ಬೆಂಗಳೂರು(ಆ.12): ರಾಜಧಾನಿ ಬೆಂಗಳೂರಿನಲ್ಲಿ ಇರುವ ಕೊರೋನಾ ಆರೈಕೆ ಕೇಂದ್ರಗಳಲ್ಲಿನ ರೋಗಿಗಳ ಮೇಲೆ ನಿಗಾ ಇಡಲು ಸಿಸಿಟಿವಿ ಅಳವಡಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರಿಗೆ ವಿಧಾನ ಮಂಡಳದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನಿರ್ದೇಶನ ನೀಡಿದೆ.

ಮಂಗಳವಾರ ವಿಧಾನಸೌಧದಲ್ಲಿ ಕೊರೋನಾ ಆರೈಕೆ ಕೇಂದ್ರಗಳ ನಿರ್ವಹಣೆ ಕುರಿತು ಬಂದಿರುವ ದೂರುಗಳ ಸಂಬಂಧ ನಡೆದ ಸಭೆಯಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ರೋಗಿ ನಿಗಾ ವಹಿಸಬೇಕು. ಊಟ, ತಿಂಡಿ, ಚಿಕಿತ್ಸೆ ಬಗ್ಗೆಯೂ ಸಹ ಗಮನ ಹರಿಸಬೇಕು. ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 15 ಜನರಿಗೆ ಒಂದು ಶೌಚಾಲಯ ವ್ಯವಸ್ಥೆ ಇದ್ದು, ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಮಾತನಾಡಿದ ಅನೇಕ ಸದಸ್ಯರು, ರೋಗಿಗಳಿಗೆ ಸರಿಯಾಗಿ ಊಟೋಪಚಾರ ಸೌಲಭ್ಯ ಸಿಗುತ್ತಿಲ್ಲ, ಸ್ವಚ್ಛತೆ ಕಾಪಾಡುತ್ತಿಲ್ಲ, ಕೆಲ ಆಸ್ಪತ್ರೆಗಳಲ್ಲಿ ರೋಗಿಗಳು ಹೊರ ಹೋಗದಂತೆ ಕೈ ಕಾಲು ಕಟ್ಟಿ ಹಾಕಲಾಗುತ್ತಿದೆ ಎಂಬ ದೂರಿದರು.

ಕೊರೋನಾ; ಮೃತಪಟ್ಟ ತಂದೆ ದೇಹ ನೋಡಲು ಸ್ಮಶಾನದಲ್ಲಿ ಆಸ್ಪತ್ರೆಯ ಚೌಕಾಶಿ ವ್ಯವಹಾರ!

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌, ಖಾಸಗಿ ಆಸ್ಪತ್ರೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು. ಅನೇಕ ಸದಸ್ಯರು ಕೆಲವು ಕಡೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಸೋಂಕಿತರು ಓಡಿ ಹೋಗಬಾರದೆಂದು ಅವರ ಕೈ ಕಾಲು ಕಟ್ಟಿ ಹಾಕಲಾಗುತ್ತಿದೆ ಎಂಬ ವಿಷಯ ಸಭೆಯಲ್ಲಿ ಚರ್ಚೆ ಆಯಿತು. ಆದರೆ ಪಾಲಿಕೆ ಆಯುಕ್ತರು ಇದನ್ನು ತಳ್ಳಿ ಹಾಕಿದರು ಎಂದರು. ಸಮಿತಿಯ ಸದಸ್ಯರಾದ ಸತೀಶ್‌ ರೆಡ್ಡಿ, ಎ.ಎಸ್‌.ಪಾಟೀಲ್‌ ನಡಹಳ್ಳಿ, ರವಿ ಸುಬ್ರಹ್ಮಣ್ಯ, ನಾರಾಯಣಸ್ವಾಮಿ, ಸಿ.ಎಂ. ಇಬ್ರಾಹಿಂ, ಸಿ.ಎನ್‌. ಬಾಲಕೃಷ್ಣ, ಡಿ.ಸಿ. ನಾಗೇಶ್‌ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಶಾಸಕ ಸತೀಶ್‌ ರೆಡ್ಡಿ, ಬೆಂಗಳೂರಿನ ಕೆಲ ಆಸ್ಪತ್ರೆಗಳು ರೋಗಿಗಳನ್ನು ಹೀನಾಯ ರೀತಿಯಲ್ಲಿ ನೋಡಿಕೊಳ್ಳುತ್ತಿವೆ. ಓಡಿ ಹೋಗಬಾರದೆಂದು ಸೋಂಕಿತರ ಕೈ ಕಾಲು ಕಟ್ಟಿಚಿಕಿತ್ಸೆ ನೀಡಲಾಗುತ್ತಿದೆ, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸೋಂಕಿತರು ಮೃತಪಟ್ಟರೆ ಕುಟುಂಬದವರು ಅವರ ಮುಖ ನೋಡಲು ಅವಕಾಶವಾಗುವಂತೆ ಪ್ಲಾಸ್ಟಿಕ್‌ನಿಂದ ಮುಚ್ಚಬೇಕು ಎಂದು ಸಲಹೆ ನೀಡಿದರು.

ಸೋಂಕು ಹಬ್ಬುವ ಭೀತಿ:

ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿ ಮಾತನಾಡಿ, ಕೋವಿಡ್‌ ಪರೀಕ್ಷೆ ಮಾಡಿದ ನಂತರ ಅವರನ್ನು ಮನೆಗೆ ಕಳುಹಿಸಿದರೆ, ಅಂತಹವರು ಮನೆ ಸೇರಿದಂತೆ ಎಲ್ಲ ಕಡೆ ಓಡಾಡುತ್ತಾರೆ. ಒಂದು ವೇಳೆ ಸೋಂಕು ಇದ್ದರೆ ಎಲ್ಲರಿಗೂ ಹರಡಿಸುತ್ತಾರೆ. ಹಾಗಾಗಿ ಪರೀಕ್ಷಾ ವರದಿ ಬರುವವರೆಗೆ ಅವರನ್ನು ಮನೆಗೆ ಕಳುಹಿಸಬಾರದು, ಈ ಬಗ್ಗೆ ಗಮನ ಹರಿಸಬೇಕು ಎಂದರು.