Gujarat Politics: 25 ವರ್ಷದ ನಂತರ ಮೋದಿ ತವರಲ್ಲಿ ರಾಜಕೀಯ ಸಮೀಕರಣ ಬದಲಾವಣೆ: ಹೇಗಿದೆ ಚುನಾವಣಾ ಕಣ?
Gujarat Politics Explained in Kannada: ಮೋದಿ 15 ದಿನಕ್ಕೊಮ್ಮೆ ಗುಜರಾತಿಗೆ ಹೋಗುತ್ತಿದ್ದಾರೆ. ಕೇಜ್ರಿವಾಲ್ ಪ್ರತಿ ಭಾನುವಾರ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ದಿನಕ್ಕೊಂದು ಹಿಂದುಳಿದ ಜಾತಿಯವರ ಜೊತೆ ಸ್ನೇಹಮಿಲನ ಮಾಡುತ್ತಿದ್ದಾರೆ. ಇತ್ತ ರಾಹುಲ್ ಗಾಂಧಿ ದೇಶ ಸುತ್ತುತ್ತಿದ್ದಾರೆ. ಅತ್ತ ನವರಾತ್ರಿಗೆ ಗುಜರಾತಿಗೆ ಬನ್ನಿ ಎಂದು ಪ್ರಿಯಾಂಕ ಗಾಂಧಿಗೆ ಕಾಂಗ್ರೆಸಿಗರು ದುಂಬಾಲು ಬಿದ್ದರೂ ಆಕೆ ಹೋಗುತ್ತಿಲ್ಲ.
India Gate Column by Prashant Natu
ನವದೆಹಲಿ (ಅ. 14): ಹಿಂದೊಮ್ಮೆ ಕಾಂಗ್ರೆಸ್ ಮತ್ತು ಜನತಾ ಪಾರ್ಟಿ ನಡುವೆ ರಾಜಕೀಯ ತಿಕ್ಕಾಟ ನೋಡಿದ್ದ ಗುಜರಾತ್‌ನಲ್ಲಿ ಒಮ್ಮೆ ಬಿಜೆಪಿ 1995ರಲ್ಲಿ ಅಧಿಕಾರಕ್ಕೆ ಬಂದು ಕುಳಿತ ಮೇಲೆ ಬೇರೆ ಪಕ್ಷದ ಸರ್ಕಾರಗಳನ್ನೇ ನೋಡಿಲ್ಲ. ಆಗಿನಿಂದ ಕಾಂಗ್ರೆಸ್ ವಿಪಕ್ಷದಲ್ಲಿ ಕುಳಿತಿದೆಯಾದರೂ ಕಠಿಣ ಸ್ಪರ್ಧೆ ಅಂತ ಒಡ್ಡಿದ್ದು 2017ರಲ್ಲಿಯೇ. ಅದು ಕೂಡ ನರೇಂದ್ರ ಮೋದಿ ಪ್ರಧಾನಿಯಾಗಿ ದಿಲ್ಲಿಗೆ ಹೋಗಿ ಕುಳಿತುಕೊಂಡ ನಂತರ ಮಾತ್ರ. ಆದರೆ ಗುಜರಾತ್‌ನಲ್ಲಿ ಮೋದಿ ಮತ್ತು ಅಮಿತ್ ಶಾ ಅವರ ದುರ್ಬಲ ವಾರಸುದಾರರೇ ಕುಳಿತುಕೊಂಡು ಪ್ರಚಂಡ ಆಡಳಿತ ವಿರೋಧಿ ಅಲೆ ಇದ್ದರೂ ಕೂಡ ಕಾಂಗ್ರೆಸ್‌ಗೆ ಚುನಾವಣೆ ಗೆಲ್ಲಲು ಸಾಧ್ಯ ಆಗಿರಲಿಲ್ಲ. ಆದರೆ ಈ ಬಾರಿ ದಿಲ್ಲಿ, ಪಂಜಾಬ್ ನಂತರ ಆಮ್ ಆದ್ಮಿ ಪಕ್ಷ ಗುಜರಾತ್‌ಗೆ ಕಾಲಿಟ್ಟಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.
ಆದರೆ ಆಮ್ ಆದ್ಮಿ ಸ್ಪರ್ಧೆಯ ಲಾಭ ಯಾರಿಗೆ ಎಂದು ಸ್ಪಷ್ಟಆಗುತ್ತಿಲ್ಲ. ಒಂದು ವೇಳೆ ಪರಂಪರಾಗತ ಬಿಜೆಪಿ ವಿರೋಧಿ ಕಾಂಗ್ರೆಸ್ ಮತಗಳು ಮಾತ್ರ ಆಮ್ ಅದ್ಮಿಗೆ ಹೋದರೆ ಸಹಜವಾಗಿ ಇರುವ 27 ವರ್ಷದ ಆಡಳಿತ ವಿರೋಧಿ ಅಭಿಪ್ರಾಯದ ಹೊರತಾಗಿಯೂ ಬಿಜೆಪಿಗೆ ಲಾಭ ಆಗಬಹುದು. ಹೇಗೂ ಮೋದಿ ದಿಲ್ಲಿಯಲ್ಲಿದ್ದಾರೆ, ಗುಜರಾತ್‌ನಲ್ಲಿ ಒಂದು ಪ್ರಯೋಗಕ್ಕೆ ಅವಕಾಶ ಕೊಡೋಣ ಎಂದು ಪರಂಪರಾಗತ ಬಿಜೆಪಿಗೆ ವೋಟು ಕೊಡುವ ಕುಟುಂಬಗಳ ಯುವಕರು ಕೊನೆ ಗಳಿಗೆಯಲ್ಲಿ ಗುಳೆ ಹೋದರೆ ಗುಜರಾತ್ ಮೊದಲ ಬಾರಿ ಅತಂತ್ರಕ್ಕೆ ಸಿಲುಕಬಹುದು.
ಅತಿಯಾದ ಆತ್ಮವಿಶ್ವಾಸ ಬೇಡ: 2024ರ ಲೋಕಸಭಾ ಚುನಾವಣೆ ಪ್ರಚಾರಕ್ಕೆ ವಿಪಕ್ಷಗಳಿಗೆ ಯಾವುದೇ ಅಸ್ತ್ರ ಸಿಗಬಾರದು ಎಂದರೆ ಬಿಜೆಪಿ ಮೋದಿ ಮತ್ತು ಅಮಿತ್ ಶಾ ಅವರ ಸ್ವಂತ ರಾಜ್ಯ ಗುಜರಾತ್‌ನಲ್ಲಿ ದೊಡ್ಡ ಬಹುಮತದಿಂದ ಗೆಲ್ಲಲೇಬೇಕು. ಹೀಗಾಗಿ ಪ್ರತಿ 15 ದಿನಕ್ಕೊಮ್ಮೆ ಸ್ವತಃ ಗುಜರಾತ್‌ಗೆ ಹೋಗುತ್ತಿರುವ ಮೋದಿ, ಕೇಂದ್ರ ಸಂಪುಟದ ಸದಸ್ಯರನ್ನು ಕೂಡ ಕಡ್ಡಾಯ ಪ್ರಚಾರಕ್ಕೆ ಹೋಗಬೇಕು ಎಂದು ಹೇಳಿದ್ದಾರೆ. ಹೀಗಾಗಿ ಸ್ಮೃತಿ ಇರಾನಿ, ಭೂಪೇಂದ್ರ ಯಾದವ್, ಅನುರಾಗ ಠಾಕೂರ್, ಎಸ್.ಜೈಶಂಕರ್, ನರೇಂದ್ರ ಸಿಂಗ್ ತೋಮರ್, ಅಶ್ವಿನಿ ವೈಷ್ಣವ ಪದೇ ಪದೇ ಗುಜರಾತ್‌ಗೆ ಹೋಗಿ ಬರುತ್ತಿದ್ದಾರೆ.
