ಈವರೆಗೆ ಅಂತಾರಾಷ್ಟ್ರೀಯ ತುರ್ತು ಚಿಕಿತ್ಸಾ ವೈಮಾನಿಕ ವರ್ಗಾವಣೆ ತಂಡ (ಐಸಿಎಎಟಿ) ಕೈಗೊಂಡ ಸುದೀರ್ಘ ವೈದ್ಯಕೀಯ ವರ್ಗಾವಣೆ ಇದಾಗಿದೆ. 

ಚೆನ್ನೈ/ ಬೆಂಗಳೂರು(ಜು.21):  ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಬೆಂಗಳೂರಿನ ಇಂದಿರಾ ನಗರದ 67 ವರ್ಷದ ಮಹಿಳೆಯನ್ನು ಅಮೆರಿಕದ ಪೋರ್ಚ್‌ಲೆಂಡಿನಿಂದ ಚೆನ್ನೈನ ಅಪೊಲೋ ಆಸ್ಪತ್ರೆಗೆ ಏರ್‌ ಆ್ಯಂಬುಲೆನ್ಸ್‌ನಲ್ಲಿ ಸುಮಾರು 23 ಗಂಟೆ ‘ಆತಂಕದ ಕ್ಷಣಗಳ’ ಹಾರಾಟದ ಬಳಿಕ ಸುರಕ್ಷಿತವಾಗಿ ವರ್ಗಾಯಿಸಲಾಗಿದೆ. ಈವರೆಗೆ ಅಂತಾರಾಷ್ಟ್ರೀಯ ತುರ್ತು ಚಿಕಿತ್ಸಾ ವೈಮಾನಿಕ ವರ್ಗಾವಣೆ ತಂಡ (ಐಸಿಎಎಟಿ) ಕೈಗೊಂಡ ಸುದೀರ್ಘ ವೈದ್ಯಕೀಯ ವರ್ಗಾವಣೆ ಇದಾಗಿದ್ದು, ಹೊಸ ದಾಖಲೆ ಎನಿಸಿಕೊಂಡಿದೆ. ಇದಕ್ಕೆ ಅಷ್ಟಿಷ್ಟಲ್ಲ, ಬರೋಬ್ಬರಿ .1 ಕೋಟಿ ವೆಚ್ಚವಾಗಿದೆ. ಚಿಕಿತ್ಸೆಗಾಗಿ ಜನರು ಸಾಮಾನ್ಯವಾಗಿ ವಿದೇಶಕ್ಕೆ ಭಾರತದ ಜನರು ತೆರಳುತ್ತಾರೆ. ಅಂಥದ್ದರಲ್ಲಿ ಈಕೆ ಚಿಕಿತ್ಸೆಗಾಗಿ ಅಮೆರಿಕದಿಂದ ಭಾರತಕ್ಕೆ ಮರಳಿದ್ದು ಕೂಡ ಇಲ್ಲಿ ಗಮನಾರ್ಹ.

ಮಹಿಳೆಗೆ ಏನು ಸಮಸ್ಯೆ?:

ಬೆಂಗಳೂರಿನ ಮಹಿಳೆ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದಾಗ ಅವರಿಗೆ ಹೃದಯ ವೈಫಲ್ಯ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮೆರಿಕದ ಟೆರ್ಟಿನರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಹಿಳೆಯ ಸ್ಥಿತಿ ಇನ್ನಷ್ಟುಬಿಗಡಾಯಿಸಿ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾದರು. ಕಿಡ್ನಿ ವೈಫಲ್ಯದಿಂದಾಗಿ ಅವರಿಗೆ ಡಯಾಲಿಸಿಸ್‌ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ವೈದ್ಯರು ಚೆನ್ನೈನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿರುವ ವೈದ್ಯರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಮಹಿಳೆಯನ್ನು ಸುಸಜ್ಜಿತ ಏರ್‌ ಆ್ಯಂಬುಲೆನ್ಸ್‌ನಲ್ಲಿ ಚೆನ್ನೈ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ ಎಂದು ಐಸಿಎಎಟಿ ಮುಖ್ಯಸ್ಥೆ ಶಾಲಿನಿ ನಾಲವಾಡ್‌ ಹೇಳಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಬಾಂಗ್ಲಾದಿಂದ ಏರ್‌ಲಿಫ್ಟ್, ಮೋದಿಗೆ ಧನ್ಯವಾದ ಹೇಳಿದ ಶೋಯೆಬ್ ತಂದೆ!

