ಬೆಂಗಳೂರು :  ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಚೆನ್ನೈನ ರೆಲಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ವಿಮಾನದೊಳಗೇ ಮಠದ ವಾತಾವರಣ ಸೃಷ್ಟಿಸಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸಲಾಗುತ್ತಿದೆ ಎಂಬ ಭಾವನೆ ಅವರಿಗೆ ಮೂಡದಂತೆ ಎಚ್ಚರಿಕೆ ವಹಿಸಿದ್ದೆವು. ಅಚ್ಚರಿಯೆಂದರೆ, ಇಷ್ಟಲಿಂಗವಿದ್ದ ಕರಡಿಗೆಯನ್ನು ಶ್ರೀಗಳು ಕೈಯಲ್ಲಿ ಹಿಡಿದೇ ಇರುತ್ತಿದ್ದರು. ವಿಮಾನ, ಆಸ್ಪತ್ರೆ, ಮಠ... ಹೀಗೆ ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸುವಾಗಲೂ ಕರಡಿಗೆಯನ್ನು ಅವರು ಬಿಡುತ್ತಿರಲಿಲ್ಲ. ಪ್ರಜ್ಞಾವಸ್ಥೆಯಲ್ಲಿದ್ದರೂ, ಅರೆಪ್ರಜ್ಞಾವಸ್ಥೆಯಲ್ಲಿದ್ದರೂ ಇಷ್ಟಲಿಂಗ ಕರಡಿಗೆ ಅವರ ಕೈಯಲ್ಲಿ ಭದ್ರವಾಗಿರುತ್ತಿತ್ತು.’

ತುಮಕೂರಿನಿಂದ ಚೆನ್ನೈನ ರೆಲಾ ಆಸ್ಪತ್ರೆಗೆ ವಿಮಾನದ ಮೂಲಕ ಇತ್ತೀಚೆಗೆ ಚಿಕಿತ್ಸೆಗೆಂದು ಶ್ರೀಗಳನ್ನು ಕರೆದೊಯ್ಯುವ ವೇಳೆ ಏರ್‌ ಆ್ಯಂಬುಲೆನ್ಸ್‌ನಲ್ಲಿ ಮಾಡಿಕೊಂಡಿದ್ದ ಸಿದ್ಧತೆ ಬಗ್ಗೆ ಡಾ. ಶಾಲಿನಿ ನೀಡಿದ ಮಾಹಿತಿಯಿದು. ಡಾ.ಶಾಲಿನಿ ಅವರು ಶ್ರೀಗಳನ್ನು ಕರೆದೊಯ್ದ ಏರ್‌ ಆ್ಯಂಬುಲೆನ್ಸನ್ನು ನಿರ್ವಹಿಸುವ ಕಂಪನಿಯ ವೈದ್ಯೆ.

ಆಸ್ಪತ್ರೆಗೆ ತೆರಳಿದ ಬಳಿಕ ಮುಖ್ಯದ್ವಾರದಿಂದ ಒಳಗೆ ಸುಮಾರು 300 ಮೀಟರ್‌ನಷ್ಟುದೂರ ಅವರು ನಡೆದುಕೊಂಡೇ ಹೋದರು. ಅನಾರೋಗ್ಯಕ್ಕೊಳಗಾದ ಯಾವುದೇ ವ್ಯಕ್ತಿಯ ವಿಷಯದಲ್ಲಿ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಮಾನ್ಯ ನಿಯಮವೆಂದರೆ ಅವರನ್ನು ವೀಲ್‌ ಚೇರ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗಬೇಕಾಗುತ್ತದೆ. ಆದರೆ, ಸ್ವಾಮೀಜಿಗಳ ವಿಷಯದಲ್ಲಿ ಅವುಗಳನ್ನು ಪಾಲಿಸಲು ಸಾಧ್ಯವಿರಲಿಲ್ಲ ಎಂದರು.

ವಿಮಾನದಿಂದ ಇಳಿದ ಮೇಲೆ ಶ್ರೀಗಳಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಆದೇಶ ಮಾಡುವ ಸ್ಥಿತಿಯಲ್ಲೂ ನಾವಿರಲಿಲ್ಲ ಅಥವಾ ಅವರಿಗೆ ಮನವಿ ಮಾಡುವಷ್ಟುಸಮಯವೂ ನಮಗಿರಲಿಲ್ಲ. ಏನು ಮಾಡಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದೆವು. ಅಷ್ಟರಲ್ಲಿ ಶ್ರೀಗಳು ನಡೆದುಕೊಂಡು ಹೋಗುವುದಾಗಿ ಹೇಳಿ ಹೊರಟೇ ಬಿಟ್ಟರು ಎಂದು ತಿಳಿಸಿದರು.

ಇನ್ನು ತುಮಕೂರಿನಿಂದ ಚೆನ್ನೈನ ರೆಲಾ ಆಸ್ಪತ್ರೆಗೆ ವಿಮಾನ ಮೂಲಕ ಪ್ರಯಾಣಿಸಲು 90 ನಿಮಿಷ ಬೇಕು. ಈ ವೇಳೆ ಶ್ರೀಗಳಿಗೆ ವಿಮಾನ ದಲ್ಲಿದ್ದಂತೆ ಭಾಸವಾಗುವ ಬದಲು ಮಠದಲ್ಲಿಯೇ ಇರುವ ಹಾಗೆ ವಾತಾವರಣ ಸೃಷ್ಟಿಸುವುದು ನಮ್ಮ ಮುಂದೆ ಇದ್ದ ಸವಾಲಾಗಿತ್ತು. ಇದನ್ನು ಯಶಸ್ವಿಯಾಗಿ ನಿಭಾಯಿಸಿದೆವು ಎಂದು ವಿವರಿಸಿದರು.

ಶ್ರೀಗಳ ಆಪ್ತರಾದ ಆರಾಧ್ಯ ನಮ್ಮ ಜೊತೆಗಿದ್ದರು. ನಾನು ವೈದ್ಯೆಯಾದರೂ ಭಕ್ತೆಯಾಗಿ ಅವರ ಜೊತೆಗಿದ್ದೆ. ಶ್ರೀಗಳು ಅತ್ತಿತ್ತ ಕಣ್ಣು ಹಾಯಿಸಿದಾಗ ಆರಾಧ್ಯ ಅವರು ಮಾತನಾಡಿಸುತ್ತಿದ್ದರು ಹಾಗೂ ನಾನು ಶ್ರೀಗಳ ಜೊತೆ ವೈದ್ಯೆಯಂತೆ ನಡೆದುಕೊಳ್ಳದೆ ಭಕ್ತೆಯಂತೆ ನಡೆದುಕೊಂಡೆ. ಅವರಿಗೆ ಸುತ್ತಲೂ ಕಾವಿಯೇ ಕಾಣಿಸುವಂತಹ ವಾತಾವರಣವನ್ನು ಸೃಷ್ಟಿಸಲಾಗಿತ್ತು ಎಂದರು.

ಅದಕ್ಕೂ ಮುನ್ನ ಶ್ರೀಗಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಸುಮಾರು ಎರಡು ತಾಸುಗಳಿಗೂ ಹೆಚ್ಚು ಕಾಲ ಚರ್ಚಿಸಿದ್ದೆವು. ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಮಠದ ಪ್ರಮುಖರ ಜೊತೆ ಮಾತುಕತೆ ನಡೆಸಿ ಒಮ್ಮತದ ನಿರ್ಧಾರದ ಬಳಿಕ ವಿಮಾನದಲ್ಲಿ ಕರೆದೊಯ್ಯಲಾಯಿತು. ನನಗೆ ತಿಳಿದಿರುವ ಪ್ರಕಾರ ಸ್ವಾಮೀಜಿ ಅವರು ವಿಮಾನದಲ್ಲಿ ಹೋಗಿದ್ದು ಅದೇ ಮೊದಲಾಗಿತ್ತು. ಇನ್ನು, ಅಂತಹದ್ದೊಂದು ಅನುಭವ ನನಗೂ ಮೊದಲು. ಅವರ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಡಾ. ಶಾಲಿನಿ ಹೇಳಿದರು.