ವಿಮಾನ. ದುರಂತದ ಕಾರಣ, ಬೋಯಿಂಗ್ ವಿಮಾನಗಳ ಸುರಕ್ಷತೆ, ವಿಮಾನ ನಿಲ್ದಾಣಗಳ ಭದ್ರತೆ ಕುರಿತು ಕಳವಳ.. ಜಾತಿ ಗಣತಿ ಮರುಸಮೀಕ್ಷೆ ಮತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವಿನ ಸಂಬಂಧದ ಬಗ್ಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಜೂ.13): ಅಹಮದಾಬಾದ್ ವಿಮಾನ ದುರಂತವಾಗಿದೆ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತ ಎಂದು ಕರ್ನಾಟಕ ಮಾಜಿ ವಿಮಾನಯಾನ ಸಚಿವ ಸಿ.ಎಂ. ಇಬ್ರಾಹಿಂ ನುಡಿದರು.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ AI 171 ಟೇಕ್‌ಆಫ್ ಆದ 60 ಸೆಕೆಂಡ್‌ಗಳಲ್ಲಿ ಪತನಗೊಂಡ ದುರಂತಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆ ಈ ಹಿಂದೆ ಎಂದೂ ಕಂಡಿಲ್ಲ. ವಿಮಾನದಲ್ಲಿ 242 ಪ್ರಯಾಣಿಕರಿದ್ದು, ಇದರಲ್ಲಿ 60 ಬ್ರಿಟಿಷ್ ನಾಗರಿಕರು ಸೇರಿದಂತೆ 241 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವಿಮಾನವು ಮೇಘನಿನಗರದ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಹಲವು ಎಂಬಿಬಿಎಸ್ ವಿದ್ಯಾರ್ಥಿಗಳೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದರು.

ಏರ್‌ ಇಂಡಿಯಾ ದುರಂತಕ್ಕೆ ಕಾರಣವೇನು?

ಈ ದುರಂತಕ್ಕೆ ಸಿವಿಲ್ ಏವಿಯೇಷನ್ ಸಚಿವಾಲಯವು ಇನ್ನೂ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ ಎಂದು ದೂರಿದ ಸಿಎಂ ಇಬ್ರಾಹಿಂ, ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ತನಿಖಾಧಿಕಾರಿಗಳು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮತ್ತು ಪೈಲಟ್‌ಗಳ ನಡುವಿನ ಸಂಭಾಷಣೆಯ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಬಳಿಕ ದುರಂತಕ್ಕೆ ಕಾರಣ ಏನೆಂಬುದು ತಿಳಿಯಲಿದೆ ಎಂದರು.

ಬೋಯಿಂಗ್ ವಿಮಾನಗಳು ಸುರಕ್ಷಿತ ಎಂಬುದು ಸುಳ್ಳು:

ಭಾರತದ ಪೈಲಟ್‌ಗಳು ವಿಶ್ವದಲ್ಲೇ ಉತ್ತಮರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಬೋಯಿಂಗ್ ವಿಮಾನಗಳನ್ನು ಜಗತ್ತಿನಲ್ಲೇ ಸುರಕ್ಷಿತ ಎಂದು ಕರೆಯುವುದು ಸುಳ್ಳು ಎಂದು ಇಬ್ರಾಹಿಂ ತೀವ್ರವಾಗಿ ಟೀಕಿಸಿದ್ದಾರೆ. 1996ರಲ್ಲಿ ಹರಿಯಾಣದಲ್ಲಿ ಸೌದಿ ಅರೇಬಿಯಾ ಮತ್ತು ರಷ್ಯಾದ ವಿಮಾನಗಳು ಮುಖಾಮುಖಿ ಡಿಕ್ಕಿಯಾದ ಘಟನೆಯನ್ನು ಉಲ್ಲೇಖಿಸಿದ ಅವರು, ಆಗ ಏರ್ ಟ್ರಾಫಿಕ್ ಕಂಟ್ರೋಲ್ ವೈಫಲ್ಯವನ್ನು ತಡೆಗಟ್ಟಲು ಬ್ರಿಟಿಷ್ ಡಿವೈಸ್ ತರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ನೆನಪಿಸಿದರು. ಈ ಡಿವೈಸ್ ಎಡ ಮತ್ತು ಬಲದಿಂದ ಬರುವ ವಿಮಾನಗಳ ಬಗ್ಗೆ ಸಂದೇಶ ನೀಡುತ್ತದೆ. ಆದರೆ ಈ ದುರಂತಕ್ಕೆ ಇಂಜಿನ್ ವೈಫಲ್ಯವೋ, ವಿಧ್ವಂಸಕ ಕೃತ್ಯವೋ ಕಾರಣವೇ ಎಂಬ ಅನುಮಾನವನ್ನು ಇಬ್ರಾಹಿಂ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣಗಳು ರೈಲ್ವೆ ನಿಲ್ದಾಣಗಳಂತಾಗುತ್ತಿವೆ:

ವಿಮಾನ ಪರೀಕ್ಷಿಸಿದ ಬಳಿಕವೇ ಟೇಕ್‌ಆಫ್‌ಗೆ ಸಿಗ್ನಲ್ ನೀಡಲಾಗಿತ್ತು. ಆದರೂ ದುರಂತ ಹೇಗೆ ಸಂಭವಿಸಿತು? ಈ ಘಟನೆಯ ಸಮಗ್ರ ತನಿಖೆ ಅಗತ್ಯವಿದೆ. ಜೊತೆಗೆ, ನಮ್ಮ ವಿಮಾನ ನಿಲ್ದಾಣಗಳು ರೈಲ್ವೆ ನಿಲ್ದಾಣಗಳಂತೆ ಆಗುತ್ತಿವೆ ಎಂದು ವಿಮಾನಯಾನ ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದರು.

ಮತ್ತೊಮ್ಮೆ ಜಾತಿ ಗಣತಿ ಮಾಡಿದ್ರೆ ಜನಸಂಖ್ಯೆ ಹೆಚ್ಚಾಗುತ್ತದೆಯೇ?

ಜಾತಿ ಗಣತಿಯ ಮರುಸಮೀಕ್ಷೆ ವಿಚಾರದ ಬಗ್ಗೆಯೂ ಮಾತನಾಡಿರುವ ಸಿಎಂ ಇಬ್ರಾಹಿಂ, ಜಾತಿ ಗಣತಿ ರಿಪೋರ್ಟ್ ಈಗಾಗಲೇ ಬಂದಿದೆ. ಮತ್ತೊಮ್ಮೆ ಗಣತಿ ಮಾಡಿದರೆ ಜನರ ಸಂಖ್ಯೆ ಹೆಚ್ಚಾಗುತ್ತದೆಯೇ? ಇದು ದುರದೃಷ್ಟಕರ. ಹೈಕಮಾಂಡ್ ಹೇಳಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಕೋರ್ಟ್‌ನಲ್ಲಿ ಎರಡೆರಡು ವಿಚಾರಣೆಗೆ ಹಣ ಕೇಳುತ್ತಾರೆ. ಈಗಲೂ ಸಮಯವಿದೆ, ಈ ತೀರ್ಮಾನವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಮುಂದುವರಿದು, ಜಾತಿಯ ಆಧಾರದ ಮೇಲೆ ಕೆಲಸ ನೀಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಭೂತದ ಕಂಬ ಇದ್ದಂತೆ:

ಸಿದ್ದರಾಮಯ್ಯ ಭೂತದ ಕಂಬದಂತೆ ಇದ್ದಾರೆ. ಅವರನ್ನು ಅಧಿಕಾರದಿಂದ ಕಿತ್ತರೆ ಸರ್ಕಾರ ಉಳಿಯುವುದಿಲ್ಲ. ಕಾಂಗ್ರೆಸ್‌ನಲ್ಲಿ ಯಾರಿಗೂ ಸರ್ಕಾರವನ್ನು ಎಳೆದುಕೊಂಡು ಹೋಗುವ ಶಕ್ತಿಯಿಲ್ಲ. ಡಿಕೆ ಶಿವಕುಮಾರ್ ಅವರಿಗೆ ತಾಳ್ಮೆ ಕಡಿಮೆ. ತಾಳ್ಮೆ ಹೆಚ್ಚಿಸಿಕೊಂಡರೆ ಭವಿಷ್ಯವಿದೆ. ಸಿದ್ದರಾಮಯ್ಯ ಒಪ್ಪಿದರೆ ಶಿವಕುಮಾರ್ ಒಂದು ವರ್ಷ ಆಡಳಿತ ನಡೆಸಬಹುದು. ಒಪ್ಪದಿದ್ದರೆ ಇದು ಸಾಧ್ಯವಿಲ್ಲ ಎನ್ನುವ ಮೂಲಕ ಡಿಕೆ ಶಿವಕುಮಾರ ಸಿಎಂ ಆಗುವ ಸಾಧ್ಯತೆ ಕಡಿಮೆ ಎಂದರು.

ಜಾತಿ ಗಣತಿ ವಿಷಯದ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿಕೆ ನೀಡಬೇಕು ಎಂದು ಸಲಹೆ ನೀಡಿರುವ ಇಬ್ರಾಹಿಂ, ಸಮುದಾಯದ ವಿಶ್ವಾಸ ಗಳಿಸಿದರೆ ಅವರೇ ನಾಯಕ. ಜಾಹೀರಾತುಗಳನ್ನು ಕಡಿಮೆ ಮಾಡಿ, ಗಾಂಧಿ, ಸಂಗೊಳ್ಳಿ ರಾಯಣ್ಣ, ಕುವೆಂಪು ಅವರ ಫೋಟೋಗಳನ್ನು ಬಳಸಿ. ಜನರು ತಮ್ಮ ಫೋಟೋಗಳನ್ನು ನೋಡಿ ಒಪ್ಪುವುದಿಲ್ಲ ಎಂದು ಕಿಡಿಕಾರಿದರು.