ರಾಜ್ಯದ ಎಲ್ಲ ಡ್ಯಾಂಗಳು ಸುರಕ್ಷಿತ: ತುಂಗಾರತಿ ಮಾದರಿಯಲ್ಲಿ ಕೃಷ್ಣಾರತಿ ಎಂದ ಡಿಕೆಶಿ

ತುಂಗಭದ್ರಾ ಡ್ಯಾಮ್‌ ಅನ್ನು ಬಹಳ ವ್ಯವಸ್ಥಿತವಾಗಿ ಸರಿ ಮಾಡಲಾಗಿದ್ದು, ಅದರಂತೆ ರಾಜ್ಯದ ಎಲ್ಲ ಡ್ಯಾಂಗಳು ಸುರಕ್ಷಿತವಾಗಿವೆ. ಡ್ಯಾಂಗಳ ಸುರಕ್ಷತೆ ವಿಚಾರದಲ್ಲಿ ತಂಡ ರಚನೆ ಮಾಡಿ ಎಲ್ಲಕಡೆ ತಪಾಸಣೆ ಮಾಡಲಾಗುತ್ತಿದೆ. 

All the dams of karnataka are safe krishnarati on the model of Tungarati says dk shivakumar gvd

ವಿಜಯಪುರ (ಆ.22): ತುಂಗಭದ್ರಾ ಡ್ಯಾಮ್‌ ಅನ್ನು ಬಹಳ ವ್ಯವಸ್ಥಿತವಾಗಿ ಸರಿ ಮಾಡಲಾಗಿದ್ದು, ಅದರಂತೆ ರಾಜ್ಯದ ಎಲ್ಲ ಡ್ಯಾಂಗಳು ಸುರಕ್ಷಿತವಾಗಿವೆ. ಡ್ಯಾಂಗಳ ಸುರಕ್ಷತೆ ವಿಚಾರದಲ್ಲಿ ತಂಡ ರಚನೆ ಮಾಡಿ ಎಲ್ಲಕಡೆ ತಪಾಸಣೆ ಮಾಡಲಾಗುತ್ತಿದೆ. ತಂಡದಲ್ಲಿ ಕೇಂದ್ರದ ಅಧಿಕಾರಿಗಳು ಸೇರಿ ಸಮಿತಿ ರಚಿಸಿದ್ದು, ಯಾರ್‍ಯಾರು ಸದಸ್ಯರಿದ್ದಾರೆ ಎಂದು ಟ್ವಿಟ್ ಮಾಡಿ ತಿಳಿಸುವುದಾಗಿ ಉಪಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಮಳೆ‌ ಬರಲ್ಲ ಎಂಬ ಟೀಕೆ ಇತ್ತು. ಆದರೆ ಪ್ರಕೃತಿಗೆ ಯಾವ ಸರ್ಕಾರ ಇದೆ ಎಂಬುದು ಗೊತ್ತಿಲ್ಲ. ಕಳೆದ ಬಾರಿ ಬರಗಾಲ ಆವರಿಸಿದ್ದರಿಂದ 220ಕ್ಕೂ ಹೆಚ್ಚು ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದವು. ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಆಲಮಟ್ಟಿ ಡ್ಯಾಂ ಎತ್ತರಕ್ಕೆ ಕೇಂದ್ರ ಸರ್ಕಾರ ನೋಟಿಫಿಕೇಷನ್‌ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ತುಂಗಭದ್ರೆಗೂ ಶೀಘ್ರ ಬಾಗಿನ: ಇಲ್ಲಿಗೆ ಬರುವಾಗ ತುಂಗಭದ್ರ ಅಣೆಕಟ್ಟು ನೋಡಿದೆವು, ಅದು ಕೂಡ ಭರ್ತಿ ಹಂತದಲ್ಲಿದೆ. ಡ್ಯಾಂ ಗೇಟ್ ತುಂಡಾಗಿದ್ದಕ್ಕೆ ಸಾಕಷ್ಟು ಟೀಕೆಗಳ ಸುರಿಮಳೆ ಇತ್ತು. ಅದು 70 ವರ್ಷಗಳ ಹಿಂದೆ ಆಗಿದ್ದ ಡ್ಯಾಂ. ಚೈನ್ ಕಟ್ಟಾಗಿ 19ನೇ ಗೇಟ್ ಮುರಿದಿತ್ತು. ಆದರೂ ತ್ವರಿತವಾಗಿ ಕೇವಲ ಐದು ದಿನಗಳಲ್ಲೇ ರೆಡಿ ಮಾಡಿಸಿದ್ದೇವೆ. ಇದಕ್ಕೆ ಸಹಕಾರ, ಬೆಂಬಲ ಕೊಟ್ಟ ಕಾರ್ಮಿಕರು, ಅಧಿಕಾರಿಗಳಿಗೆ ಸನ್ಮಾನ ಮಾಡಿ ಶೀಘ್ರದಲ್ಲೇ ಬಾಗಿನ ಅರ್ಪಿಸಲಿದ್ದೇವೆ ಎಂದು ಹೇಳಿದರು.

