*   ಪಂಜಾಬ್‌ ಮೂಲದ 1995ನೇ ಬ್ಯಾಚ್‌ ಅಧಿಕಾರಿ*  ಬಂಧನದ ಬೆನ್ನಲ್ಲೇ ಹುದ್ದೆಯಿಂದ ಸಸ್ಪೆಂಡ್‌*  ಬೆಂಗಳೂರು ಕಮಿಷನರ್‌ ಆಗುವ ಆಸೆ

ಬೆಂಗಳೂರು(ಜು.05):  ಪಂಜಾಬ್‌ ರಾಜ್ಯದ ಮನ್ಸಾ ಮೂಲದ ಅಮೃತ್‌ ಪಾಲ್‌ 1995ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. 1997ರಲ್ಲಿ ರಾಜ್ಯ ಪೊಲೀಸ್‌ ಇಲಾಖೆಗೆ ಸೇರಿದ ಅವರು ಉಡುಪಿ, ಹಾಸನ ಹಾಗೂ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಡಿಐಜಿಯಾಗಿ ಮುಂಬಡ್ತಿ ಪಡೆದ ಅವರು, ಕರಾವಳಿ ಪಡೆ ಹಾಗೂ ನಕ್ಸಲ್‌ ನಿಗ್ರಹ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಪೂರ್ವ ಹಾಗೂ ಕೇಂದ್ರ ವಲಯದ ಐಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು, 2020ರ ಫೆಬ್ರವರಿ 2ರಂದು ಎಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆದು ನೇಮಕಾತಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಪಿಎಸ್‌ಐ ಹಗರಣ ಬೆಳಕಿಗೆ ಬಂದ ನಂತರ ರಾಜ್ಯ ಆಂತರಿಕ ಭದ್ರತಾ ವಿಭಾಗಕ್ಕೆ ಅವರು ಎತ್ತಂಗಡಿಯಾಗಿದ್ದರು.

ಬೆಂಗಳೂರು ಕಮಿಷನರ್‌ ಆಗುವ ಆಸೆ:

ಇನ್ನು ನಾಲ್ಕು ವರ್ಷ ಸೇವಾವಧಿ ಹೊಂದಿರುವ ಅಮೃತ್‌ ಪಾಲ್‌ ಅವರಿಗೆ ತಾವು ನಿವೃತ್ತರಾಗುವ ಮುನ್ನ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಹುದ್ದೆ ಅಲಂಕರಿಸುವ ಮಹದಾಸೆ ಇತ್ತು. ಆ ಹುದ್ದೆ ಪಡೆಯಲು ಅಗತ್ಯವಾದ ‘ಬಂಡವಾಳ’ ಸಂಗ್ರಹಕ್ಕೆ ಪಿಎಸ್‌ಐ ಅಕ್ರಮಕ್ಕೆ ಎಡಿಜಿಪಿ ಸಾಥ್‌ ಕೊಟ್ಟಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

PSI Recruitment Scam: ಅಮೃತ್‌ ಪೌಲ್‌ ಆಯ್ತು, ನೆಕ್ಸ್ಟ್ ಯಾರು?

2020ರಲ್ಲಿ ಎಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆದ ಅಮೃತ್‌ ಪಾಲ್‌, ಹಿರಿಯ ಅಧಿಕಾರಿಗಳನ್ನು ಪಕ್ಕಕ್ಕೆ ಸರಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಹುದ್ದೆಗೆ ತೀವ್ರ ಲಾಬಿ ನಡೆಸಿದ್ದರು. ಇದಕ್ಕಾಗಿ ಅಗತ್ಯವಾದ ಆರ್ಥಿಕ ವೆಚ್ಚ ಭರಿಸವುದಾಗಿ ಸಹ ಅವರು ಹೇಳಿಕೊಂಡಿದ್ದರು. ಆದರೆ ಕೊನೆಗೆ ಸೇವಾ ಹಿರಿತನ ಪರಿಗಣಿಸಿದ ಸರ್ಕಾರವು, ಭಾಸ್ಕರ್‌ ರಾವ್‌ ಹಾಗೂ ಆನಂತರ ಕಮಲ್‌ ಪಂತ್‌ ಅವರಿಗೆ ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ.

ಬಂಧನದ ಬೆನ್ನಲ್ಲೇ ಹುದ್ದೆಯಿಂದ ಸಸ್ಪೆಂಡ್‌

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧನ ಬೆನ್ನಲ್ಲೇ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ. ಪಿಎಸ್‌ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ನಂತರ ನೇಮಕಾತಿ ವಿಭಾಗದಿಂದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ಕ್ಕೆ ಅಮೃತ್‌ ಪಾಲ್‌ ಎತ್ತಂಗಡಿ ಮಾಡಲಾಗಿತ್ತು. ಪಿಎಸ್‌ಐ ಅಕ್ರಮದಲ್ಲಿ ಬಂಧನದ ಬಗ್ಗೆ ಸಿಐಡಿಯಿಂದ ವರದಿ ಪಡೆದ ಸರ್ಕಾರವು, ಐಎಸ್‌ಡಿ ಎಡಿಜಿಪಿ ಅಮೃತ್‌ ಪಾಲ್‌ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ.