ಸಚಿವ ಸ್ಥಾನ, ಖಾತೆ ವಿಚಾರವಾಗಿ ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ಅತೃಪ್ತಿ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ ಜಾರಕಿಹೊಳಿ ಸೋದರರು ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅಸಮಾಧಾನ

ಬೆಳಗಾವಿ/ಬಳ್ಳಾರಿ (ಆ.22): ಸಚಿವ ಸ್ಥಾನ, ಖಾತೆ ವಿಚಾರವಾಗಿ ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ಅತೃಪ್ತಿ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ಇದೇ ವಿಚಾರವಾಗಿ ಜಾರಕಿಹೊಳಿ ಸೋದರರು ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೆ ಶನಿವಾರ ತಮ್ಮ ಅತೃಪ್ತಿಯನ್ನು ಪರೋಕ್ಷವಾಗಿ ಪ್ರದರ್ಶಿಸಿದ್ದಾರೆ. ತಮ್ಮ ಜಿಲ್ಲೆಯಲ್ಲೇ ಮುಖ್ಯಮಂತ್ರಿ ಇದ್ದರೂ ಅವರಿಂದ ದೂರವೇ ಉಳಿದಿದ್ದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಕೋವಿಡ್‌ ನಿರ್ವಹಣೆ ಮತ್ತು ನೆರೆ ಹಾನಿ ಕುರಿತು ಸಭೆ ನಡೆಸಿದ್ದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಅರಬಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ತವರು ಜಿಲ್ಲೆಗೆ ಮುಖ್ಯಮಂತ್ರಿ ಬಂದರೂ ಜಾರಕಿಹೊಳಿ ಸಹೋದರರು ಮಾತ್ರ ಕಾಣಿಸಿಕೊಳ್ಳದಿರುವುದು ಭಾರೀ ಕುತೂಹಲಕ್ಕೆ ಕಾರಣವಾಯಿತು. ರಮೇಶ್‌ ಜಾರಕಿಹೊಳಿ ಅವರು ಗೋಕಾಕದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಬ್ಯುಸಿಯಾಗಿದ್ದರೆ, ಬಾಲಚಂದ್ರ ಜಾರಕಿಹೊಳಿ ಬೆಂಗಳೂರಲ್ಲೇ ಇದ್ದರು.

‘ಪಿಕ್ಚರ್‌ ಬಾಕಿ ಹೈ’ ಏಕೆ? : ಅಂತ ಸಿಂಗ್‌ಗೆ ಹೇಳಿದ್ದೇನೆ: ಬಿಜೆಪಿ ಶಾಸಕ

ಇನ್ನು ವಿಜಯಪುರಕ್ಕೆ ಹೋಗುವ ಮುನ್ನ ಮುಖ್ಯಮಂತ್ರಿಗಳ ವಿಮಾನ ಬಳ್ಳಾರಿಯ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರೂ ಅವರನ್ನು ಸ್ವಾಗತಿಸುವ ಗೋಜಿಗೂ ಹೋಗದೆ ಸಚಿವ ಆನಂದ್‌ ಸಿಂಗ್‌ ತಮ್ಮ ಮುನಿಸು ಪ್ರದರ್ಶಿಸಿದರು. ಆನಂದ್‌ ಸಿಂಗ್‌ ಈ ವೇಳೆ ಕೋ-ಆಪರೇಟಿವ್‌ ಬ್ಯಾಂಕ್‌ನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.