100 ಟಿಎಂಸಿ ಬಿಟ್ಟಿದ್ದೇವೆ: ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ 70 ಟಿಎಂಸಿ ನೀರು ಬಿಡಬೇಕು ಎಂಬ ಕಂಡಿಷನ್ ಇದ್ದರೂ ನಾವು 100 ಟಿಎಂಸಿ ನೀರು ಬಿಟ್ಟಿದ್ದೇವೆ. ನೀರನ್ನು ನಾವು ಹಿಡಿದುಕೊಳ್ಳಬಾರದು ಎಂದು ಬಿಟ್ಟಿದ್ದೇವೆ. ಈಗಾಗಲೇ ನಾವು ಮೇಕೆದಾಟು ಯೋಜನೆ ಬೇಕು ಎಂದು ಒತ್ತಾಯಿಸಿದ್ದು, ನ್ಯಾಯಾಲಯ ನ್ಯಾಯ ಕೊಡಲಿದೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುಂಗಾರತಿ ಮಾದರಿಯಲ್ಲಿ ಕೃಷ್ಣಾರತಿ: ತುಂಗಾರತಿ ಮಾದರಿಯಲ್ಲಿಯೇ ಆಲಮಟ್ಟಿಯಲ್ಲೂ ಕೃಷ್ಣಾರತಿ, ಗಂಗಾಪೂಜೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಇಲ್ಲಿನ ಸಚಿವರು ನೀಡಿದ್ದಾರೆ. ಈ ಕುರಿತು ತೀರ್ಮಾನ ಮಾಡಲಾಗುವುದು. ಆಲಮಟ್ಟಿಯಲ್ಲಿ ಟೂರಿಸ್ಟ್ ಆಕರ್ಷಣೆಗೆ ಏನು ಕಾರ್ಯಕ್ರಮ ಮಾಡಬೇಕು ಅದನ್ನು ಮಾಡಲಾಗುವುದು ಎಂದು ತಿಳಿಸಿದರು.

ಆನೆ ಹೋಗುತ್ತಿರುತ್ತೆ, ನರಿಯೊಂದು ಅದೇನೋ ಬೀಳುತ್ತೇ ಅಂಥ ಕಾಯ್ತಿರುತ್ತೆ: ಸಚಿವ ಮಹದೇವಪ್ಪ

ಡಿ ನೋಟಿಫಿಕೇಷನ್ ವಿಚಾರ: ಸತ್ತವರ ಮೇಲೂ ಡಿ ನೋಟಿಫಿಕೇಷನ್ ಮಾಡಲಾಗಿದೆ ಎಂಬ ಆರೋಪ ವಿಚಾರಕ್ಕೆ ಗರಂ ಆದ ಡಿಕೆಶಿ, ನಿಮಗೆ ಕಾನೂನು ಗೊತ್ತಿಲ್ಲ. ಯಾವುದೇ ವ್ಯವಹಾರ ಹಾಗೂ ಪ್ರಕ್ರಿಯೆ ಆಗೋದು ಸರ್ವೆ ನಂಬರ್ ಮೇಲೆ. ವ್ಯಕ್ತಿ‌ ಮೇಲೆ ಅಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios