ರಾಜಕೀಯ ಬಿಟ್ಟ ಮಾಜಿ ಸಂಸದ ಅನಂತ ಹೆಗಡೆ ಈಗ ಗ್ರೀನ್ ನ್ಯಾನೋ ಟೆಕ್ ಉದ್ಯಮಿ
ಆರು ಬಾರಿಯ ಸಂಸದ, ಕೇಂದ್ರದ ಮಾಜಿ ಸಚಿವ ಹಾಗೂ ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾದ ಅನಂತಕುಮಾರ್ ಹೆಗಡೆ ರಾಜಕೀಯದಿಂದ ದೂರವಾಗಿ ಈಗ ಏನು ಮಾಡುತ್ತಿದ್ದಾರೆ? ಅವರೀಗ ಸದ್ದಿಲ್ಲದೆ ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ!
ಬೆಂಗಳೂರು (ಜ.06): ಆರು ಬಾರಿಯ ಸಂಸದ, ಕೇಂದ್ರದ ಮಾಜಿ ಸಚಿವ ಹಾಗೂ ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾದ ಅನಂತಕುಮಾರ್ ಹೆಗಡೆ ರಾಜಕೀಯದಿಂದ ದೂರವಾಗಿ ಈಗ ಏನು ಮಾಡುತ್ತಿದ್ದಾರೆ? ಅವರೀಗ ಸದ್ದಿಲ್ಲದೆ ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ! ಕದಂಬ ಸಂಸ್ಥೆಯಡಿ ಗ್ರೀನ್ ನ್ಯಾನೋ ಪಿತಾಮಹ ಎಂದೇ ಹೆಸರಾಗಿರುವ ಡಾ.ಕಟ್ಟೇಶ್ ಕಟ್ಟಿ ಅವರೊಂದಿಗೆ ಕೈ ಜೋಡಿಸಿ ಗ್ರೀನ್ ನ್ಯಾನೋ ಕೇರ್ ಔಷಧಗಳು, ಗ್ರೀನ್ ನ್ಯಾನೋ ಸೌಂದರ್ಯ ವರ್ಧಕಗಳು, ಬಿಸ್ಕತ್ತು, ಚಾಕೊಲೆಟ್ ಸೇರಿ ಗ್ರೀನ್ ನ್ಯಾನೋ ತಿನಿಸುಗಳು ಮುಂತಾದ ಗ್ರೀನ್ ನ್ಯಾನೊ ಉತ್ಪನ್ನಗಳನ್ನು ಉತ್ಪಾದಿಸಿ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.
ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರಗಳ ನೆರವಿನಿಂದ ವೇದಿಕ್ ಜ್ಞಾನವನ್ನು 21ನೇ ಶತಮಾನದ ತಂತ್ರಜ್ಞಾನಕ್ಕೆ ಹೊಂದಿಸಲು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರೀನ್ ನ್ಯಾನೋ ರಿಯಾಕ್ಟರ್ ಸ್ಥಾಪಿಸಿದ್ದಾರೆ. ನ್ಯಾನೋರ್ವೇದದ (ನ್ಯಾನೋ ಆಯುರ್ವೇದ) ಪೇಟೆಂಟ್ ಸೇರಿ ತಮ್ಮ ಎಲ್ಲಾ ಗ್ರೀನ್ ನ್ಯಾನೋ ಉತ್ಪನ್ನಗಳಿಗೂ ಪೇಟೆಂಟ್ ಪಡೆದಿದ್ದಾರೆ. ಗ್ರೀನ್ ನ್ಯಾನೋ ತಂತ್ರಜ್ಞಾನ ಮೂಲಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳಿಂದ ಮಾಲಿಕ್ಯೂಲ್ಸ್ (ಕಣ) ತೆಗೆದು ಔಷಧಗಳನ್ನು ತಯಾರಿಸಿದ್ದಾರೆ.
