Asianet Suvarna News Asianet Suvarna News

ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಗಗನಕ್ಕೆ!

ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಗಗನಕ್ಕೆ|  ನಿರ್ಮಾಣ ಕಾಮಗಾರಿಗೆ ನಿರ್ಬಂಧ ಹಿಂತೆಗೆತ ಹಿನ್ನೆಲೆ| ಆದೇಶದ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ, ಕಾರ್ಮಿಕರಿಗೂ ಬರ

Amid Of Lockdown Building Construction Materials Price Increases
Author
Bangalore, First Published Apr 26, 2020, 8:04 AM IST

ಸಂಪತ್‌ ತರೀಕೆರೆ

ಬೆಂಗಳೂರು(ಏ.26): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿ ಇದೀಗ ಪ್ರಾರಂಭಗೊಳ್ಳುತ್ತಿರುವ ಬೆನ್ನಲ್ಲೇ ಕಟ್ಟಡಗಳ ಮಾಲೀಕರಿಗೆ ಸಿಮೆಂಟ್‌ ಸೇರಿದಂತೆ ಇತರೆ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ.

ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಹೀಗಾಗಿ ಮನೆ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಲಾಕ್‌ಡೌನ್‌ ನಿಯಮದಲ್ಲಿ ಸಡಿಲಿಕೆ ಮಾಡಿ, ಕಟ್ಟಡ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಕ್ಕೆ ವಿನಾಯಿತಿ ನೀಡಿದೆ. ಹೀಗಾಗಿ ಎಲ್ಲೆಡೆ ಮನೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದ ಮಾಲೀಕರು ಪುನಃ ಕಾಮಗಾರಿ ಆರಂಭಿಸುತ್ತಿದ್ದಾರೆ. ಇದರಿಂದ ನಿರ್ಮಾಣ ಸಾಮಗ್ರಿಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಿದ್ದು, ಪರಿಣಾಮ ಸಿಮೆಂಟ್‌, ಸ್ಟೀಲ್‌, ಇಟ್ಟಿಗೆ, ಮರಳು ಇತ್ಯಾದಿಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಇದು ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.

ಮೇ ಅಂತ್ಯಕ್ಕೆ 2.5 ಲಕ್ಷ ಜನಕ್ಕೆ ವೈರಸ್‌?: ಅಮೆರಿಕಗಿಂತ ಭಾರತದಲ್ಲೇ ಸೋಂಕಿನ ವೇಗ ಅಧಿಕ!

ಮಾರುಕಟ್ಟೆಯಲ್ಲಿ 50 ಕೆಜಿಯ ಸಿಮೆಂಟ್‌ ಮೂಟೆ- ಬಿರ್ಲಾ ಸೂಪರ್‌ 450 ರು.(ಹಿಂದಿನ ದರ 380 ರು.), ಜುವಾರಿ 420 ರು.(360 ರು.), ಪ್ರಿಯಾ ಗೋಲ್ಡ್‌ 360 ರು.(320 ರು.) ಇದ್ದು ಹೀಗೆ ಇತರೆ ಸಿಮೆಂಟ್‌ಗಳ ಬೆಲೆಯಲ್ಲೂ 50ರಿಂದ 70 ರು.ನಷ್ಟುಏರಿಕೆಯಾಗಿದೆ. ಈ ಹಿಂದೆ ಮಣ್ಣಿನ ಇಟ್ಟಿಗೆಗೆæ 7.50 ರು.ಇದ್ದ ಬೆಲೆ 8.50 ರು. ಆಗಿದೆ. ಹಾಗೆಯೇ ಹಾಲೋಬ್ಲಾಕ್‌ 40 ರು.ನಿಂದ 45 ರು.ಗೆ ಹೆಚ್ಚಿದೆ ಎಂದು ಕಟ್ಟಡ ಗುತ್ತಿಗೆದಾರ ಕುಮಾರ್‌ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಕಾರ್ಮಿಕರ ಕೊರತೆ:

ಕಟ್ಟಡ ಕಾರ್ಮಿಕರಿಗೆ ಈ ಹಿಂದೆ ದಿನಕ್ಕೆ 600 ರು., ಗಾರೆ ಕಾರ್ಮಿಕರಿಗೆ 850 ರು.ದಿನಗೂಲಿ ಕೊಡಲಾಗುತ್ತಿತ್ತು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಶೇ.50ಕ್ಕಿಂತ ಹೆಚ್ಚು ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದು, ಕೆಲಸಗಾರರೇ ಇಲ್ಲದಂತಾಗಿದೆ. ಸ್ಥಳೀಯ ಕೆಲಸಗಾರರಿಗೆ ಹಿಂದಿಗಿಂತ ನೂರರಿಂದ ನೂರೈವತ್ತು ರು.ಗಳನ್ನು ಹೆಚ್ಚಿಗೆ ಕೊಟ್ಟು ಕೆಲಸಕ್ಕೆ ಕರೆತರಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಕಟ್ಟಡ ಗುತ್ತಿಗೆದಾರ ಕುಮಾರ್‌.

ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

ಎಂ.ಸ್ಯಾಂಡ್‌ಗೆ ಭಾರೀ ಬೇಡಿಕೆ

ರಾಜ್ಯದಲ್ಲಿ ಮರಳು ನೀತಿ ಬಂದಿಲ್ಲ. ಕಟ್ಟಡ ನಿರ್ಮಾಣ ಮಾಡುವವರಿಗೆ ಮರಳು ಸಿಗುತ್ತಿಲ್ಲ. ಹಾಗಾಗಿ ಎಂ.ಸ್ಯಾಂಡ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ಹಾಗೆಯೇ ಪ್ರಸ್ತುತ ಎಂ.ಸ್ಯಾಂಡ್‌ ಉತ್ಪಾದನೆ ಸ್ಥಗಿತಗೊಂಡಿದ್ದು, ಮೇ 3ರ ನಂತರ ಕ್ವಾರಿ ಮಾಲೀಕರಿಗೆ ಪರವಾನಗಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಇರುವ ಎಂಸ್ಯಾಂಡ್‌ ದಾಸ್ತಾನಿಗೆ ಬೇಡಿಕೆ ಇದ್ದು, ಪ್ಲಾಸ್ಟಿಂಗ್‌ ಸ್ಯಾಂಡ್‌ ಪ್ರತಿ ಟನ್‌ಗೆ 1200, ಕಾಂಕ್ರಿಟ್‌ ಎಂ.ಸ್ಯಾಂಡ್‌ 600 ರು., ಬ್ಲಾಕ್‌ ವರ್ಕ್ ಸ್ಯಾಂಡ್‌ 900 ರು. ಇದ್ದ ಬೆಲೆಯಲ್ಲಿ ನೂರೈವತ್ತರಿಂದ ಇನ್ನೂರು ರು.ಗಳು ಹೆಚ್ಚುವ ಸಾಧ್ಯತೆ ಇದೆ. ಇದರಲ್ಲಿ ಸಾರಿಗೆ ವೆಚ್ಚ ಪ್ರತ್ಯೇಕವಾಗಿದ್ದು, ಕಟ್ಟಡ ಮಾಲೀಕರು ಅದನ್ನು ಸಹ ಪಾವತಿಸಬೇಕಾಗುತ್ತದೆ ಎಂದು ಆನೇಕಲ್‌ನ ತವರ ಮೈನ್ಸ್‌ ಆ್ಯಂಡ್‌ ಮಿನರಲ್ಸ್‌ ಕಂಪನಿ ಮಾಲೀಕ ಡಿ.ಗೋವಿಂದರಾಜು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios