ಚಿಕ್ಕಮಗಳೂರಿನಲ್ಲಿ ಶವಪರೀಕ್ಷೆಗೆ ವೈದ್ಯರಿಲ್ಲದೆ ಆಸ್ಪತ್ರೆ ಮುಂದೆ ಇಡೀ ದಿನ ಕಾದ ಆಂಬುಲೆನ್ಸ್!
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈದ್ಯರ ಕೊರತೆಯಿಂದ ಮೂರು ಮೃತದೇಹಗಳನ್ನ ಹೊತ್ತ ಆಂಬುಲೆನ್ಸ್ಗಳು ಇಡೀ ದಿನ ಆಸ್ಪತ್ರೆ ಕಾದಿರುವ ಘಟನೆ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.02): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈದ್ಯರ ಕೊರತೆಯಿಂದ ಮೂರು ಮೃತದೇಹಗಳನ್ನ ಹೊತ್ತ ಆಂಬುಲೆನ್ಸ್ಗಳು ಇಡೀ ದಿನ ಆಸ್ಪತ್ರೆ ಕಾದಿರುವ ಘಟನೆ ನಡೆದಿದೆ. ನಿಜಕ್ಕೂ ಈ ಸ್ಟೋರಿ ನಾಗರೀಕ ಸಮಾಜ ಹಾಗೂ ಸರ್ಕಾರ ತಲೆತಗ್ಗಿಸುವಂತದ್ದು. ಇಂತಹಾ ಕರುಳುಹಿಂಡುವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಆಸ್ಪತ್ರೆ. ಡಿಸೆಂಬರ್ 31ರ ರಾತ್ರಿ ಒಂದು ಅಪಘಾತ. ಓರ್ವ ಮಹಿಳೆ ಸಾವು. ಡಿಸೆಂಬರ್ 31ರ ಮಧ್ಯರಾತ್ರಿ ರೈಲಿಗೆ ಸಿಲುಕಿ ಎರಡು ಸಾವು. ಒಟ್ಟು ಮೂರು ಮೃತದೇಹಗಳು ಇಂದು ಬೆಳಗ್ಗೆ 8 ಗಂಟೆಗೆ ತಾಲೂಕು ಆಸ್ಪತ್ರೆಗೆ ಬಂದಿದ್ದವು. ಆದ್ರೆ, 3 ಮೃತದೇಹ ಹೊತ್ತ ಎರಡು ಆಂಬುಲೆನ್ಸ್ಗಳು ಇಡೀ ದಿನ ಆಸ್ಪತ್ರೆಯ ಶವಾಗಾರದ ಮುಂದೆ ಕಾದುನಿಂತಿವೆ.
ವೈದ್ಯರು ಇಲ್ಲದೇ ಶವ ಪರೀಕ್ಷೆ ಇಲ್ಲ: ವೈದ್ಯರಿಲ್ಲದೆ ಶವಪರೀಕ್ಷೆಯೇ ನಡೆದಿಲ್ಲ. ಸಂಜೆವರೆಗೂ ನೋಡಿ ತಾಳ್ಮೆ ಕಳೆದುಕೊಂಡು ಸ್ಥಳಿಯರು ಹಾಗೂ ಮೃತರ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಳೆದ ರಾತ್ರಿ 8ನೇ ತರಗತಿ ವಿದ್ಯಾರ್ಥಿನಿ ಸ್ನೇಹಿತರ ಜೊತೆ ನ್ಯೂ ಇಯರ್ ಪಾರ್ಟಿ ಮಾಡ್ತೀನಿ ಅಂತ ಬಂದು ತನ್ನ ಶಾಲಾ ಬಸ್ ಡ್ರೈವರ್ ಜೊತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. 38 ವರ್ಷದ ಡ್ರೈವರ್ ಸಂತೋಷ್ ಗೆ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪ್ರೇಮಾಂಕುರವಾಗಿತ್ತು. ಶಾಲಾ ಆಡಳಿತ ಮಂಡಳಿ ಆತನ ಬಸ್ ರೂಟ್ ಕೂಡ ಚೇಂಜ್ ಮಾಡಿತ್ತು. ಡ್ರೈವರ್ ಗೆ ಶಾಲಾ ಆಡಳಿತ ಮಂಡಳಿ ವಾರ್ನ್ ಕೂಡ ಮಾಡಿತ್ತು. ಆದರೆ, ಕಳೆದ ರಾತ್ರಿ ಇಬ್ಬರೂ ರೈಲಿಗೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ರು. ಆ ಮೃತದೇಹ ಕೂಡ ಇಡೀ ದಿನ ಆಸ್ಪತ್ರೆ ಬಳಿ ಇತ್ತು. ಪೋಷಕರು ಕಣ್ಣೀರಾಕ್ತಿದ್ರು.
ಮೈಸೂರಲ್ಲಿ ಮುಖ್ಯಮಂತ್ರಿ ಪುತ್ರನ ಗೆಲ್ಲಿಸಲು ಷಡ್ಯಂತ್ರ: ಪ್ರತಾಪ್ ಸಿಂಹ ಆರೋಪ
ಮೃತದೇಹ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ: ವೈದ್ಯರಿಲ್ಲದೆ ಶವಪರೀಕ್ಷೆ ಮಾಡಲೇ ಇಲ್ಲ. ಯಾವಾಗ ಸಾರ್ವಜನಿಕರು ಕಿಡಿಕಾರಿದ್ರೋ ಆಮೇಲೆ ಅಲರ್ಟ್ ಆದ ಅಧಿಕಾರಿಗಳು ಎರಡು ಮೃತದೇಹವನ್ನ ಚಿಕ್ಕಮಗಳೂರಿಗೆ ಕಳಿಸಿ, ಒಂದನ್ನ ತರೀಕೆರೆಯಿಂದ ವೈದ್ಯರು ಬಂದು ಅಜ್ಜಂಪುರದಲ್ಲೇ ಶವಪರೀಕ್ಷೆ ನಡೆಸಿದ್ದಾರೆ. ಒಟ್ಟಾರೆ, ಎಲ್ಲಾ ಉಚಿತ ಕೊಟ್ಟ ಸರ್ಕಾರ ಸಚಿವರ ಕಾರು ಖರೀದಿಗೆ ಹೆಚ್ಚುವರಿ ಹಣ ಕೂಡ ಬಿಡುಗಡೆ ಮಾಡಿದೆ. ಆದ್ರೆ, ಸರ್ಕಾರ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನ ನೇಮಿಸದಿರೋದು ಮಾತ್ರ ದುರಂತ. ಯಾಕಂದ್ರೆ, ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆ ಮುಂದೆ ಇಡೀ ದಿನ ಆಂಬುಲೆನ್ಸ್ ಗಳು ಕಾಯುತ್ವೆ ಅಂದ್ರೆ ವ್ಯವಸ್ಥೆ ಎಲ್ಲಿಗೆ ಬಂದಿದೆ ಅನ್ನೋ ಪ್ರಶ್ನೆ ಮೂಡೋದು ಸಹಜ.