ಭಯ ಭಕ್ತಿ ಇಲ್ಲದೆ ಜನರಿಗೆ ಟೋಪಿ ಹಾಕುವ ಸರ್ಕಾರ ಬೇಕೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಈ ಔಷಧ ಕಾಯಿಲೆಗಳ ಮೇಲೆ ಖಚಿತ ಪ್ರಭಾವ ಬೀರುವುದನ್ನು ಸಾಬೀತುಪಡಿಸುವ ಬಗ್ಗೆ ಆಧಾರಗಳನ್ನು ಕೊಡುವಂಥ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಡಾ.ಕಟ್ಟೇಶ್ ಕಟ್ಟಿ ಹಾಗೂ ಅನಂತಕುಮಾರ್ ಅವರು ಅಭಿವೃದ್ಧಿಪಡಿಸಿರುವ ಈ ನ್ಯಾನೋಕೇರ್ ಔಷಧಗಳು ಭಾರತದ ಆಯುರ್ವೇದ ಹಾಗೂ ಪಾಶ್ಚಿಮಾತ್ಯ ಅಲೋಪತಿ ಔಷಧಗಳ ನಡುವಿನ ಸೇತುವೆಯಾಗಿದೆ. ಈ ನ್ಯಾನೋ ಆರೋಗ್ಯ ವಿಜ್ಞಾನವು ಕಾಯಿಲೆಗಳ ಚಿಕಿತ್ಸೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಕ್ರಾಂತಿಯನ್ನು ಉಂಟು ಮಾಡಲಿದೆ.
ಹಸಿರು ನ್ಯಾನೋ ಕ್ರಾಂತಿ: ಆರೋಗ್ಯ ಜಾಗೃತಿಗೆ ಗ್ರೀನ್ ನ್ಯಾನೋ ಮೂಲಕ ಹಸಿರು ಆಯಾಮ ನೀಡುತ್ತಿರುವ ಹೆಗಡೆ, ನ್ಯಾನೋ ಕ್ಷೇತ್ರವನ್ನು ಸಂಶೋಧಿಸುವ ಅನಂತ ಕೆಲಸಕ್ಕೆ ಕೈ ಹಾಕಿದ್ದಾರೆ. ಭವಿಷ್ಯದ ತಂತ್ರಜ್ಞಾನ ಎಂದೇ ಹೆಸರಾಗಿರುವ ‘ಎಐ’ನಂತೆ ಗ್ರೀನ್ ನ್ಯಾನೋ ಕೇರ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ವಿಶ್ವದ ಮೊದಲ ‘ಹಸಿರು ನ್ಯಾನೋ ರಿಯಾಕ್ಟರ್’ ಸ್ಥಾಪನೆ ಮಾಡಿದ್ದು, ನೆಗೆಟಿವ್ ಕಾರ್ಬನ್ ಎಮಿಷನ್ ತಂತ್ರಜ್ಞಾನ ಹೊಂದಿರುವ ರಿಯಾಕ್ಟರ್‌ನಲ್ಲಿ ಗಿಡಮೂಲಿಕೆಗಳನ್ನು ಹಾಕಿ ಅದರಿಂದ ನ್ಯಾನೋ ಮಾಲಿಕ್ಯೂಲ್ಸ್ (ಕಣ) ಹೊರ ತೆಗೆಯಲಾಗುತ್ತದೆ. ಇದರ ಮೂಲಕ ಪರಿಣಾಮಕಾರಿ ಔಷಧಗಳನ್ನು ತಯಾರಿಸಲಾಗುತ್ತಿದೆ. ಇದು ಗಂಭೀರ ಹಾಗೂ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡಲಿದೆ ಎಂದು ಗ್ರೀನ್ ನ್ಯಾನೋ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕಟ್ಟೇಶ್ ಕಟ್ಟಿ ಹೇಳಿದ್ದಾರೆ.
ಕಾಯಿಲೆಗಳಿಗೆ ಖಚಿತ ಚಿಕಿತ್ಸೆ: ಗ್ರೀನ್ ನ್ಯಾನೋ ಔಷಧಗಳ ಬಗ್ಗೆ ವಿವರಣೆ ನೀಡಿರುವ ಡಾ.ಕಟ್ಟೇಶ್ ಕಟ್ಟಿ, ಕಳೆದ 50 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ಪತ್ತೆ (ಡಯಾಗ್ನೈಸ್) ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಆಗಿದೆ. ಆದರೆ ಚಿಕಿತ್ಸೆ ಹಾಗೂ ಕಾಯಿಲೆ ನಿವಾರಣೆ ಮಟ್ಟದಲ್ಲಿ ಸಾಧನೆಯಾಗಿದ್ದರೂ ಅದು ಸಾಲದು. ಇದೀಗ ನ್ಯಾನೋ ಔಷಧಗಳ ಮೂಲಕ ಕ್ಯಾನ್ಸರ್, ಮಧುಮೇಹ ಹಾಗೂ ಸೋಂಕು ಸಂಬಂಧಿತ ಸಮಸ್ಯೆಗಳಿಗೆ ಖಚಿತ ಚಿಕಿತ್ಸೆ ನೀಡಬಹುದು. ಇದನ್ನು ಈಗಾಗಲೇ ಕೆಲ ಪ್ರಾಣಿಗಳು, ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು ಖಚಿತ ಫಲಿತಾಂಶ ಪಡೆದಿದ್ದೇವೆ ಎಂದು ಹೇಳಿದರು.
ನ್ಯಾನೋ ಮೆಡಿಸಿನ್ ಹೇಗೆ ಭಿನ್ನ?: ಗ್ರೀನ್ ನ್ಯಾನೋ ತಂತ್ರಜ್ಞಾನದ ನೆರವಿನಿಂದ ನ್ಯಾನೋ ಗಾತ್ರದಲ್ಲಿ ಔಷಧಗಳನ್ನು ಮಾಡಬಹುದು. ಇದೊಂದು ಶುದ್ಧ ವಿಜ್ಞಾನ. ಮನುಷ್ಯನ ಜೀವ ಕಣಗಳು 12 ರಿಂದ 18ರಷ್ಟು ಮೈಕ್ರಾನ್‌ನಷ್ಟು ಸೂಕ್ಷ್ಮ ಗಾತ್ರ ಹೊಂದಿರುತ್ತದೆ. ಕ್ಯಾನ್ಸರ್ ಟ್ಯೂಮರ್ ಕಣಗಳು ಅಷ್ಟೇ ಗಾತ್ರ ಹೊಂದಿರುತ್ತವೆ. ಈಗಿನ ಔಷಧಗಳು ಈ ಕಣಗಳಿಗಿಂತ ದೊಡ್ಡ ಗಾತ್ರ ಹೊಂದಿರುವುದರಿಂದ ಜೀವಕಣಗಳ ಒಳ ನುಸುಳಿ ಪ್ರಭಾವ ಬೀರಬಲ್ಲಷ್ಟು ಶಕ್ತಿಶಾಲಿ ಆಗಿಲ್ಲ. ಆದರೆ ನ್ಯಾನೋ ಔಷಧೀಯ ಕಣಗಳು ಜೀವಕಣಗಳಿಗಿಂತ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಜೀವ ಕಣಗಳ ಒಳಗೆ ನುಸುಳಿ ಹೆಚ್ಚು ಪ್ರಭಾವ ಬೀರಬಲ್ಲವಂಥವಾಗಿವೆ.
ಆದ್ದರಿಂದ ಸಾಧಾರಣ ಔಷಧೀಯ ಕಣಗಳಿಗಿಂತ ನ್ಯಾನೋ ಔಷಧೀಯ ಕಣಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಡಾ.ಕಟ್ಟೇಶ್ ಕಟ್ಟಿ ಹೇಳಿದರು. ಈಗಿರುವ ಪದ್ಧತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕಿಮೋಥೆರಪಿ, ರೇಡಿಯೋಥೆರಪಿ ಮಾಡಿದಾಗ ಇಡೀ ದೇಹದ ಇಮ್ಯುನಿಟಿ ಕುಗ್ಗುತ್ತದೆ. ಔಷಧಗಳು ಟ್ಯೂಮರ್ ಸೆಲ್ ಬದಲಿಗೆ ರಕ್ತ, ಆರೋಗ್ಯವಂತ ಜೀವ ಕಣಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ನ್ಯಾನೋ ಮೆಡಿಸಿನ್ ನೆರವಾಗುತ್ತದೆ ವಿವರಣೆ ನೀಡಿದರು.
ಬಂಗಾರ, ಬೆಳ್ಳಿಯಂಥ ಲೋಹದ ಕಣಗಳನ್ನು ಔಷಧದಲ್ಲಿ ಬಳಕೆ ಮಾಡುವ ಪರಂಪರೆ ಎಲ್ಲಾ ಔಷಧೀಯ ಪದ್ಧತಿಗಳಲ್ಲೂ ಇದೆ. ಭಾರತ, ಚೀನಾ, ಈಜಿಪ್ಟ್, ಗ್ರೀಕ್ ಎಲ್ಲಾ ಆಯುರ್ವೇದ ಪದ್ಧತಿಗಳಲ್ಲೂ ಚಿನ್ನವನ್ನು ಭಸ್ಮದ ರೂಪದಲ್ಲಿ ಚಿಕಿತ್ಸೆಗೆ ಬಳಸುತ್ತಿದ್ದರು. ಅದಕ್ಕೆ ರಜತ ಭಸ್ಮ, ಸ್ವರ್ಣಭಸ್ಮ ಎಂಬ ಹೆಸರುಗಳೂ ಇವೆ. ಇದೀಗ ನಾವು ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಚಿನ್ನ ಮತ್ತು ನ್ಯಾನೋ ಕಣಗಳನ್ನು ನ್ಯಾನೋ ಕೇರ್ ಔಷಧಗಳಲ್ಲಿ ಹದಗೊಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ ಡಾ. ಕಟ್ಟೇಶ್ ಕಟ್ಟಿ ತಿಳಿಸಿದರು.
ವಿಶ್ವದ ಮೊದಲ ಗ್ರೀನ್ ನ್ಯಾನೋ ವೈದ್ಯಕೀಯ ಕೇಂದ್ರ: ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿ ವಿಶ್ವದ ಮೊದಲ ಗ್ರೀನ್ ನ್ಯಾನೋ ವೈದ್ಯಕೀಯ ಕೇಂದ್ರವನ್ನು ಅನಂತಕುಮಾರ್ ಹೆಗಡೆ ಅವರು ಕದಂಬ ಸಂಸ್ಥೆಯಡಿ ಸ್ಥಾಪಿಸಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಔಷಧ ಅಭಿವೃದ್ಧಿಪಡಿಸಿದ್ದು, ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿಶ್ವ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ.
ವೈದ್ಯರಿಗೆ ತರಬೇತಿ ನೀಡಲು ಸಿದ್ಥತೆ: ಯಾವುದೇ ವೈದ್ಯರಾಗಲಿ ನ್ಯಾನೋ ಮೆಡಿಸಿನ್ ಮೂಲಕ ರೋಗಿಗಳನ್ನು ಉಪಚರಿಸಲು ತರಬೇತಿ ಪಡೆಯಬಹುದು. ಸೂಕ್ತ ಸಂಖ್ಯೆಯ ವೈದ್ಯರು ಬಂದರೆ 3 ಅಥವಾ 6 ತಿಂಗಳ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಮಾಡಲು ಯೋಚಿಸಿದ್ದೇವೆ ಎಂದು ಡಾ.ಕಟ್ಟೇಶ್ ಕಟ್ಟಿ ಹೇಳಿದರು.
ಗ್ರೀನ್ ನ್ಯಾನೋ ಪಿತಾಮಹ ಡಾ.ಕಟ್ಟೇಶ್ ಕಟ್ಟಿ: ಧಾರವಾಡ ಮೂಲದವರಾದ ಡಾ.ಕಟ್ಟೇಶ್ ಕಟ್ಟಿ ಐಐಎಸ್ಸಿಯಲ್ಲಿ ಪದವಿ ಪಡೆದವರು. ಮೂಲತಃ ನ್ಯೂಕ್ಲಿಯರ್ ಮೆಡಿಸಿನ್ ತಜ್ಞರಾದ ಅವರು ಇದೀಗ ಅಮೆರಿಕದ ಮಿಸೌರಿ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ನ್ಯಾನೋ ತಂತ್ರಜ್ಞಾನದ ನಿರ್ದೇಶಕರಾಗಿದ್ದಾರೆ. ಗ್ರೀನ್ ನ್ಯಾನೋ ಟೆಕ್ನಾಲಜಿ ಪರಿಚಯಿಸುವ ಮೂಲಕ ಗ್ರೀನ್ ನ್ಯಾನೋ ತಂತ್ರಜ್ಞಾನದ ಪಿತಾಮಹರಾಗಿ ಹೆಸರು ಮಾಡಿದ್ದಾರೆ. ಗ್ರೀನ್ ನ್ಯಾನೋತಂತ್ರಜ್ಞಾನದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆಣ್ವಿಕ ರಚನೆಯಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಪೆಪ್ಟೈಡ್ ಒಂದಕ್ಕೆ ಕಟ್ಟೇಶ್ ಪೆಪ್ಟೈಡ್ ಎಂದೇ ಹೆಸರು ಇಡಲಾಗಿದೆ. ಅಲ್ಲದೆ ಗ್ರೀನ್ ನ್ಯಾನೋ ಕೇರ್‌ನಲ್ಲಿ ಸ್ಥಾಪಿಸಿರುವ ನ್ಯಾನೋ ರಿಯಾಕ್ಟರ್‌ಗೆ ಕಟ್ಟಿ ರಿಯಾಕ್ಟರ್ ಎಂದು ಹೆಸರು ಇಡಲಾಗಿದೆ.
ಏನೇನು ಉತ್ಪನ್ನ ಲಭ್ಯ?: ಸೌಂದರ್ಯ ವರ್ಧಕ, ಕುಕ್ಕೀಸ್, ಪಾನೀಯಗಳ ಪ್ರಿಮಿಕ್ಸ್ ಕ್ಯಾಪ್ಸುಲ್, ಹರ್ಬಲ್ ಟೀ ಕ್ಯಾಪ್ಸುಲ್, ಐಸ್‌ಕ್ರೀಂ ಮುಕ್ಸ್, ಹರ್ಬಲ್ ವಾಟರ್, ನ್ಯಾನೋ ಹರ್ಬಲ್ ಚಾಕೊಲೇಟ್, ಎನರ್ಜಿ ಬಾರ್, ವಿವಿಧ ರೀತಿಯ ಎಣ್ಣೆ, ತುಪ್ಪ, ಸ್ಯಾನಿಟೈಸರ್, ಕೇಶ ಆರೈಕೆ ಉತ್ಪನ್ನ, ಮಾಲಿನ್ಯವನ್ನು ಹೀರಿಕೊಳ್ಳುವ ಬಣ್ಣ ಸೇರಿ ಹಲವು ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ.
ಕರ್ನಾಟಕ ಗಂಡಸರು ಕಾಂಗ್ರೆಸ್‌ಗೆ ಮತ ಹಾಕಬೇಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ರಾಜಕೀಯ ಜೀವನದಲ್ಲಿ ದಿನದಾಂತ್ಯಕ್ಕೆ ಬ್ಯಾಲೆನ್ಸ್ ಶೀಟ್ ನೋಡಿದರೆ ಎಷ್ಟು ಜನ ಭಾಷಣಕ್ಕೆ ಸೇರಿದ್ದರು, ಎಷ್ಟು ಜನ ಚಪ್ಪಾಳೆ ತಟ್ಟಿದರು ಎಂಬುದು ಮಾತ್ರ ಇತ್ತು. ಇದೀಗ ನನ್ನ ಜೀವನದಲ್ಲಿ ಎಷ್ಟು ಜೀವ ಉಳಿಸಿದ್ದೇನೆ ಎಂಬುದು ನನ್ನ ಬ್ಯಾಲೆನ್ಸ್ ಶೀಟ್ ಆಗಲಿದೆ. ನ್ಯಾನೋ ಎಂಬ ವೇದಿಕೆ ಒಂದು ಕ್ಷೇತ್ರಕ್ಕೆ, ಉತ್ಪನ್ನಕ್ಕೆ ಸೀಮಿತವಾಗಿಲ್ಲ. ನೆಲದಿಂದ ಆಂತರಿಕ್ಷದವರೆಗೆ ಎಲ್ಲದರಲ್ಲೂ ಬಳಕೆ ಮಾಡಬಹುದು.
- ಅನಂತಕುಮಾರ್ ಹೆಗಡೆ, ಕೇಂದ್ರದ ಮಾಜಿ ಸಚಿವ, ಕದಂಬ ಗ್ರೀನ್ ನ್ಯಾನೋ ಕೇರ್ ಸಂಸ್ಥಾಪಕರು