ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ರೈಲ್ವೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಹುಬ್ಬಳ್ಳಿ (ಫೆ.8): ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಮಾತೃ ಭಾಷೆಯಲ್ಲಿ ಬರೆಯಲು ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ಜನರು ರೈಲ್ವೆಯನ್ನು ಬಹಿಷ್ಕರಿಸುತ್ತಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಿಡಿ ಕಾರಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಶನಿವಾರ ಪ್ರಕಟವಾಗಿರುವ ‘ರೈಲ್ವೆಯಿಂದ ಮತ್ತೆ ಕನ್ನಡಿಗರಿಗೆ ಅನ್ಯಾಯ’ ವರದಿ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದರು. ಮಾತೃಭಾಷೆಗೆ ಆದ್ಯತೆ ನೀಡದಿದ್ದರೆ ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದು ಕರ್ನಾಟಕದ ಹಕ್ಕು ಎಂದು ಸ್ಪಷ್ಟಪಡಿಸಿದರು.

ರೈಲ್ವೆ ಸಚಿವ ಸೋಮಣ್ಣಗೆ ಹೊರಟ್ಟಿ ಪತ್ರ:

ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಕುರಿತು ಶನಿವಾರ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೇಂದ್ರ ಸಚಿವ ವಿ.ಸೋಮಣ್ಣಗೆ ಪತ್ರ ಬರೆದು ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.

‘ಭಾರತದ ಸಂವಿಧಾನ ಮಾನ್ಯತೆ ನೀಡಿರುವ ಭಾಷಾ ವೈವಿಧ್ಯತೆಯ ತತ್ವದ ಅಡಿಯಲ್ಲಿ ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗೆ ಯೋಗ್ಯ ಸ್ಥಾನಮಾನ ಮತ್ತು ಗೌರವ ದೊರಕಿಸಿಕೊಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆಯ ನೇಮಕಾತಿ ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಕನ್ನಡ, ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಕೋಟ್ಯಂತರ ನಾಗರಿಕರ ಮಾತೃ ಭಾಷೆಯಾಗಿದೆ. ಆದ್ದರಿಂದ ರೈಲ್ವೆ ಇಲಾಖೆಯ ನೇಮಕಾತಿ ಹಾಗೂ ಇಲಾಖಾ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ. 

YouTube video player