷೆ, ತೂಕ, ಎತ್ತರ ಇನ್ನಿತರೆ ಮಾಹಿತಿಗಳನ್ನು ದಾಖಲಿಸಬೇಕು. ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡ್‌ ವಿತರಿಸಿ, ಹುಟ್ಟುವ ಮಗುವಿಗೆ 6 ವರ್ಷದವರೆಗೆ ಇಲಾಖೆಯಿಂದ ಚುಚ್ಚುಮದ್ದು ನೀಡಲಾಗುತ್ತದೆ. ಆದ್ದರಿಂದ ಆ ಮಗುವಿಗೆ ಯಾವ ವರ್ಷದಲ್ಲಿ ಏನೆಲ್ಲ ಚುಚ್ಚುಮದ್ದು ಹಾಕಲಾಯಿತು. ಮಗುವಿನ ಬೆಳವಣಿಗೆಯ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಮಾತೃಪೂರ್ಣ, ಮಾತೃವಂದನ, ಮಾತೃಶ್ರೀ ಸೇರಿದಂತೆ 40 ಬಗೆಯ ಕಡತಗಳನ್ನು ಈ ಆ್ಯಪ್‌ನಲ್ಲೇ ನಿರ್ವಹಣೆ ಮಾಡಬಹುದು. ಮುಖ್ಯವಾಗಿ ಅಪೌಷ್ಟಿಕತೆಯುಳ್ಳ ಮಕ್ಕಳ ನಿಖರ ಅಂಕಿ ಅಂಶ ಲಭ್ಯವಾಗಲಿದೆ. ಇದರಿಂದ ಅಪೌಷ್ಟಿಕತೆ ನಿವಾರಣೆಗೆ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

 ಮಾರ್ಚ್ ಅಂತ್ಯದೊಳಗೆ ಎಲ್ಲರಿಗೂ ವಿತರಣೆ

ಫೋನ್‌ ಬಳಕೆ ಮತ್ತು ಸ್ನೇಹ ಆ್ಯಪ್‌ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಚೀನಾದಲ್ಲಿ ಕೊರೊನಾ ವೈರಸ್‌ ಕಂಡುಬಂದಿದ್ದರಿಂದ ಪೂರೈಕೆಯಲ್ಲಿ ತೊಡಕುಂಟಾಯಿತು. ಮಾರ್ಚ್ ಎರಡನೇ ವಾರದಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ವಿತರಣೆ ಕಾರ್ಯ ಆರಂಭವಾಗಲಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲ ಕಾರ್ಯಕರ್ತೆಯರಿಗೆ ಫೋನ್‌ ವಿತರಿಸಲಾಗುವುದು. ಇದರಿಂದ ಅಂಗನವಾಡಿಗಳಲ್ಲಿ ಎಷ್ಟುಮಕ್ಕಳಿದ್ದಾರೆ, ಮಗುವಿನ ಆರೋಗ್ಯ ಸ್ಥಿತಿಗತಿ ಬಗ್ಗೆ ಸಮಗ್ರ ಮಾಹಿತಿ ತಿಳಿಯಲಿದೆ.

- ಕೆ.ಎ.ದಯಾನಂದ, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