ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ದಾಖಲೆಯ 307.9 ಮಿಮೀ ಮಳೆಯಾಗಿದೆ. 2023ಕ್ಕಿಂತ ಹೆಚ್ಚು ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಗಳಿವೆ.

ಬೆಂಗಳೂರು (ಮೇ.27) : ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯ ಅಬ್ಬರದಿಂದಾಗಿ ಬೆಂಗಳೂರಿನಲ್ಲಿ ಮೇ ತಿಂಗಳ ದಾಖಲೆಯ 307.9 ಮಿಮೀ ಮಳೆಯಾಗಿದೆ.

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತ, ಪೂರ್ವ ಮುಂಗಾರಿನ ಜತೆಗೆ ಇದೀಗ ಮುಂಗಾರಿನ ಕಾರಣದಿಂದಾಗಿ ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ ಸತತವಾಗಿ ಮಳೆಯಾಗಿದೆ. ಅದರಲ್ಲೂ ಕಳೆದ ಮೇ 18-19ರಂದು ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ತತ್ತರಿಸಿದೆ. ಅದಾದ ನಂತರವೂ ನಿರಂತರವಾಗಿ ಮಳೆಯಾಗಿದೆ. ಹೀಗೆ ನಿರೀಕ್ಷೆಗೂ ಮೀರಿ ಮಳೆಯಾದ ಪರಿಣಾಮ ಈ ಬಾರಿಯ ಮೇ ತಿಂಗಳಲ್ಲಿ ಈ ಹಿಂದಿಗಿಂತ ಅತಿ ಹೆಚ್ಚಿನ ಮಳೆ ದಾಖಲಾಗಿದೆ.

ಈ ಹಿಂದೆ 2023ರ ಮೇ ತಿಂಗಳಲ್ಲಿ 305.4 ಮಿಮೀ ಮಳೆ ಸುರಿದಿದ್ದೇ ಅತಿಹೆಚ್ಚಿನ ಪ್ರಮಾಣವಾಗಿತ್ತು. ಅದಕ್ಕೂ ಮುಂಚೆ 2022ರಲ್ಲಿ 270.2 ಮಿಮೀ ಮಳೆ ಸುರಿದಿತ್ತು. ಅದನ್ನು ಹೊರತುಪಡಿಸಿದರೆ ಯಾವುದೇ ವರ್ಷದ ಮೇ ತಿಂಗಳಲ್ಲಿ ಮಳೆಯ ಪ್ರಮಾಣ 250 ಮಿಮೀ ದಾಟಿರಲಿಲ್ಲ. ಈ ವರ್ಷ ಮೇ 1ರಿಂದ ಮೇ 26ರವರೆಗೆ ಒಟ್ಟು 307.9 ಮಿಮೀ ಮಳೆ ಸುರಿದಿದೆ. ಮೇ ತಿಂಗಳ ಅಂತ್ಯಕ್ಕೆ ಇನ್ನೂ 5 ದಿನಗಳಿರುವ ಕಾರಣ ಮಳೆಯ ಪ್ರಮಾನ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

ಇಂದಿನಿಂದ ಬಿಡುವು ನೀಡಲಿರುವ ಮಳೆ

ಬೆಂಗಳೂರಿನಲ್ಲಿ ಸತತ 10 ದಿನಗಳವರೆಗೆ ಭಾರೀ ಮಳೆಯಾದ ನಂತರ ಮಂಗಳವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಮುಂದಿನ 7 ದಿನಗಳಲ್ಲಿ ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಅದನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಈ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅದನ್ನು ಹೊರತುಪಡಿಸಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ.

ಈವರೆಗೆ ಮೇ ತಿಂಗಳಲ್ಲಿ ಅತಿಹೆಚ್ಚು ಮಳೆ ಸುರಿದ ವರದಿ

ವರ್ಷ ಮಳೆಯ ಪ್ರಮಾನ

  • 2025 ಮೇ 307.9 ಮಿಮೀ
  • 2023 ಮೇ 305.4 ಮಿಮೀ
  • 2022 ಮೇ 270.4 ಮಿಮೀ
  • 2017 ಮೇ 241.9 ಮಿಮೀ
  • 2018 ಮೇ 239.8 ಮಿಮೀ
  • 2024 ಮೇ 181.5 ಮಿಮೀ