ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಅವರು ಪ್ರಯಾಗ್‌ರಾಜ್‌ನ ಹಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದಾರೆ. ಈ ವಿಚಾರವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟ್ಯಾಗ್ ಮಾಡಿ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ಬೆಂಗಳೂರು (ಫೆ.07): ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ (ಕೆಪಿಸಿಸಿ) ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಅವರು ಪ್ರಯಾಗ್‌ರಾಜ್‌ನ ಹಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿ ಬಂದಿದ್ದಾರೆ. ಆದರೆ, ಈ ವಿಚಾರವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟ್ಯಾಗ್ ಮಾಡಿ ನೆಟ್ಟಿಗರು ಭಾರೀ ಟೀಕೆ ಮಾಡುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು 'ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಹೊಟ್ಟೆ ತುಂಬುತ್ತದೆಯೇ? ನೀವು ಎಲ್ಲೇ ಮುಳುಗಿದರೂ ನಿಮ್ಮ ಪಾಪಗಳು ಕಳೆಯೋದಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುಣ್ಯ ಸ್ನಾನದ ಟೀಕೆ ಮಾಡಿದ್ದರು. ಇದಾದ ನಂತರ ಕಾಂಗ್ರೆಸ್ ನಾಯಕರು ಪುಣ್ಯಸ್ನಾನಕ್ಕೆ ಹೋಗುವುದಕ್ಕೆ ತೀವ್ರ ಸಂಕಷ್ಟ ಬಂದಿದೆ. ಕಾಂಗ್ರೆಸ್‌ನಲ್ಲಿಯೂ ಬಹುತೇಕರು ಹಿಂದೂ ಧಾರ್ಮಿಕ ಭಾವನೆಗಳನ್ನು ಹೊಂದಿದ್ದು, ಅವರೂ ಪುಣ್ಯಸ್ನಾನಕ್ಕೆ ಹೋಗುವ ಅಭಿಲಾಷೆ ಹೊಂದಿದ್ದಾರೆ.
ಆದರೆ, ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯಿಂದ ಎಲ್ಲ ಕೈ ನಾಯಕರಿಗೆ ತೀವ್ರ ಇರಿಸು-ಮುರಿಸು ಉಂಟಾಗಿದೆ. ಇದರ ನಡುವೆಯೂ ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರು ಕುಂಭಮೇಳಕ್ಕೆ ತೆರಳು ಪುಣ್ಯಸ್ನಾನ ಮಾಡಿರುವುದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಕೆಲವರು ಈ ವಿಡಿಯೋವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಟ್ಯಾಗ್ ಮಾಡಿ ಟೀಕಿಸಿದ್ದಾರೆ.
ಇದನ್ನೂ ಓದಿ: ಇದೊಂದು ಪದಗಳಿಗೆ ಮೀರಿದ ಅನುಭವ, ತ್ರಿವೇಣಿಯಲ್ಲಿ ಮಿಂದೆದ್ದ ಡಿಕೆಶಿ ಪುತ್ರಿ ಐಶ್ವರ್ಯ
ಪ್ರಯಾಗರಾಜ್‌ನ ಮಹಾಕುಂಭ ಮೇಳಕ್ಕೆ ಕೋಟ್ಯಾಂತರ ಭಕ್ತರು ಭೇಟಿ ನೀಡಿ, ಗಂಗಾನದಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈಗಾಗಲೇ ತ್ರಿವೇಣಿ ಸಂಗಮಕ್ಕೆ ಸುಮಾರು 40 ಕೋಟಿಗೂ ಅಧಿಕ ಭಕ್ತರು ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಕರ್ನಾಟಕದ ಸಾವಿರಾರು ಜನರು ಪ್ರಯಾಗ್‌ರಾಜ್‌ಗೆ ಹೋಗಿಬಂದಿದ್ದು, ಇನ್ನೂ ಸಾವಿರಾರು ಜನರು ಹೋಗಲು ಸಜ್ಜಾಗಿದ್ದಾರೆ. ಅದರಲ್ಲಿ, ಕರ್ನಾಟಕದ ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳು ಕೂಡ ಪವಿತ್ರ ಸ್ನಾನ ಮಾಡಿದ್ದಾರೆ. ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ (Aisshwarya DKS Hegde) ಅವರೂ ಭೇಟಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದು, ಸುಂದರ ಬರವಣಿಗೆಯೊಂದನ್ನು ಬರೆದುಕೊಂಡಿದ್ದಾರೆ.
ಐಶ್ವರ್ಯಾ ಅವರು ಕುಂಭಮೇಳದಲ್ಲಿ ಸರಳ ಉಡುಗೆಯಲ್ಲಿ ಮಾಸ್ಕ್ ಧರಿಸಿ ಪ್ರತಿಯೊಂದು ಜಾಗ ವೀಕ್ಷಿಸಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ನಂತರ, ಅಲ್ಲಿನ ಸ್ಥಳೀಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ಆ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ 'ಮಹಾಕುಂಭ 2025 ಪದಗಳಿಗೆ ಮೀರಿದ ಅನುಭವ. ವಿಶ್ವದ ಅತಿದೊಡ್ಡ ಕೂಟಗಳಲ್ಲಿ ಒಂದಾದ ಶಕ್ತಿ, ಏಕತೆ ಮತ್ತು ಆಧ್ಯಾತ್ಮಿಕತೆ ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಭಕ್ತಿ ಮತ್ತು ಸಾಮೂಹಿಕ ಪ್ರಜ್ಞೆಯು ನಿಜವಾಗಿಯೂ ದೈವಿಕವೆನಿಸುವ ವಾತಾವರ ಸೃಷ್ಟಿಸಿದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

