ಹಣ‌ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧನಕ್ಕೆಒಳಗಾಗಿರುವ ಐಶ್ವರ್ಯಾ ಗೌಡಗೆ ಬೆಂಗಳೂರು ನಗರದ ಇ.ಡಿ. ವಿಶೇಷ ನ್ಯಾಯಾಲಯ (ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್‌ ಕೋರ್ಟ್‌) ಜಾಮೀನು ಮಂಜೂರು ಮಾಡಿದೆ.

 ಬೆಂಗಳೂರು : ಹಣ‌ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧನಕ್ಕೆಒಳಗಾಗಿರುವ ಐಶ್ವರ್ಯಾ ಗೌಡಗೆ ಬೆಂಗಳೂರು ನಗರದ ಇ.ಡಿ. ವಿಶೇಷ ನ್ಯಾಯಾಲಯ (ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್‌ ಕೋರ್ಟ್‌) ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಈ ಆದೇಶ ಮಾಡಿದೆ. ಐಶ್ವರ್ಯಾ ಗೌಡ ಐದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಒದಗಿಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಬೆಂಗಳೂರು ನಗರ ವ್ಯಾಪ್ತಿ ಬಿಟ್ಟು ಹೋಗಬಾರದು. ವಿಳಾಸ ಬದಲಾವಣೆ ಮಾಡಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ:

ಮಾಜಿ ಸಂಸದ ಡಿ.ಕೆ.‌ಸುರೇಶ್ ಅವರ ಸಹೋದರಿ ಎಂದು‌ ಹೇಳಿಕೊಂಡು ಹಲವರಿಗೆ ಹಣ ಹಾಗೂ ಚಿನ್ನಾಭರಣ ಮೋಸ ಮಾಡಿದ ಆರೋಪ ಸಂಬಂಧ ಐಶ್ವರ್ಯಾ ಗೌಡ ವಿರುದ್ಧ ವಿವಿಧ ಏಳು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ. ನಂತರ ಪೊಲೀಸರು ಇ.ಡಿ.ಗೆ ವರದಿ ಸಲ್ಲಿಸಿ ಐಶ್ವರ್ಯಾ ಗೌಡ ಯಾವುದೇ ತೆರಿಗೆ ಪಾವತಿಸದೆ, ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡದೆ ಕೋಟ್ಯಂತರ ವ್ಯವಹಾರ ಮಾಡಿದ್ದಾರೆ ಎಂದು ತಿಳಿಸಿದ್ದರು.

ಆ ವರದಿ ಮತ್ತು ಪೊಲೀಸರ ಎಫ್‌ಐಆರ್‌ ಆಧರಿಸಿ, ಸುಮಾರು 75 ಕೋಟಿ ರು. ಅಕ್ರಮ ವಹಿವಾಟು ಮತ್ತು ವರ್ಗಾವಣೆ ನಡೆಸಿದ ಆರೋಪ ಮೇಲೆ ಐಶ್ವರ್ಯಾ ಗೌಡ ವಿರುದ್ಧ ‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಿದ್ದರು. ನಂತರ ಐಶ್ವರ್ಯಾ ಗೌಡ ಅವರನ್ನು 2025ರ ಏ.24ರಂದು ಬಂಧಿಸಿ ವಿಚಾರಣೆ ನಡೆಸಿದ್ದರು. ಪೊಲೀಸ್‌ ಕಸ್ಟಡಿಯ ಅವಧಿ ಮುಗಿದ ಬಳಿಕ ವಿಶೇಷ ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನ ವಶಕ್ಕೆ ನೀಡಿತ್ತು. ಇದರಿಂದ ಜಾಮೀನು ಕೋರಿ ಐಶ್ವರ್ಯಾ ಗೌಡ ಅರ್ಜಿ ಸಲ್ಲಿಸಿದ್ದರು.

ಇ.ಡಿ. ತನಿಖೆಗೆ ಡಿಕೆಸು ಸಹಕಾರ ಖಚಿತ: ಡಿಕೆಶಿ

ಮಾಜಿ ಸಂಸದರೂ ಆಗಿರುವ ಸಹೋದರ ಡಿ.ಕೆ.ಸುರೇಶ್‌ ಅವರು ಜಾರಿ ನಿರ್ದೇಶನಾಲಯ(ಇ.ಡಿ.)ದ ತನಿಖೆಗೆ ಸಹಕಾರ ನೀಡುತ್ತಾರೆ. ನಮ್ಮ ಸಹೋದರಿ ಎಂದು ಹೇಳಿಕೊಂಡಿರುವ ಮಹಿಳೆಯ ವಿರುದ್ಧ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

‘ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್‌ ಅವರಿಗೆ ಇ.ಡಿ. ಸಮನ್ಸ್‌ ನೀಡಿದೆಯಲ್ಲಾ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್‌, ‘ಸುರೇಶ್ ಇ.ಡಿ. ತನಿಖೆಗೆ ಸಹಕಾರ ನೀಡಲಿದ್ದು, ಹೇಳಿಕೆ ಸಲ್ಲಿಸಲಿದ್ದಾರೆ. ನಮ್ಮ ಹೆಸರನ್ನು ಅಪರಿಚಿತರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಈಗಾಗಲೇ ಸುರೇಶ್‌ ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ವಿವರಿಸಿದರು.

ಇ.ಡಿ. ವಿಚಾರಣೆಗೆ ನಾಳೆ ಅಲ್ಲ, 23ರಂದು ಹೋಗ್ತೀನಿ: ಡಿಕೆಸು

 ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್‌ ನೀಡಿದ್ದು, ಜೂ. 19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದರೆ, ಅಂದು ಪೂರ್ವನಿಗದಿತ ಕಾರ್ಯಕ್ರಮವಿದ್ದು, ಜೂ.23ರಂದು ಇ.ಡಿ. ಮುಂದೆ ದಾಖಲೆ ಸಹಿತ ಹಾಜರಾಗುತ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮನೆಯಲ್ಲಿ ಇಲ್ಲದಿದ್ದಾಗ ಇ.ಡಿ. ಅಧಿಕಾರಿಗಳು ಬಂದಿದ್ದರು. ವಿಷಯ ತಿಳಿದು ಮನೆಗೆ ಬಂದು ಅವರನ್ನು ಭೇಟಿಯಾದಾಗ ಸಮನ್ಸ್‌ ನೀಡಿದರು. ಐಶ್ವರ್ಯಾ ಗೌಡ ವಂಚನೆ ಪ್ರಕರಣದಲ್ಲಿ ನನಗೆ ಸಮನ್ಸ್‌ ನೀಡಲಾಗಿದೆ. ಜೂ.19ರಂದು ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ. ಆದರೆ, ಪೂರ್ವನಿಗದಿತ ಕಾರ್ಯಕ್ರಮವಿದ್ದು, ಜೂ.23ರಂದು ವಿಚಾರಣೆಗೆ ಹೋಗುತ್ತೇನೆ. ಅದಕ್ಕೂ ಮುನ್ನ ಯಾವ ರೀತಿಯಲ್ಲಿ ಸಮನ್ಸ್‌ ನೀಡಿದ್ದಾರೆ ಎಂದು ನೋಡುತ್ತೇನೆ ಎಂದರು.

ಐಶ್ವರ್ಯಾ ಗೌಡ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಾನೇ ಪೊಲೀಸರಿಗೆ ದೂರು ನೀಡಿದ್ದೆ. ಆ ದೂರಿನ ತನಿಖೆಯೂ ನಡೆಯುತ್ತಿದೆ. ಇನ್ನು ಐಶ್ವರ್ಯಾ ಗೌಡ ಮತ್ತು ನನ್ನ ನಡುವೆ ಯಾವುದೇ ವ್ಯವಹಾರವಿಲ್ಲ. ಯಾವುದೋ ಕಾರ್ಯಕ್ರಮದ ವೇಳೆ ಭೇಟಿಯಾಗಿದ್ದರು ಅಷ್ಟೇ. ನನ್ನ ವ್ಯವಹಾರವೆಲ್ಲವನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದೇನೆ. ಇನ್ನು, ಇ.ಡಿ. ನೀಡಿರುವ ಸಮನ್ಸ್‌ ಅಸಂಬದ್ಧವಾಗಿದೆ. 7-8 ದಾಖಲೆಗಳು ಬೇಕು ಎಂದು ಕೇಳಿದ್ದಾರೆ. ನನ್ನ ಬಳಿಯಿರುವ ದಾಖಲೆಗಳನ್ನು ಸಲ್ಲಿಸುತ್ತೇನೆ. ಅವರು ಕೇಳುವ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದರು.