ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.18): ಮಹಾಮಾರಿ ಕೊರೋನಾದ ಕೆಂಗೆಣ್ಣು ನೇತ್ರದಾನದ ಮೇಲೂ ಬೀರಿದೆ. ಸೋಂಕಿನ ಭೀತಿಯಿಂದಾಗಿ ನೇತ್ರದಾನಕ್ಕೆ ನೋಂದಣಿ ಮಾಡಿ, ವಾಗ್ದಾನ ಮಾಡಿಕೊಂಡ ನೂರಾರು ಜನರ ಕಣ್ಣುಗಳನ್ನು ಸಂಗ್ರಹ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಂಧರ ಬದುಕಿಗೆ ಬೆಳಕಾಗಬೇಕಿದ್ದ ಕಣ್ಣುಗಳು ಮಣ್ಣು ಪಾಲಾಗುತ್ತಿವೆ.

ಕೊರೋನಾ ಭೀತಿಯಿಂದ ನೋಂದಣಿ ಮಾಡಿಕೊಂಡ ವ್ಯಕ್ತಿ ಮೃತನಾದರೂ ನೇತ್ರ ಪಡೆಯಲು ವೈದ್ಯರು ಸಮಸ್ಯೆ ಎದುರಿಸುವಂತಾಗಿದೆ. ಸ್ವಾಭಾವಿಕವಾಗಿ, ಕಾಯಿಲೆಯಿಂದ ಅಥವಾ ಅಪಘಾತದಿಂದ ಮೃತರಾದರೂ ಅವರಲ್ಲಿ ಕೊರೋನಾ ಸೋಂಕು ಇರಬಹುದೆನ್ನುವ ಆತಂಕ ಕಾಡುತ್ತಿದೆ.

ಮೃತಪಟ್ಟನಂತರ ಕೆಲವರ ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ಪಾಸಿಟಿವ್‌ ಎಂದು ಬರುತ್ತಿದೆ. ಹೀಗಾಗಿ ನೋಂದಿತರು ಸ್ವಾಭಾವಿಕವಾಗಿ ಮೃತರಾದರೂ ಅವರಿಂದ ನೇತ್ರದಾನ ಪಡೆಯಲಾಗುತ್ತಿಲ್ಲ. ಇನ್ನು ಮೃತ ವ್ಯಕ್ತಿಗೆ ಕೊರೋನಾ ಇಲ್ಲದಿದ್ದರೂ ಕೋವಿಡ್‌ ಪರೀಕ್ಷಾ ವರದಿ 24 ಗಂಟೆಗಳ ನಂತರ ಬರುವುದರಿಂದ ನೇತ್ರ ಪಡೆಯಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲ ಕಾರಣಗಳಿಂದ ಕಳೆದ ಮೂರು ತಿಂಗಳಿಂದ ನೇತ್ರ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ. ನೇತ್ರದಾನದ ನೋಂದಣಿ ಮಾಡಿದವರ ಕಣ್ಣುಗಳನ್ನು ಪಡೆಯಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಇಲ್ಲದೇ ಮೃತಪಟ್ಟಿದ್ದು ಖಚಿತವಾದರೆ ಮಾತ್ರ ಅಂಥ ಮೃತದೇಹಗಳಿಂದ ಮಾತ್ರ ನೇತ್ರ ಸಂಗ್ರಹಿಸಲಾಗುತ್ತಿದೆ ಅಷ್ಟೇ.

ಕೊರೋನಾದಿಂದ ನೋಂದಣಿ ಮಾಡಿಸಿಕೊಂಡವರ ನೇತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದರೆ ಕೊರೋನಾ ಇರಲಿಲ್ಲವೆಂಬುದು ಖಚಿತವಾದರೆ ಮಾತ್ರ ಅಂತಹವರ ನೇತ್ರ ಪಡೆಯಲಾಗುತ್ತಿದೆ.

ಶ್ರೀನಿವಾಸ ಜೋಶಿ, ನೇತ್ರ ತಜ್ಞ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