ಕಳೆದ ತಿಂಗಳು ಮೋದಿ ಗುಜರಾತ್ ಬಿಜೆಪಿ ಕಚೇರಿ ‘ಕಮಲಂ’ಗೆ ಹೋಗಿ ತಾವೇ ಹಿರಿಯ ನಾಯಕರ ಜೊತೆ ಎರಡು ಗಂಟೆ ಕುಳಿತುಕೊಂಡು ಯಾವುದೇ ಕಾರಣಕ್ಕೂ ಅತಿಯಾದ ಆತ್ಮ ವಿಶ್ವಾಸ ಬೇಡ, ವಿಪಕ್ಷಗಳು ತಮ್ಮೆಲ್ಲ ಶಕ್ತಿ ಹಾಕುತ್ತವೆ, ನಾವು ಮೈಮರೆಯಬಾರದು ಎಂದು ಹಿತವಚನ ಹೇಳಿ ಬಂದಿದ್ದಾರೆ. ಎಲ್ಲ ಹಿರಿಯ ನಾಯಕರಿಗೂ ಟಿಕೆಟ್ ಕೊಡಲು ಆಗುವುದಿಲ್ಲ, ಸ್ವಲ್ಪ ಗಲಾಟೆ ಮಾಡಬಹುದು, ಆದರೆ ಅವರನ್ನು ನಾವೆಲ್ಲ ಸೇರಿ ಸಮಾಧಾನ ಮಾಡಬೇಕು, ಪಕ್ಷಕ್ಕೆ ಹೊಸ ನೀರು ಬಂದರೆ ಮಾತ್ರ ಆಡಳಿತ ವಿರೋಧಿ ಅಭಿಪ್ರಾಯ ತಗ್ಗುತ್ತದೆ. ಏನೇ ಆಗಲಿ ಗೆಲ್ಲೋದು ಮುಖ್ಯ ಎಂದು ಸ್ಪಷ್ಟವಾಗಿಯೇ ಹೇಳಿ ಬಂದಿದ್ದಾರೆ. ಮೋದಿ ಪ್ರವಾಸಗಳ ನಡುವೆಯೇ ಗುಜರಾತ್ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ತಪ್ಪುತ್ತದೆ ಎಂಬ ಚರ್ಚೆಯೇ ಜೋರಾಗಿದೆ.
ಗುಜರಾತಿನ ‘ಕಪ್ಪು ಕುದುರೆʼ: ಪ್ರತಿ ರವಿವಾರ ಬೆಳಿಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಗುಜರಾತ್‌ನಲ್ಲಿರುತ್ತಾರೆ. ಅದರ ಪರಿಣಾಮವೋ ಏನೋ ಗುಜರಾತಿನಲ್ಲಿ ನಡೆದ ಬಹುತೇಕ ಚುನಾವಣಾ ಪೂರ್ವ ಸರ್ವೇಗಳ ಪ್ರಕಾರ ಆಮ್ ಆದ್ಮಿ ಪಾರ್ಟಿ ಕನಿಷ್ಠ 17ರಿಂದ ಗರಿಷ್ಠ 22ರ ವರೆಗೆ ವೋಟು ಪಡೆಯಲಿದೆ. ಅಂದರೆ ಗುಜರಾತಿನ ಸರಾಸರಿ ಪ್ರತಿ 5ರಲ್ಲಿ ಒಬ್ಬ ಮತದಾರ ‘ಪೊರಕೆ’ ಹಿಡಿಯಲಿದ್ದಾನೆ. 2021ರಲ್ಲಿ ನಡೆದ ಸೂರತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ನಷ್ಟಆಗುವುದರ ಜೊತೆಗೆ ಆಪ್ 21 ಸೀಟು ಗೆದ್ದು ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿತ್ತು.
