ಶಿವಮೊಗ್ಗ(ಆ.12): ಕಾಶಿ ವಿಶ್ವನಾಥ ಮತ್ತು ಮಥುರಾದಲ್ಲಿನ ಶ್ರೀಕೃಷ್ಣ ದೇವಸ್ಥಾನಗಳು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಿಯಾಗಬೇಕು ಎಂಬ ದೇಶದ ಕೋಟ್ಯಂತರ ಜನರ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ. ಇದೇ ಕಾರಣಕ್ಕೆ ನಾನು ಜೈಲಿಗೆ ಹೋಗಬೇಕೆಂದಾದರೆ 100 ಬಾರಿ ಮಾತ್ರವಲ್ಲ, ಜೀವಮಾನ ಪೂರ್ತಿ ಜೈಲಿನಲ್ಲಿ ಇರಲು ಕೂಡ ಸಿದ್ಧ ಎಂದು ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೇಳಿಕೆಗಾಗಿ ತಮ್ಮ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಿ ಬಂಧಿಸಬೇಕೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿ, ನಿಜವಾದ ಜಾತ್ಯತೀತೆಯನ್ನು ಮೈದುಂಬಿಸಿಕೊಂಡಿರುವುದು ಹಿಂದೂ ಧರ್ಮ. ಇಂತಹ ಹಿಂದೂ ಧರ್ಮದ ಅಸಂಖ್ಯಾತರ ಭಾವನೆಗೆ ಬೆಲೆ ನೀಡಬೇಕು. ಡಿಕೆಶಿ ಮತ್ತು ಓವೈಸಿಯವರಿಗೆ ಪ್ರತಿಯೊಂದರಲ್ಲಿಯೂ ರಾಜಕಾರಣ ಮಾಡುವ ಚಟ. ಹೀಗಾಗಿ ಅವರು ಇದನ್ನು ರಾಜಕೀಯಗೊಳಿಸಿದ್ದಾರೆ. ಆದರೆ, ನಾನು ಇದರಲ್ಲಿ ರಾಜಕೀಯ ಬೆರೆಸುವುದಿಲ್ಲ ಎಂದರು.

ನಾನು ಸ್ವತಃ ಮಥುರಾ ಮತ್ತು ಕಾಶಿಗೆ ಹೋಗಿದ್ದೇನೆ. ಆಗ ಗುಮಾಮಗಿರಿಯ ಸಂಕೇತವಾಗಿ ಮಂದಿರ ಕೆಡವಿ ಮಸೀದಿ ನಿರ್ಮಿಸಿರುವುದು ಗೋಚರಿಸುತ್ತದೆ. ಇದರಿಂದ ನೋವಾಗುತ್ತದೆ. ಹೀಗಾಗಿ ಈ ಎರಡು ಶ್ರದ್ಧಾ ಕೇಂದ್ರಗಳು ಗುಲಾಮಗಿರಿಯಿಂದ ಮುಕ್ತವಾಗಬೇಕು ಎಂದು ಹೇಳಿದ್ದೇನೆ ಎಂದರು.

ಮಂದಿರ ಒಡೆದು ಮಸೀದಿ ನಿರ್ಮಿಸಿರುವ ಈ ಎರಡು ಶ್ರದ್ಧಾ ಕೇಂದ್ರಗಳ ಬಗ್ಗೆ ಹೇಳಿದ್ದೇನೆಯೇ ಹೊರತು ದೇಶದಲ್ಲಿ ಇರುವ ಲಕ್ಷಾಂತರ ಮಸೀದಿ, ಚಚ್‌ರ್‍ಗಳ ಬಗ್ಗೆ ಮಾತನಾಡಿಲ್ಲ. ಅಲ್ಲಿ ಅವರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲಿ. ನನ್ನ ಈ ಹೇಳಿಕೆ ಭವಿಷ್ಯದಲ್ಲಿ ಒಂದು ಆಂದೋಲನವಾದರೆ ಆಗಲಿ, ಸಂತೋಷ ಎಂದು ತಿಳಿಸಿದರು.