Asianet Suvarna News Asianet Suvarna News

ಕಸ್ತೂರಿರಂಗನ್‌ ವರದಿಗೆ ಪಕ್ಷಾತೀತವಾಗಿ ವಿರೋಧ

ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಶಾಸಕರು ಅಭಿಪ್ರಾಯ ನೀಡಿದ್ದಾರೆ. ಪರಿಸರ, ಅರಣ್ಯ ಸಂರಕ್ಷಣೆಯ ಜತೆಗೆ ಅಲ್ಲಿನ ಜನರನ್ನೂ ರಕ್ಷಿಸಬೇಕಿದೆ. ಯಾರನ್ನೂ ಒಕ್ಕಲೆಬ್ಬಿಸದೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ: ಅರಣ್ಯ ಸಚಿವ ಈಶ್ವರ ಖಂಡ್ರೆ

All Party Opposition to the Kasthurirangan report in Karnataka grg
Author
First Published Sep 20, 2024, 6:00 AM IST | Last Updated Sep 20, 2024, 6:00 AM IST

ಬೆಂಗಳೂರು(ಸೆ.20):  ಪಶ್ಚಿಮಘಟ್ಟ ವ್ಯಾಪ್ತಿಯ ಗ್ರಾಮಗಳ ಜನರ ಅನುಕೂಲಕ್ಕಾಗಿ ಕಸ್ತೂರಿ ರಂಗನ್‌ ನೀಡಿರುವ ವರದಿಯನ್ನು ರಾಜ್ಯದ ಪರವಾಗಿ ತಿರಸ್ಕರಿಸಿ ಹಾಗೂ ಅರಣ್ಯ ಇಲಾಖೆ ಈಗಾಗಲೇ ನಿಗದಿ ಮಾಡಿರುವ ಪರಿಸರ ಸೂಕ್ಷ್ಮ ವಲಯದ ಮರು ಸರ್ವೇ ನಡೆಸುವಂತೆ ಪಶ್ಚಿಮಘಟ್ಟ ವ್ಯಾಪ್ತಿಯ 11 ಜಿಲ್ಲೆಗಳ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಅರಣ್ಯ ಸಚಿವರನ್ನು ಆಗ್ರಹಿಸಿದ್ದಾರೆ.

‘ಕಸ್ತೂರಿ ರಂಗನ್‌ ವರದಿ ಆಧಾರದಲ್ಲಿ ರಾಜ್ಯ ವ್ಯಾಪ್ತಿಯಲ್ಲಿನ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ 20,668 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಬೇಕು’ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿತ್ತು. ಈ ಕುರಿತು ಪಶ್ಚಿಮಘಟ್ಟ ವ್ಯಾಪ್ತಿಯ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಗುರುವಾರ ಸಭೆ ನಡೆಯಿತು.

ಕಸ್ತೂರಿರಂಗನ್‌ ವರದಿ ಅವೈಜ್ಞಾನಿಕ: ರವೀಂದ್ರ ನಾಯ್ಕ

ಸಭೆಯಲ್ಲಿ ಪಕ್ಷಾತೀತವಾಗಿ ಸಚಿವರು ಹಾಗೂ ಶಾಸಕರು, ‘ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಪಶ್ಚಿಮಘಟ್ಟ ಅರಣ್ಯ ಪ್ರದೇಶವಿರುವ ಜಿಲ್ಲೆಗಳ ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ವರದಿಯಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸದೆ ತಿರಸ್ಕರಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ರಾಜ್ಯದಿಂದ ನೀಡುವ ಉತ್ತರದ ವೇಳೆಯೂ ತಿಳಿಸಬೇಕು. ಹಾಗೆಯೇ, ಪರಿಸರ ಸೂಕ್ಷ್ಮ ವಲಯ ಗುರುತಿಸುವ ಸಂಬಂಧ ಈಗಾಗಲೇ ನಿಗದಿ ಮಾಡಲಾಗಿರುವ 16,114 ಚದರ ಕಿಮೀ ಭೂಪ್ರದೇಶವನ್ನು ಮರು ಸರ್ವೇ ನಡೆಸಬೇಕು. ಒಟ್ಟಾರೆ ಕಸ್ತೂರಿ ರಂಗನ್‌ ವರದಿಯನ್ನಾಧರಿಸಿ ಯಾರನ್ನೂ ಒಕ್ಕಲೆಬ್ಬಿಸದೆ, ಜನರನ್ನು ರಕ್ಷಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಸಭೆ ನಂತರ ಮಾತನಾಡಿದ ಈಶ್ವರ್‌ ಖಂಡ್ರೆ, ’ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಶಾಸಕರು ಅಭಿಪ್ರಾಯ ನೀಡಿದ್ದಾರೆ. ಪರಿಸರ, ಅರಣ್ಯ ಸಂರಕ್ಷಣೆಯ ಜತೆಗೆ ಅಲ್ಲಿನ ಜನರನ್ನೂ ರಕ್ಷಿಸಬೇಕಿದೆ. ಯಾರನ್ನೂ ಒಕ್ಕಲೆಬ್ಬಿಸದೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಸ್ತೂರಿ ರಂಗನ್‌ ವರದಿ ಜಾರಿ ಕುರಿತು ಕೇಂದ್ರದಿಂದ 6ನೇ ಅಧಿಸೂಚನೆ ಪ್ರಕಟವಾಗಿದೆ. ಅದರ ಮೇಲೆ ನಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಕಸ್ತೂರಿ ರಂಗನ್‌ ವರದಿ ಅವೈಜ್ಞಾನಿಕವಾಗಿದ್ದು, ಅದರಿಂದ ಜನರ ಜೀವನ ದುಸ್ತರವಾಗಲಿದೆ. ಎಲ್ಲ ಶಾಸಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದರು.

ಕಸ್ತೂರಿರಂಗನ್‌ ವರದಿಯಲ್ಲಿ 20,668 ಚದರ ಕಿಮೀ ವ್ಯಾಪ್ತಿಯ ಪಶ್ಚಿಮಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಸಂರಕ್ಷಿಸುವಂತೆ ತಿಳಿಸಲಾಗಿದೆ. ಆದರೆ, ಈಗಾಗಲೇ ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳಲ್ಲಿ 16,114 ಚದರ ಕಿಮೀ ಅರಣ್ಯವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಸಂರಕ್ಷಿಸಲಾಗಿದೆ. ಆ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್‌ ವರದಿಯನ್ನು ಸಮ್ಮತಿಸಬಹುದು. ಅಲ್ಲದೆ, ಜನಪ್ರತಿನಿಧಿಗಳು ಕೂಡ 16,114 ಚದರ ಕಿಮೀ ಪರಿಸರ ಸೂಕ್ಷ್ಮ ಪ್ರದೇಶದ ಮಿತಿಯನ್ನು ಹೆಚ್ಚಿಸಿದರೆ ಅರಣ್ಯದಂಚಿನ ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಬಫರ್‌ ವಲಯವನ್ನು ಶೂನ್ಯಕ್ಕೆ ತರುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಸಿಎಂ ಜತೆ ಚರ್ಚೆ, ಮಾಸಾಂತ್ಯಕ್ಕೆ ವರದಿ ಸಲ್ಲಿಕೆ

ಕಸ್ತೂರಿ ರಂಗನ್‌ ವರದಿ, ಕೇಂದ್ರ ಸರ್ಕಾರದ ಅಧಿಸೂಚನೆ ಹಾಗೂ ಜನಪ್ರತಿನಿಧಿಗಳಿಂದ ವ್ಯಕ್ತವಾಗಿರುವ ಅಭಿಪ್ರಾಯಗಳ ಕುರಿತು ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗುವುದು. ತಜ್ಞರೊಂದಿಗೂ ಚರ್ಚೆ ನಡೆಸಲಾಗುತ್ತದೆ. ಅದಾದ ನಂತರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಮಾಸಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಈಶ್ವರ್‌ ಖಂಡ್ರೆ ವಿವರಿಸಿದರು.
ಸಚಿವರಾದ ಕೆ.ಜೆ. ಜಾರ್ಜ್‌, ಡಾ. ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಮಧು ಬಂಗಾರಪ್ಪ, ಮಂಕಾಳ ವೈದ್ಯ, ವಿಧಾಪರಿಷತ್‌ ಉಪ ಸಭಾಪತಿ ಪ್ರಾಣೇಶ್‌, ಶಾಸಕರಾದ ಪೊನ್ನಣ್ಣ, ಆರಗ ಜ್ಞಾನೇಂದ್ರ, ಸುನೀಲ್‌ ಕುಮಾರ್‌, ನಯನಾ ಮೋಟಮ್ಮ, ರಾಜೇಗೌಡ, ಹರೀಶ್‌ ಪೂಂಜಾ, ಸಂಸದ ಶ್ರೇಯಸ್‌ ಪಟೇಲ್ ಇತರರಿದ್ದರು.

ಪಶ್ಚಿಮಘಟ್ಟ ಕುರಿತ ಕಸ್ತೂರಿರಂಗನ್‌ ವರದಿ ತಿರಸ್ಕಾರ, ರಾಜ್ಯದ ಮಹತ್ವದ ನಿರ್ಧಾರ!

ವಿಶೇಷ ಪ್ಯಾಕೇಜ್‌ ನೀಡಲು ಕೇಂದ್ರಕ್ಕೆ ಒತ್ತಾಯ

ಈಗಾಗಲೇ ಇರುವ 16,114 ಚದರ ಕಿಮೀ ಪರಿಸರ ಸೂಕ್ಷ್ಮ ವಲಯ ನಿಗದಿಗೆ ಅಂಗಿಕಾರ ನೀಡಿದರೆ ಆ ಪ್ರದೇಶದಲ್ಲಿನ 1,576 ಗ್ರಾಮಗಳ ಜನರ ಜೀವನೋಪಾಯಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಆ ಗ್ರಾಮಗಳ ಜನರಿಗಾಗಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯಿಸಲಾಗುವುದು. ಪಶ್ಚಿಮಘಟ್ಟ ಸಂರಕ್ಷಣೆ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರದೆ ಕೇಂದ್ರ ಸರ್ಕಾರದ್ದೂ ಆಗಿದೆ. ಹೀಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಈಶ್ವರ್‌ ಖಂಡ್ರೆ ತಿಳಿಸಿದರು.

ಮಾಸಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ

ಕಸ್ತೂರಿ ರಂಗನ್‌ ವರದಿ ಅವೈಜ್ಞಾನಿಕವಾಗಿದ್ದು, ಅದರಿಂದ ಜನರ ಜೀವನ ದುಸ್ತರವಾಗಲಿದೆ. ಎಲ್ಲ ಶಾಸಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪುಟ ಉಪಸಮಿತಿ, ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಅದಾದ ನಂತರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಮಾಸಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios