ವನ್ಯಜೀವಿ ಉಪಟಳದಿಂದ ರೈತರು ಭೂಮಿ ಮಾರಾಟ ಮಾಡಲು ಯತ್ನ, ಅಂತಹ ಭೂಮಿ ಖರೀದಿಸಲು ನೆರವಾಗಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಬೆಂಗಳೂರು(ಜು.28): ವನ್ಯಜೀವಿಗಳ ಉಪಟಳದಿಂದ ಕೃಷಿ ಭೂಮಿ ಮಾರಾಟ ಮಾಡಲು ಸಿದ್ಧವಿರುವ ರೈತರಿಂದ ಗಣಿ ಗುತ್ತಿಗೆ ಸಂಸ್ಥೆಗಳು ಜಮೀನು ಖರೀದಿಸಿ ಅರಣ್ಯೀಕರಣಕ್ಕೆ ಒದಗಿಸಲು ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಅರಣ್ಯದಲ್ಲಿ ಗಣಿಗಾರಿಕೆ ಗುತ್ತಿಗೆ ಪಡೆದ ಸಂಸ್ಥೆಗಳು ಪರ್ಯಾಯವಾಗಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಆಗುತ್ತಿಲ್ಲ. ಹೀಗಾಗಿ ಅರಸೀಕೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿರುವ ಕಡೆ ಕೃಷಿ ಭೂಮಿ ಮಾರಾಟ ಮಾಡಲು ರೈತರು ಇಚ್ಛಿಸಿದ್ದಾರೆ. ಇಂತಹ ಭೂಮಿಯನ್ನು ಗುತ್ತಿಗೆ ಕಂಪನಿಗಳು ಖರೀದಿಸಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಚಿವರ ವಿರುದ್ಧ ಸಿಡಿದೆದ್ದ ಶಾಸಕರಿಗೆ ಸಿಎಂ ಸಿದ್ದು ‘ಸಾಂತ್ವನ’

ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅನುಮತಿ ನೀಡಲು ಹಾಗೂ ಬೇರೆ ಬೇರೆ ಸಮಸ್ಯೆ ಬಗೆಹರಿಸಲು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಏಕಗವಾಕ್ಷಿ ವ್ಯವಸ್ಥೆ ಮಾದರಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದರು.

ಈ ಹಿಂದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಪ್ತಿ ಮಾಡಿರುವ 2.7 ದಶಲಕ್ಷ ಮೆಟ್ರಿಕ್‌ ಅದಿರು ಅರಣ್ಯ ಪ್ರದೇಶದಲ್ಲಿದ್ದು, ಅವುಗಳ ವಿಲೇವಾರಿಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಟಾಸ್‌್ಕಫೋರ್ಸ್‌ ಅಡಿ ಬರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಕಲ್ಲು ಗಣಿ ಗುತ್ತಿಗೆದಾರರು ನಿಯಮ ಉಲ್ಲಂಘಿಸಿರುವ ಸಂಬಂಧ ದಂಡ ಸಂಗ್ರಹಿಸಲು ಒಂದು ಬಾರಿಯ ಇತ್ಯರ್ಥ (ಒನ್‌ ಟೈಮ್‌ ಸೆಟಲ್‌ಮೆಂಟ್‌) ಜಾರಿಗೆ ತರುವ ಬಗ್ಗೆ ಸಂಪುಟದ ಮುಂದೆ ಪ್ರಸ್ತಾವನೆ ತರುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಖನಿಜಗಳ ಶೋಧನೆಗೆ ಕೇಂದ್ರ ಸರ್ಕಾರದ ಕೆಐಒಸಿಎಲ್‌ ಮತ್ತು ಎಂಇಸಿಎಲ್‌ ಮೂಲಕ ಕೈಗೊಳ್ಳಲು ಅನುಮತಿ ಪಡೆಯಲು ಸಲ್ಲಿಸಿರುವ ಅರ್ಜಿ ಸಂಬಂಧ ಆಕ್ಷೇಪಣೆಗಳನ್ನು ಸರಿಪಡಿಸಿ ಕ್ಲಿಯರೆನ್ಸ್‌ ಪಡೆಯಲು ಈ ಎರಡು ಸಂಸ್ಥೆಗಳ ಜೊತೆ ಚರ್ಚಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೈಲಾ ತಿದ್ದುಪಡಿಗೆ ಸೂಚನೆ:

ಗಣಿಗಾರಿಕೆ ಪ್ರದೇಶಗಳ ಸಮಗ್ರ ಅಭಿವೃದ್ಧಿ ಸಂಬಂಧ ರಚಿಸಲಾಗಿರುವ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಬೈಲಾ ತಿದ್ದುಪಡಿ ಮಾಡಿ ಮುಖ್ಯಮಂತ್ರಿಗಳನ್ನೇ ನಿಗಮದ ಅಧ್ಯಕ್ಷರನ್ನಾಗಿ ಮಾಡುವಂತೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಮಂತ್ರಿ ಸ್ಥಾನ ಸಿಗದ ಕಾರಣ ಒಂದು ವಾರ ಅಸಮಾಧಾನ ಇತ್ತು, ಈಗ ಇಲ್ಲ: ಶಾಸಕ ಶಿವಲಿಂಗೇಗೌಡ

ಬಳ್ಳಾರಿ, ವಿಜಯನಗರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿನ ಗಣಿ ಬಾಧಿತ 466 ಗ್ರಾಮಗಳ ಅಭಿವೃದ್ಧಿಗೆ ಸುಪ್ರೀಂಕೋರ್ಚ್‌ 24,966.71 ಕೋಟಿ ರು.ಗಳ ಅಂದಾಜು ವೆಚ್ಚದ ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ಪ್ರಾಧಿಕಾರ ಈವರೆಗೆ 7634.96 ಕೋಟಿ ರು. ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಉಳಿದ ಪ್ರಸ್ತಾವನೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಅನುಮೋದನೆ ಪಡೆಯಲು ನಾಲ್ಕು ಜಿಲ್ಲೆಗಳಲ್ಲಿ ಎಂಜಿನಿಯರಿಂಗ್‌ ಕೋಶ ಸ್ಥಾಪಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಿಯಾ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್‌ ಅಹಮದ್‌, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಅರಣ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ರಾಜೇಂದರ್‌ ಕಟಾರಿಯಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.