Asianet Suvarna News Asianet Suvarna News

ಲಾಕ್‌ಡೌನಲ್ಲೂ ರಾಜ್ಯ ಸರ್ಕಾರಕ್ಕೆ 'ಲಾಭ'!

ಲಾಕ್ಡೌನ್‌ನಿಂದ ಸರ್ಕಾರಕ್ಕೆ ಜೀವದಾನ|  ಹೈಕೋರ್ಟ್‌ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಪಾರು

Amid Of Lockdown No Directions From Karnataka High court To Govt
Author
Bangalore, First Published Apr 20, 2020, 7:29 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು(ಏ.20): ಕೊರೊನಾ ವೈರಸ್‌ ಸೋಂಕು ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದ್ದರೆ, ನ್ಯಾಯಾಲಯದಲ್ಲಿ ಹಲವು ಪ್ರಕರಣಗಳಲ್ಲಿ ಸದ್ಯದ ಲಾಕ್‌ಡೌನ್‌ ಸರ್ಕಾರದ ಪಾಲಿಗೆ ವರವಾಗಿ ಪರಿಣಮಿಸಿದೆ.

ಹೌದು! ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು, ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ತೆರವು, ಘನತ್ಯಾಜ್ಯ ವಿಲೇವಾರಿ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಜೈಲುಗಳಲ್ಲಿ ಅಧಿಕ ಸಂಖ್ಯೆಯ ಕೈದಿಗಳು ಮತ್ತು ಮೂಲಸೌಕರ್ಯಗಳ ಕೊರತೆ, ವಿಪತ್ತು ನಿರ್ವಹಣಾ ಕಾಯ್ದೆ ಅನುಷ್ಠಾನದಲ್ಲಿನ ಲೋಪಗಳು, ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ ಅನುಷ್ಠಾನಕ್ಕೆ ವಿಳಂಬ, ಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸ್ಲಂ ನಿವಾಸಿಗಳ ಎತ್ತಂಗಡಿ ಸೇರಿದಂತೆ ಹಲವು ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ.

ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲ ಹೇಗೆ?: ಇಂದು ಸಂಪುಟ ನಿರ್ಧಾರ

ಈ ವಿಚಾರಗಳಲ್ಲಿ ರಾಜ್ಯ ಸರ್ಕಾರ ಮತ್ತದರ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳ ಬೆನ್ನಿಗೆ ಬಿದ್ದು ಹೈಕೋರ್ಟ್‌ ಕೆಲಸ ಮಾಡಿಸುತ್ತಿತ್ತು. ಆದೇಶಗಳ ಪಾಲನೆಗೆ ಗಡುವು ನೀಡಿತು. ನ್ಯಾಯಾಲಯದ ಆದೇಶ ಪಾಲಿಸದ ಕೆಲವು ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿತ್ತು.

ಮೇಲಾಗಿ ಈ ಅರ್ಜಿಗಳ ಸಂಬಂಧ ನೀಡಿದ ಆದೇಶಗಳನ್ನು ಪಾಲಿಸಿದ ಬಗ್ಗೆ ಮಾಚ್‌ರ್‍ ಕೊನೆಯ ವಾರ ಮತ್ತು ಏಪ್ರಿಲ್‌ ಮೊದಲು ಹಾಗೂ 2ನೇ ವಾರದಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅನುಪಾಲನಾ ವರದಿಗಳನ್ನು ಸಲ್ಲಿಸಬೇಕಿತ್ತು. ಆದರೆ, ಕೊರೊನಾ ತಡೆಗಟ್ಟಲು ಮಾ.23ರಿಂದ ಹೈಕೋರ್ಟ್‌ ಕಲಾಪಗಳು ಸ್ಥಗಿತಗೊಂಡಿವೆ. ಮೇ 3ರ ನಂತರವೂ ಲಾಕ್‌ಡೌನ್‌ ತೆರವು ಆಗಲಿದೆ ಎಂದು ಈಗಲೇ ವಿಶ್ವಾಸ ವ್ಯಕ್ತಪಡಿಸುವ ಪರಿಸ್ಥಿತಿಯೂ ಇಲ್ಲ.

ಕೊರೋನಾ ಮಧ್ಯೆ ವಕ್ಕರಿಸಿದ ಮಂಗನ ಕಾಯಿಲೆ: ಆತಂಕದಲ್ಲಿ ಜನತೆ

ಹೀಗಾಗಿ, ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಲಾಕ್‌ಡೌನ್‌ ಪರಿಸ್ಥಿತಿಯಿಂದ ಹಲವು ಪ್ರಕರಣಗಳಲ್ಲಿ ಹೈಕೋರ್ಟ್‌ಗೆ ಅನುಪಾಲನಾ ವರದಿ ಅನಿವಾರ್ಯತೆಯಿಂದ ಬಿಡುಗಡೆ ಸಿಕ್ಕಂತಾಗಿದೆ. ಒಂದೊಮ್ಮೆ ಆದೇಶ ಪಾಲನೆಯಲ್ಲಿ ಎಡವಿದ್ದರೆ ಹೈಕೋರ್ಟ್‌ ಖಂಡಿತವಾಗಿ ಚಾಟಿ ಬೀಸುತ್ತಿತ್ತು. ಅದರಿಂದ ತಕ್ಷಣಕ್ಕೆ ತಪ್ಪಿಸಿಕೊಳ್ಳುವ ಅವಕಾಶವನ್ನು ಲಾಕ್‌ಡೌನ್‌ ಸರ್ಕಾರಕ್ಕೆ ನೀಡಿದಂತಾಗಿದೆ.

Follow Us:
Download App:
  • android
  • ios