ವರ್ಗಾವಣೆ ಹೇಗೆ?:

ಮಹಿಳೆಯನ್ನು ವಿಮಾನದಲ್ಲಿ ವರ್ಗಾಯಿಸುವಾಗ ಹಲವಾರು ಸವಾಲುಗಳು ಎದುರಾಗಿದ್ದವು. ಮಹಿಳೆ ಡಯಾಲಿಸಿಸ್‌ ಚಿಕಿತ್ಸೆ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ಈ ಚಿಕಿತ್ಸೆಯನ್ನು ವಿಮಾನ ಹಾರಾಟ ನಡೆಸುವಾಗ ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವೈದ್ಯರು ಮೊದಲು ಏರ್‌ಕ್ರಾಫ್‌್ಟನಲ್ಲಿ ಐಸಿಯು ವ್ಯವಸ್ಥೆ ಸಿದ್ಧಪಡಿಸಿ, 3 ವೈದ್ಯರು ಹಾಗೂ ಇಬ್ಬರು ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಜೊತೆಗೆ ಐಸ್‌ಲೆಂಡಿನ ರಾಜಧಾನಿ ರೇಕ್ಜಾವಿಕ್‌ಗೆ ಸಾಗಿಸಿದ್ದಾರೆ. ಬಳಿಕ ಅಲ್ಲಿಂದ ಟರ್ಕಿಯ ರಾಜಧಾನಿ ಇಸ್ತಾಂಬುಲ್‌ಗೆ ಸುರಕ್ಷಿತವಾಗಿ ರವಾನಿಸಿದ್ದಾರೆ. ಬಳಿಕ ಟರ್ಕಿಯ ದಿಯಾರ್‌ಬಕಿರ್‌ನಿಂದ ಇನ್ನೊಂದು ಚಾಲೆಂಜರ್‌ 605 ಖಾಸಗಿ ವಿಮಾನದಲ್ಲಿ ಚೆನ್ನೈಗೆ ಮಹಿಳೆಯನ್ನು ಕರೆತರಲಾಗಿದೆ.

ಹೀಗೆ ಜು.17ರಂದು ಅಮೆರಿಕ ಬಿಟ್ಟಮಹಿಳೆ ಹಾರಾಟದ ವೇಳೆ 2 ಕಡೆಗಳಲ್ಲಿ ತಂಗಿದ್ದು, ಜು.19ರ ರಾತ್ರಿ 2ಕ್ಕೆ ಚೆನ್ನೈ ತಲುಪಿದ್ದಾರೆ ಎಂದು ಶಾಲಿನಿ ಮಾಹಿತಿ ನೀಡಿದ್ದಾರೆ. ಬಳಿಕ ಅಪೊಲೋ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಸಾಯಿ ಸತೀಶ್‌ ತಮ್ಮ ವೈದ್ಯಕೀಯ ತಂಡದೊಂದಿಗೆ ಮಹಿಳೆಯ ಚಿಕಿತ್ಸೆ ಮುಂದುವರೆಸಿದ್ದಾರೆ.

ಈ ಹಿಂದೆ ಕೋವಿಡ್‌ ಬಿಕ್ಕಟ್ಟಿನ ವೇಳೆಯಲ್ಲೂ 500ಕ್ಕೂ ಹೆಚ್ಚು ಕೋವಿಡ್‌ನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದ ಸೋಂಕಿತರು ವಿದೇಶಗಳಿಂದ ದೇಶಕ್ಕೆ ಏರ್‌ಲಿಫ್ಟ್‌ ಮೂಲಕ ಸಾಗಿಸಲಾಗಿತ್ತು. ಆದರೆ 23 ಗಂಟೆಗಳ ಸುದೀರ್ಘಾವಧಿ ಏರ್‌ಲಿಫ್ಟ್‌ ಮಾಡಿ ಸುರಕ್ಷಿತವಾಗಿ ದೇಶಕ್ಕೆ ವರ್ಗಾಯಿಸಿದ್ದು, ಹೊಸ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.