India Gate: ಕೈ ಬಿಟ್ಟು ಹೋಗದಂತೆ ಗಾಂಧಿಗಳ ಕಸರತ್ತು
ಆದರೆ 2022ರಲ್ಲಿ ರಾಜಧಾನಿ ಗಾಂಧಿನಗರದಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಆಪ್ 17 ಪ್ರತಿಶತ ವೋಟು ಪಡೆದರೂ ಗೆದ್ದಿದ್ದು ಒಂದು ಸೀಟು ಮಾತ್ರ. ಆದರೆ ಸೂರತ್ ಇರಲಿ, ಗಾಂಧಿನಗರ ಇರಲಿ ಆಪ್ ಸ್ಪರ್ಧೆಯಿಂದ ಉಂಟಾಗಿರುವ ತ್ರಿಕೋನ ಪೈಪೋಟಿಯ ನೇರ ಲಾಭ ಆಗಿದ್ದು ಬಿಜೆಪಿಗೆ. ಗಮನಿಸಬೇಕಾದ ಅಂಶ ಎಂದರೆ ಆಪ್ ರಂಗ ಪ್ರವೇಶದಿಂದ ಬಿಜೆಪಿ ವೋಟು ಪ್ರತಿಶತ ಕಡಿಮೆ ಆದರೂ ಕೂಡ ಸೀಟುಗಳು ಏರಿಕೆ ಆಗುತ್ತಿವೆ. ಫಲಿತಾಂಶ ಏನೇ ಬಂದರೂ ಕೂಡ ಗುಜರಾತ್‌ನಲ್ಲಿ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಬೆಳೆದಷ್ಟೇ ವೇಗದಿಂದ ಆಮ್ ಆದ್ಮಿ ಬೆಳೆಯುತ್ತಿದೆ ಎಂಬುದು ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಹತ್ವಪೂರ್ಣ.
ಇದಕ್ಕೆ ಬಹು ಮುಖ್ಯ ಕಾರಣ ಕಾಂಗ್ರೆಸ್‌ನ ದುರ್ಬಲ ರಾಷ್ಟ್ರ ಮತ್ತು ರಾಜ್ಯ ನಾಯಕತ್ವಗಳಿಂದ ಪರಂಪರಾಗತ ಬಿಜೆಪಿ ವಿರೋಧಿ ಮತದಾರರು ಬೇಸತ್ತಿರುವುದು. ಪದೇಪದೇ ಕಾಂಗ್ರೆಸ್‌ಗೆ ವೋಟು ಹಾಕಿ ಬೇಸತ್ತಿರುವ ಮತದಾರರು ಆಪ್‌ನತ್ತ ವಾಲುತ್ತಿದ್ದರೆ 27 ವರ್ಷಗಳಿಂದ ಬಿಜೆಪಿಗೆ ವೋಟು ಹಾಕಿ ಬೇಸರಗೊಂಡಿರುವ ಸಣ್ಣ ಪ್ರಮಾಣದ ಬಿಜೆಪಿ ಮತದಾರರು ಮೋದಿ ಕಾರಣದಿಂದ ಕೊನೆಗೆ ಕಮಲಕ್ಕೆ ಹಾಕಬೇಕೋ ಅಥವಾ ಬದಲಾವಣೆ ಮಾಡಬೇಕೋ ಎಂಬ ದ್ವಂದ್ವದಲ್ಲಿದ್ದಾರೆ. ಹೀಗಾಗಿಯೇ ಸರ್ವೇಗಳು 25 ವರ್ಷ ಅಧಿಕಾರದಲ್ಲಿರುವ ಬಿಜೆಪಿ ಬರೀ 3 ಪ್ರತಿಶತ ವೋಟು ಕಳೆದುಕೊಳ್ಳಲಿದೆ ಎಂದು ತೋರಿಸುತ್ತಿದ್ದರೆ, ಕಾಂಗ್ರೆಸ್ 25 ವರ್ಷ ವಿರೋಧ ಪಕ್ಷದಲ್ಲಿ ಇದ್ದರೂ ಕೂಡ 10ರಿಂದ 12 ಪ್ರತಿಶತ ವೋಟು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಿವೆ.
ಬಿಜೆಪಿಯಿಂದ ಪ್ರತಿದಿನ ಸ್ನೇಹಮಿಲನ!: ಚುನಾವಣೆಯಿಂದ ಚುನಾವಣೆಗೆ ಪಾಟಿದಾರರು ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ. 2017ರಲ್ಲಿ ಸೌರಾಷ್ಟ್ರದ ಗ್ರಾಮೀಣ ಭಾಗದ ಪಾಟಿದಾರರು ಕಾಂಗ್ರೆಸ್ ಕೈಹಿಡಿದಿದ್ದರೆ ಸೂರತ್ ಭಾಗದ ಶಹರ ಪಾಟಿದಾರರು ಬಿಜೆಪಿ ಕಡೆ ವಾಲಿದ್ದರಿಂದ ಪ್ರಯಾಸದಿಂದಾದರೂ ಸರಿ ಬಿಜೆಪಿ ಅಧಿಕಾರ ಉಳಿಸಿಕೊಂಡಿತ್ತು. ಆದರೆ ಈಗ ಸೂರತ್ ಭಾಗದಲ್ಲಿ ಆಮ… ಆದ್ಮಿ ಪಕ್ಷ ಚಿಗಿತುಕೊಳ್ಳುತ್ತಿರುವುದು ಕಾಂಗ್ರೆಸ್ ಜೊತೆ ಬಿಜೆಪಿಯ ಚಿಂತೆಯನ್ನು ಕೂಡ ಹೆಚ್ಚಿಸಿದೆ. ಹೀಗಾಗಿ ಉತ್ತರ ಪ್ರದೇಶದಂತೆ ಬಿಜೆಪಿ ಅತಿ ಹಿಂದುಳಿದ ಸಮುದಾಯಗಳನ್ನು ಗಟ್ಟಿಯಾಗಿ ಜೊತೆಗಿಟ್ಟುಕೊಳ್ಳಲು ಪೂರ್ಣ ಪ್ರಯತ್ನ ಹಾಕುತ್ತಿದೆ.
ಹಿಂದುಳಿದವರಲ್ಲಿ ಕ್ಷತ್ರಿಯರು ಮತ್ತು ಅಹಿರರು ಹೆಚ್ಚು ಕಾಂಗ್ರೆಸ್ ಜೊತೆ ಇದ್ದಾರೆ. ಹೀಗಾಗಿ ಬಿಜೆಪಿ ಬಡಿಗೆ ಕೆಲಸ ಮಾಡುವ ವಿಶ್ವಕರ್ಮರು, ರೇಷ್ಮೆ ಜರಿ ಕೆಲಸ ಮಾಡುವ ರಾಣಾಗಳು, ಡೊಳ್ಳು ಬಾರಿಸುವ ರಾವಲ್‌ಗಳು, ಮಣ್ಣಿನ ಮನೆ ಕಟ್ಟುವ ಒಡಗಳು, ಸಾಧು ಬಟ್ಟೆಹಾಕಿ ಊರೂರು ತಿರುಗುವ ಗೋಸ್ವಾಮಿಗಳು, ಅಲೆಮಾರಿಗಳಾದ ವಂಜಾರಾಗಳು, ಕೇಶಕರ್ತನ ಮಾಡುವ ನ್ಹಾಯಿ ವಾನಂದರ ಸ್ನೇಹ ಮಿಲನಗಳನ್ನು ಏರ್ಪಡಿಸುತ್ತಿದ್ದು, ಸ್ವತಃ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ದಿನವೂ ಒಂದು ಸ್ನೇಹ ಮಿಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗುಜರಾತ್‌ನಲ್ಲಿ 52 ಪ್ರತಿಶತ ಹಿಂದುಳಿದ ವರ್ಗದ ವೋಟುಗಳಿದ್ದು, ಸುಮಾರು 146 ಸಣ್ಣ ಸಣ್ಣ ಹಿಂದುಳಿದ ಜಾತಿಗಳಿವೆ. ಗುಜರಾತ್ ಇರಲಿ, ಯುಪಿ ಇರಲಿ, ಬಿಜೆಪಿ ಗೆಲುವಿಗೆ ಅತಿ ದೊಡ್ಡ ಕಾರಣ ಎಂದರೆ ನಾಯಕತ್ವ ಇಲ್ಲದ, ಧ್ವನಿ ಇಲ್ಲದ ಈ ಸಣ್ಣ ಸಮುದಾಯಗಳು ಮೋದಿ ಮತ್ತು ಹಿಂದುತ್ವದ ಕಾರಣದಿಂದ ಜೊತೆಗೆ ಬಂದಿರುವುದು.
India Gate: ನಿತೀಶ್ ಪ್ರಧಾನಿ ಕನಸು ರಾಹುಲ್‌ಗೆ ತಣ್ಣೀರು?
ಅರಸ್ ಮತ್ತು ಮೋದಿ ಸಾಮ್ಯತೆಗಳು: 1972ರಲ್ಲಿ ಕರ್ನಾಟಕದಲ್ಲಿ ದೇವರಾಜ ಅರಸ್ ಏನು ಮಾಡಿದರೋ ಒಂದು ರೀತಿ 2002ರಲ್ಲಿ ಗುಜರಾತ್‌ನಲ್ಲಿ ಮೋದಿ ಮಾಡಿದ್ದು ಅದನ್ನೇ. ಪ್ರಬಲ ನಿಜಲಿಂಗಪ್ಪ ಅವರನ್ನು ಎದುರು ಹಾಕಿಕೊಂಡು ಕಾಂಗ್ರೆಸ್ ಚುಕ್ಕಾಣಿ ಹಿಡಿದಿದ್ದ ದೇವರಾಜ ಅರಸರಂತೆ ಮೋದಿ ಕೂಡ ಅಧಿಕಾರಕ್ಕೆ ಬಂದಿದ್ದು ಪ್ರಬಲ ಪಾಟಿದಾರ ಸಮುದಾಯದ ಕೇಶುಭಾಯಿ ಪಟೇಲರನ್ನು ಬದಲಿಸಲು ಅಟಲ್, ಅಡ್ವಾಣಿ ಒಪ್ಪಿದ ಮೇಲೆ. ಭೂಸುಧಾರಣೆ, ಇಂದಿರಾ ಗಾಂಧಿ ಚರಿಷ್ಮಾ ಮತ್ತು ಜಾಣ ಜಾತಿ ಸಮೀಕರಣಗಳ ಕಾರಣದಿಂದ ದೇವರಾಜ ಅರಸ್ ಚುನಾವಣೆ ಗೆದ್ದರೆ ಮೋದಿ ಕೂಡ ಗೆದ್ದಿದ್ದು ಹಿಂದುತ್ವ, ತಮ್ಮ ಸ್ವಚ್ಛ ಇಮೇಜ್ ಮತ್ತು ಜಾತಿ ಸಮೀಕರಣಗಳ ಚತುರತೆಯಿಂದಾಗಿಯೇ.
ಘಟಾನುಘಟಿ ಪ್ರಬಲ ಜಾತಿಗಳು ಮುನಿಸಿ ಕೊಂಡಾಗ ಅದೇ ಜಾತಿಗಳ ಸ್ಥಳೀಯ ನಾಯಕರಿಗೂ ಟಿಕೆಟ್ ನೀಡಿ ಜೊತೆಗಿಟ್ಟುಕೊಂಡು ಅಹಿಂದದ ವೋಟು ಕೊಡಿಸಿ ಗೆಲ್ಲಿಸಿ ಅರಸರು ಯಶಸ್ವಿಯಾದರೆ, ಮೋದಿ ಗುಜರಾತ್ ಯಶಸ್ಸಿಗೆ ಕೂಡ ದೊಡ್ಡ ಕಾರಣ ಸ್ಥಳೀಯ ಪಾಟಿದಾರ ನಾಯಕರನ್ನು ಜೊತೆಗೆ ಇಟ್ಟುಕೊಂಡಿರುವುದು. ಕರ್ನಾಟಕದಲ್ಲಿ ಅರಸರ ಕಾಲದಲ್ಲಿ ಸಣ್ಣ ಸಣ್ಣ ಸಮುದಾಯದ ನಾಯಕರು ಜನ ಪ್ರತಿನಿಧಿಗಳಾದರೆ ಗುಜರಾತ್‌ನಲ್ಲಿ ಕೂಡ ಪಟೇಲ… ಮಯವಾಗಿದ್ದ ಬಿಜೆಪಿಯಲ್ಲಿ ಸಣ್ಣ ಸಮುದಾಯಗಳಿಗೂ ಕೆಲವು ಕಡೆ ಟಿಕೆಟ್ ಕೊಟ್ಟು ನಿಲ್ಲಿಸಿ ಗೆಲ್ಲಿಸಿದ್ದು ವಿಶೇಷ. ಒಂದು ಭಿನ್ನತೆ ಎಂದರೆ ಹೈಕಮಾಂಡ್ ಆಗಿದ್ದ ಇಂದಿರಾರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದ ಅರಸರನ್ನು ಇಂದಿರಾ ಗಾಂಧಿಯೇ ಬದಿಗೆ ಸರಿಸಿದರು. ಹೈಕಮಾಂಡ್ ಆಗಿದ್ದ ಅಡ್ವಾಣಿ ಬೆಂಬಲದಿಂದ ಮುಖ್ಯಮಂತ್ರಿ ಆದ ನರೇಂದ್ರ ಮೋದಿ ಅಪಾರ ಜನಪ್ರಿಯತೆ ಮತ್ತು ಪರಿಶ್ರಮದಿಂದ ತಾವೇ ಹೈಕಮಾಂಡ್ ಆದರು.
ಪಾಟಿದಾರರು ಯಾರ ಕಡೆ?: ಗುಜರಾತ್‌ನಲ್ಲಿ 182 ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಪಾಟಿದಾರರು ಯಾರು ಶಾಸಕ ಆಗಬೇಕು ಎಂದು ತೀರ್ಮಾನಿಸುವಷ್ಟುಪ್ರಭಾವ ಇಟ್ಟುಕೊಂಡಿದ್ದರೆ, 42 ಕ್ಷೇತ್ರಗಳಲ್ಲಿ ಪಾಟಿದಾರರು ನಿರ್ಣಾಯಕ ವೋಟ್ ಬ್ಯಾಂಕ್. ಆನಂದಿ ಬೆನ್ ಪಟೇಲ್‌ರನ್ನು ಮೀಸಲಾತಿ ಆಂದೋಲನದ ಕಾರಣದಿಂದ ತೆಗೆದ ಮೇಲೆ ಅತ್ಯಂತ ಸಣ್ಣ ಜೈನ ಸಮುದಾಯದ ವಿಜಯ ರೂಪಾನಿಯನ್ನು ಮುಖ್ಯಮಂತ್ರಿ ಮಾಡಿ ಕೂರಿಸಿದ್ದ ಮೋದಿ ಚುನಾವಣೆಗೆ ಒಂದು ವರ್ಷ ಇರುವಾಗ ಮೊದಲನೇ ಬಾರಿ ಗೆದ್ದಿದ್ದ ಯಾರಿಗೂ ಗೊತ್ತಿರದ ಭೂಪೇಂದ್ರ ಪಟೇಲ…ರನ್ನು ರೂಪಾನಿ ಸ್ಥಾನದಲ್ಲಿ ಕೂರಿಸಿದ್ದರು.
ಅಷ್ಟೇ ಅಲ್ಲ ಪಾಟಿದಾರರು ಜಾಸ್ತಿ ನಡೆದುಕೊಳ್ಳುವ ಕೋಡಾಲ ಧಾಮ ಟ್ರಸ್ಟ್‌ನ ಮುಖ್ಯಸ್ಥ ಆಗಿರುವ ಉದ್ಯಮಿ ನರೇಶ ಪಟೇಲ ರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕಳೆದ ತಿಂಗಳು ಗುಜರಾತ್‌ಗೆ ಹೋಗಿದ್ದ ಮೋದಿ ಪಾಟಿದಾರ ಸಮುದಾಯ ನಿಜಕ್ಕೂ ಗ್ಲೋಬಲ… ಸಮುದಾಯ ಎಂದು ಪ್ರಶಂಸೆಯ ಮಹಾಪೂರ ಹರಿಸಿ ಬಂದಿದ್ದಾರೆ. ಬಿಜೆಪಿ ಎಂದರೆ ಉರಿದು ಬೀಳುತ್ತಿದ್ದ ಹಾರ್ದಿಕ ಪಟೇಲ್ ಈಗ ಬಿಜೆಪಿ ಎಂದರೆ ನಮ್ಮ ಪಾರ್ಟಿ, ನನ್ನ ತಂದೆ ಕೆಲಸ ಮಾಡುತ್ತಿದ್ದ ಪಾರ್ಟಿ ಎಂದು ಹೇಳುತ್ತಾ ತಿರುಗುತ್ತಿದ್ದಾರೆ. 50 ಪ್ರತಿಶತ ಪಾಟಿದಾರರು ಜೊತೆಗೆ ನಿಂತರೂ ಸಾಕು ಮರಳಿ ಅಧಿಕಾರಕ್ಕೆ ಏರಬಹುದು ಎಂಬ ತಂತ್ರದೊಡನೆ ಬಿಜೆಪಿ ಕೆಲಸ ಮಾಡುತ್ತಿದೆ.
ದುರ್ಬಲಗೊಳ್ಳುತ್ತಿರುವ ಕಾಂಗ್ರೆಸ್: ಕಳೆದ ಮಾರ್ಚ್‌ನಿಂದ ಈಚೆಗೆ ಪ್ರಧಾನಿ ಮೋದಿ 12 ಬಾರಿ ಗುಜರಾತ್‌ಗೆ ಹೋಗಿ ಬಂದಿದ್ದಾರೆ. ಕೇಜರಿವಾಲ… ಅಂತೂ ಪ್ರತಿ ರವಿವಾರ ಗುಜರಾತ್ ಸುತ್ತುತ್ತಾರೆ. ಆದರೆ ಕಾಂಗ್ರೆಸ್ ಪರವಾಗಿ ರಾಹುಲ್ ಹೋಗಿದ್ದು ಸೆಪ್ಟೆಂಬರ್‌ನಲ್ಲಿ ಒಮ್ಮೆ ಮಾತ್ರ. ನವರಾತ್ರಿಗೆ ಬನ್ನಿ ಬನ್ನಿ ಎಂದು ಕರೆದರೂ ಪ್ರಿಯಾಂಕಾ ಗಾಂಧಿ ಗುಜರಾತ್‌ಗೆ ಹೋಗುತ್ತಿಲ್ಲ. 2017ರಲ್ಲಿ ಗೆದ್ದಿದ್ದ 77ರಲ್ಲಿ 16 ಶಾಸಕರನ್ನು ಬಿಜೆಪಿ ತನ್ನ ಕಡೆ ಸೇರಿಸಿಕೊಂಡಿದೆ. ಇನ್ನು 8 ಶಾಸಕರು ಚುನಾವಣೆ ಘೋಷಣೆಯಾದ ಮರುದಿನ ಬಿಜೆಪಿ ಸೇರಲಿದ್ದಾರೆ ಅನ್ನುವ ಸುದ್ದಿ ಇದೆ. ಹಾರ್ದಿಕ್ ಪಟೇಲ… ಕಾಂಗ್ರೆಸ್ ನಾಯಕರ ಜೊತೆ ಏಗಲು ಆಗದೇ ಬಿಜೆಪಿ ಸೇರಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ರಣತಂತ್ರ ಹೆಣೆದಿದ್ದ ಅಶೋಕ್ ಗೆಹಲೋಟ್‌ಗೆ ಜೈಪುರ ಬಿಟ್ಟು ಬಂದು ಗಾಂಧಿನಗರದಲ್ಲಿ ಕೂರಲು ಪುರುಸೊತ್ತು ಇಲ್ಲ. ರಾಹುಲ್ ಜೊತೆ ಯಾತ್ರೆಯಲ್ಲಿ ಬ್ಯುಸಿ ಇರುವ ಸುರ್ಜೇವಾಲಾ, ವೇಣುಗೋಪಾಲ್, ದಿಗ್ವಿಜಯ ಸಿಂಗ್‌ರಿಗೆ ಗುಜರಾತ್ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ. ಹೀಗಾಗಿ ಅಲ್ಲಿನ ಕಾಂಗ್ರೆಸ್ ನಾಯಕರು ಪರಸ್ಪರ ಜಗಳ ಆಡಿಕೊಂಡು ಬೈದಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಬಿಜೆಪಿ ಮೇಲೆ ಸಿಟ್ಟಿರುವ, ಕಾಂಗ್ರೆಸ್‌ನಿಂದ ಮೋಹ ಭಂಗಗೊಂಡಿರುವ ಮತದಾರರು ಆಮ… ಆದ್ಮಿಯನ್ನು ಕೆಂಪು ಹಾಸು ಹಾಕಿ ಗುಜರಾತ್‌ಗೆ ಕರೆಯದೆ ಇನ್ನೇನು ತಾನೇ ಮಾಡಲು ಸಾಧ್ಯ?