Asianet Suvarna News Asianet Suvarna News

ನಿಷೇಧವಿದ್ದರೂ ಫಾಲ್ಸ್‌ಗಳಲ್ಲಿ ಮೋಜು, ಮಸ್ತಿ: ಗೋಕಾಕ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ

ಮಳೆಗಾಲದ ಹಿನ್ನೆಲೆಯಲ್ಲಿ ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಮಲೆನಾಡು ಭಾಗದಲ್ಲಿ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. 

Although there is a ban tourists are crazy about the falls gvd
Author
First Published Jul 8, 2024, 10:44 AM IST

ಬೆಳಗಾವಿ/ಚಿಕ್ಕಮಗಳೂರು (ಜು.08): ಮಳೆಗಾಲದ ಹಿನ್ನೆಲೆಯಲ್ಲಿ ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಮಲೆನಾಡು ಭಾಗದಲ್ಲಿ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಪ್ರವಾಸಿಗರ ಭೇಟಿ ಮಾತ್ರ ಕಡಿಮೆಯಾಗಿಲ್ಲ. ನಿಷೇಧದ ನಡುವೆಯೂ ಭದ್ರತಾ ಸಿಬ್ಬಂದಿಗಳ ಕಣ್ಣಪ್ಪಿಸಿ ಪ್ರವಾಸಿಗರು ಮೋಜು, ಮಸ್ತಿ ನಡೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ. 

ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸುತ್ತಮುತ್ತಲಿನ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಭಾರತದ ನಯಾಗರ ಜಲಪಾತ ಅಂತಾನೇ ಹೆಸರುವಾಸಿಯಾಗಿರುವ ಗೋಕಾಕ ಜಲಪಾತದಲ್ಲಿ ನಯನ ಮನೋಹರ ದೃಶ್ಯ ಸೃಷ್ಟಿಯಾಗಿದೆ. ಹೀಗಾಗಿ, ರಜೆ ದಿನವಾದ ಭಾನುವಾರ ಪ್ರವಾಸಿಗರು ಜಲಪಾತದ ಎದುರು ಹುಚ್ಚಾಟ ನಡೆಸಿದ್ದಾರೆ.

ಡೆಂಘೀ ತುರ್ತು ಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು: ಆರ್.ಅಶೋಕ್

ಗೋಕಾಕ ಜಲಪಾತ 171 ಅಡಿ ಆಳಕ್ಕೆ ಧುಮುಕ್ಕುತ್ತದೆ. ಇಲ್ಲಿ ಭೇಟಿ ನೀಡಿದ ಕೆಲ ಪ್ರವಾಸಿಗರು ಬಂಡೆಯ ಮೇಲೇರಿ ಜಲಪಾತದ ತುತ್ತತುದಿಗೆ ಹೋಗುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಫೋಟೋಗೆ ಪೋಸ್ ಕೊಟ್ಟು, ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಗೋಕಾಕ ಜಲಪಾತದ ತುದಿಗೆ ಹೋಗಿ ಕಾಲು ಜಾರಿ ಬಿದ್ದು ಕೆಲ ಪ್ರವಾಸಿಗರು ಮೃತಪಟ್ಟ ಪ್ರಕರಣಗಳು ನಡೆದಿದ್ದವು. ಇಷ್ಟಾದರೂ ಪ್ರವಾಸಿಗರು ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇನ್ನು, ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹಲವೆಡೆ ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಗಿರಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರು ಇದೀಗ ಜಲಪಾತಗಳ ಪ್ರದೇಶದತ್ತ ಮುಖಮಾಡಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಜಿಲ್ಲೆಯಗಿರಿ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಾಗುವಾಗ ದಾರಿಯುದಕ್ಕೂ ಜಲಪಾತಗಳು ಕಂಡುಬರುತ್ತಿವೆ .ಭಾನುವಾರದಂದು ನಿರೀಕ್ಷೆಗೂ ಮೀರಿ ಪ್ರವಾಸಿಗರು ಜಲಪಾತಗಳ ವೀಕ್ಷಣೆಗೆ ಆಗಮಿಸಿದ್ದರು. 

ಮೈದುಂಬಿದ ತುಂಗಭದ್ರೆ ನದಿಯಂಗಳದಲ್ಲಿ ಅಪರೂಪದ ನೀರುನಾಯಿಗಳ ಚಿನ್ನಾಟ

ತುಂತುರು ಮಳೆ, ದಟ್ಟವಾಗಿ ಕವಿದಿರುವ ಮಂಜಿನ ನಡುವೆ ಇಲ್ಲಿನ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪದಲ್ಲಿ ಕಂಡು ಬರುವ ಜಲಪಾತವನ್ನು ನೋಡಲು ರಸ್ತೆಯ ಉದ್ದಕ್ಕೂ ಜನರು ನಿಂತಿದ್ದರು. ಹಲವೆಡೆ ಪ್ರವಾಸಿಗರು ಮೊಬೈಲ್‌ಗಳಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಈ ಮಧ್ಯೆ, ಕಲ್ಲಿನ ಮೇಲೆ ಹತ್ತಿ ಹುಚ್ಚಾಟ ಮೆರೆಯಲು ಮುಂದಾದವರಿಗೆ ಪೊಲೀಸರು ತಡೆ ಹಾಕುವ ಮೂಲಕ, ಸಂಭವನೀಯ ಅವಘಡ ತಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios