ಬಳ್ಳಾರೀಲಿ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಈ ಬಾರಿ ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ನಡೆಸುವ ಕುರಿತು ಚರ್ಚೆಗಳು ಸಾಗಿದ್ದವು. ಆದರೆ ಅಂತಿಮವಾಗಿ ಮುಂದಿನ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಿರುವುದು ಬಿಸಿಲೂರು ಜನರಲ್ಲಿ ಸಂತಸ ತಂದಿದೆ.
ಮಂಜುನಾಥ ಕೆ.ಎಂ.
ಮಂಡ್ಯ(ಡಿ.22): 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ 68 ವರ್ಷಗಳ ಬಳಿಕ ಗಣಿನಾಡಿಗೆ ನುಡಿತೇರು ಎಳೆಯುವ ಅವಕಾಶ ಸಿಕ್ಕಂತಾಗಿದೆ.
ನಗರದಲ್ಲಿ ಶನಿವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಜರುಗಿದ ಎಲ್ಲ ಜಿಲ್ಲೆಗಳ ಕಸಾಪ ಪ್ರತಿನಿಧಿಗಳ ಸಭೆಯಲ್ಲಿ ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಕಳೆದ ಬಾರಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ 87ನೇ ಸಮ್ಮೇಳನ ಬಳ್ಳಾರಿಗೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬಂತು. ಆದರೆ ಕೊನೆ ಗಳಿಗೆಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಈ ಬಾರಿ ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ನಡೆಸುವ ಕುರಿತು ಚರ್ಚೆಗಳು ಸಾಗಿದ್ದವು. ಆದರೆ ಅಂತಿಮವಾಗಿ ಮುಂದಿನ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಿರುವುದು ಬಿಸಿಲೂರು ಜನರಲ್ಲಿ ಸಂತಸ ತಂದಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಗೊರುಚ ಉಘೆ ಉಘೆ:
1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಸುದೀರ್ಘ 66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ ದಕ್ಕಿದೆ.
ಎರಡನೇ ದಿನವೂ ಜನ ಸಾಗರ
ಮಂಡ್ಯ: ಸಾಹಿತ್ಯ ಸಮ್ಮೇಳನದ ಮೊದಲ ದಿನ ಇಡೀ ದಿನ ತಂಡೋಪ ತಂಡವಾಗಿ ಲಕ್ಷಾಂತರ ಮಂದಿ ಭೇಟಿ ನೀಡಿದಂತೆ ಎರಡನೇ ದಿನವಾದ ಶನಿವಾರ ಕೂಡ ಸಾಕಷ್ಟು ಸಂಖ್ಯೆಯ ಜನ ಸಮ್ಮೇಳನಕ್ಕೆ ಆಗಮಿಸಿದರು. ಆದರೆ ವೇದಿಕೆ, ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ಪೂರ್ವಾಹ್ನ ಸಾರ್ವಜನಿಕರು ಮತ್ತು ಸಾಹಿತ್ಯಾಸಕ್ತರ ಪಾಲ್ಗೊಳ್ಳುವಿಕೆ ವಿರಳ ಎನಿಸಿದರೂ, ಮಧ್ಯಾಹ್ನವಾಗುತ್ತಿದ್ದಂತೆ ಯಥೇಚ್ಛ ಸಂಖ್ಯೆಯ ಮಂದಿ ಆಗಮಿಸತೊಡಗಿದರು.
ಜಿಲ್ಲಾಡಳಿತದಿಂದ ಸಮ್ಮೇಳನ ಸ್ಥಳಕ್ಕೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಆಟೋ, ಮತ್ತಿತರ ವಾಹನಗಳ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡರು. ಆದರೆ ಹೆಚ್ಚಿನ ಜನ ವೇದಿಕೆಯತ್ತ ಸುಳಿಯದೆ, ಪುಸ್ತಕ ಮಳಿಗೆ, ಊಟದ ಮಳಿಗೆ, ವಾಣಿಜ್ಯ ಮಳಿಗೆಗಳತ್ತ ಹೆಜ್ಜೆ ಹಾಕಿದರು.
ಸಂಜೆ ಆಗುತ್ತಿದ್ದಂತೆಯೇ ಪ್ರಧಾನ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಮುಗಿಬಿದ್ದರು. ಪ್ರಧಾನ ವೇದಿಕೆ, ಸಮಾನಂತರ ವೇದಿಕೆ 1 ಮತ್ತು 2 ರಲ್ಲಿಯೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ವಿರಳವಾಗಿತ್ತು. ಸಾಹಿತ್ಯಾಸಕ್ತರುಮಾತ್ರವೇ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.
ಸಮಾನಂತರ ವೇದಿಕೆಯ ಹಿಂದಿನ ಸಾಲಿನಲ್ಲಿ ಕುಳಿತ ಅನೇಕರು ತಮ್ಮದೇ ಮಾತುಕತೆಯಲ್ಲಿ ತೊಡಗಿದ್ದರು. ಬಿಸಿಲಿಗೆ ನೆರಳು ಆಶ್ರಯಿಸಿ ಬಂದು ಕುಳಿತವರೂ ಅಲ್ಲಿದ್ದರು. ಹೀಗೆ ಬಂದು ಕುಳಿತು ಹರಟಿದವರು ಗೋಷ್ಠಿಗಳಿಗೆ ಕಿರಿಕಿರಿಯನ್ನುಂಟು ಮಾಡಿದ್ದು, ನೈಜ ಸಾಹಿತ್ಯ ಪ್ರೇಮಿಗಳ ಕಣ್ಣು ಕೆಂಪಾಗಿಸಿತು. ಮಂಡ್ಯದಲ್ಲಿ ಆರಂಭವಾದ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಮನಸ್ಸುಗಳಿಂದ ನಿರೀಕ್ಷೆಗೂ ಮೀರಿದ ಒಲವು ವ್ಯಕ್ತವಾಯಿತು.
ಸೀರೆ, ಆಟಿಕೆ ಭರ್ಜರಿ ವ್ಯಾಪಾರ
ಮಂಡ್ಯ: ಇವರು ಜೀವನ ಕಟ್ಟಿಕೊಳ್ಳುವುದಕ್ಕಾಗಿ ಎಲ್ಲಿಂದಲೋ ಬಂದವರು. ಸಣ್ಣ-ಪುಟ್ಟ ವಸ್ತುಗಳನ್ನು ಮಾರಾಟ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡವರು. ಜನಸಾಮಾನ್ಯರ ಕೈಗಟುಕುವ ಬೆಲೆಗೆ ವಿಭಿನ್ನ ಮಾದರಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾ ಜನರನ್ನು ಆಕರ್ಷಿಸುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದು ಕಂಡುಬಂದದ್ದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಜಾಗದಲ್ಲಿ. ಇಲ್ಲಿನ ರಸ್ತೆ ಬದಿಗಳಲ್ಲಿ ನೂರಾರು ಅಂಗಡಿಗಳು ತಲೆ ಎತ್ತಿವೆ.
ಚೂಡಿದಾರ್, ಸೀರೆ, ಟೀ-ಶರ್ಟ್, ಪ್ಯಾಂಟ್, ಪಾತ್ರೆ, ಆ್ಯಂಟಿಕ್‌ಗಳು, ಬೊಂಬೆ, ಮಕ್ಕಳ ಆಟದ ಸಾಮಗ್ರಿ, ರಂಗೋಲಿ ಅರಳಿಸುವ ವಸ್ತುಗಳು, ಕಬ್ಬಿನ ಜ್ಯೂಸ್, ಎಳನೀರು ಸೇರಿ ನಾನಾ ಬಗೆಯ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.
ಕನ್ನಡ ಉಳಿವಿಗೆ ಶಿಕ್ಷಣದಲ್ಲಿ ಬದಲಾವಣೆ ಬೇಕು: ಸಿಎಂ ಸಿದ್ದರಾಮಯ್ಯ
ಈ ವ್ಯಾಪಾರಿಗಳೆಲ್ಲರೂ ಸಂಘ ಮಾಡಿಕೊಂಡಿದ್ದು, ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆದಾಗ ಆ ವಿಚಾರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಅದರಂತೆ ಎಲ್ಲರೂ ಅಲ್ಲಿಗೆ ಬಂದು ವ್ಯಾಪಾರದಲ್ಲಿ ನಿರತರಾಗುತ್ತಾರೆ.
ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಣ್ಣಿಗೆ ಕಂಡ, ಮನಸ್ಸಿಗೆ ಇಷ್ಟವಾದ, ಮಕ್ಕಳಿಗೆ ಆಪ್ತವೆನಿಸಿದ ಸಾಮಗ್ರಿ, ಅಂದ-ಚೆಂದದ ಬೊಂಬೆ ಖರೀದಿಸುತ್ತಿದ್ದುದು ಕಂಡುಬಂದಿತು. 50 ರು.ಗೆ ಚೂಡಿದಾರ್, 100 ರು.ಗೆ ಸೀರೆ ಕಂಡು ಮಹಿಳೆಯರು ಆಕರ್ಷಿತರಾಗಿದ್ದರು. ಕೆಲವು ಮಕ್ಕಳು ಹಠ ಹಿಡಿದು ಗೊಂಬೆ, ಆಟದ ವಸ್ತುಗಳನ್ನು ಪೋಷಕರಿಂದ ಪಡೆದುಕೊಳ್ಳುತ್ತಿದ್ದರು. ಆ್ಯಂಟಿಕ್ ಆಭರಣ, ಕಿವಿಯೋಲೆ ಯುವತಿಯರು, ಮಹಿಳೆಯರನ್ನು ಸೆಳೆದಿದ್ದವು. ಕಬ್ಬಿನ ಜ್ಯೂಸ್, ಹಣ್ಣಿನ ರಸ, ಐಸ್‌ಕ್ರೀಮ್, ಎಳನೀರು ವ್ಯಾಪಾರವೂ