Asianet Suvarna News Asianet Suvarna News

ಉತ್ತರ ಕನ್ನಡ: ಬೋಗಸ್ ಕಂಪೆನಿಗಳ ವಂಚನೆ ಜಾಲಕ್ಕೆ ಬಿದ್ದು ಏಜೆಂಟರ ನರಳಾಟ!

1992ರಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಎಲ್ಲಾ ನಕಲಿ ಕಂಪೆನಿಗಳಿಗೂ ಸೆಬಿಯಡಿ ನೋಂದಾವಣೆಗೆ ಅವಕಾಶ ಕೊಟ್ಟಿತ್ತು. ಆದರೆ, 2013ರಲ್ಲಿ ನರೇಂದ್ರ ಮೋದಿ ಸರಕಾರ ಬಂದ ಮೇಲೆ ಈ ನಕಲಿ ಕಂಪೆನಿಗಳನ್ನು ಮುಚ್ಚಿಸಿ ಪ್ರಮುಖರನ್ನು ಜೈಲಿಗೆ ತಳ್ಳಲಾಗಿತ್ತು. ಈ ಬೋಗಸ್ ಕಂಪೆನಿಗಳು ಹೊಂದಿದ್ದ ಆಸ್ತಿಯನ್ನು ಸೆಬಿ ಮುಟ್ಟುಗೋಲು ಹಾಕಿದ್ದು, ಇಂದಿಗೂ ಈ ಆಸ್ತಿಗಳು ಸೆಬಿಯಡಿಯಿವೆ. ನಮಗೆ ನ್ಯಾಯ ಒದಗದಿದ್ದಲ್ಲಿ ರಾಜ್ಯದ 3 ಲಕ್ಷ ಸಂತ್ರಸ್ತ ಏಜೆಂಟರು ಲೋಕಸಭೆ ಚುನಾವಣೆಯಲ್ಲಿ ನೋಟಾ ಒತ್ತೋದಾಗಿ ಸಂತ್ರಸ್ತ ಏಜೆಂಟರು ಎಚ್ಚರಿಕೆ ನೀಡಿದ್ದಾರೆ.

Agents suffer cheating by bogus companies at mangaluru rav
Author
First Published Aug 24, 2023, 8:26 PM IST

- ಭರತ್‌ರಾಜ್ ಕಲ್ಲಡ್ಕ

ಕಾರವಾರ:  ವಿವಿಧ ಖಾಸಗಿ ಕಂಪೆನಿಗಳ ವಂಚನೆಯ ಜಾಲಕ್ಕೆ ಬಿದ್ದು ರಾಜ್ಯದ ಲಕ್ಷಾಂತರ ಸಂತ್ರಸ್ತ ಏಜೆಂಟರು ನರಳಾಡುತ್ತಿದ್ದಾರೆ. ಕಳೆದ 10ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಸಂತ್ರಸ್ತ ಏಜೆಂಟರು, ಬೋಗಸ್ ಕಂಪೆನಿಗಳು ಜನಸಾಮಾನ್ಯರ ಹಣ ವಾಪಾಸ್ ನೀಡುವಲ್ಲಿ ಸಹಾಯ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಮನವಿ ಮಾಡುತ್ತಿದ್ದಾರೆ. ಒಂದು ವೇಳೆ ತಮಗೆ ನ್ಯಾಯ ಒದಗದಿದ್ದಲ್ಲಿ ರಾಜ್ಯದ 3 ಲಕ್ಷ ಏಜೆಂಟರು ಲೋಕಸಭೆ ಚುನಾವಣೆಯಲ್ಲಿ ನೋಟಾ ಒತ್ತೋದಾಗಿ ಎಚ್ಚರಿಕೆ ಕೂಡಾ ನೀಡಿದ್ದಾರೆ. 

ಹೌದು, ಬೋಗಸ್ ಕಂಪೆನಿಗಳು ತೋರಿಸಿದ ಕಮಿಷನ್ ಆಸೆಗೆ ಬಿದ್ದು ರಾಜ್ಯಾದ್ಯಂತ ಲಕ್ಷಾಂತರ ಏಜೆಂಟರು ಇತ್ತ ತಮಗೆ ನ್ಯಾಯ ಪಡೆಯಲಾಗದೇ, ಅತ್ತ ಜನರ ಹಣ ಹಿಂತಿರುಗಿಸಲಾಗದೇ ಪರದಾಡುತ್ತಿದ್ದಾರೆ. ಪಿಎಸಿಎಲ್ ಲಿಮಿಟೆಡ್, ಗರಿಮಾ ರಿಯಲ್ ಎಸ್ಟೇಟ್ ಆ್ಯಂಡ್ ಅಲೈಡ್ ಲಿಮಿಟೆಡ್, ಕಲ್ಪತರು, ಅಗ್ರಿಗೋಲ್ಡ್, ಸಮೃದ್ಧಿ ಜೀವನ್, ಗುರುಟೀಕ್, ಸಾಯಿಪ್ರಸಾದ್, ಪಂಚವಟಿ ಮುಂತಾದ ಹಲವು ಹೂಡಿಕೆ ಕಂಪೆನಿಗಳು ಜನರು ಹಾಗೂ ಏಜೆಂಟರಿಗೆ ಸಾವಿರಾರು ಕೋಟಿ ರೂಪಾಯಿ ಹಣ ಪಂಗನಾಮ ಹಾಕಿವೆ. ಇದರಿಂದ ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಜನಸಾಮಾನ್ಯರು ಹಾಗೂ ಏಜೆಂಟರು ಹಣ ಕಳೆದುಕೊಂಡಿದ್ದು, ನ್ಯಾಯಕ್ಕಾಗಿ ಕಳೆದ 10 ವರ್ಷಗಳಿಂದ ಸಂತ್ರಸ್ತ ಏಜೆಂಟರು ಅಲೆದಾಡುತ್ತಿದ್ದಾರೆ. 

RAW ಏಜೆಂಟ್ ಎಂದು ಹೇಳಿಕೊಂಡು ವಂಚನೆ: ಕೇರಳ ಮೂಲದ ಬೆನೆಡಿಕ್ಟ್ ಸಾಬು ಬಂಧನ

"ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ" ಎಂಬ ಸಂಘಟನೆ ಮಾಡಿಕೊಂಡಿರುವ ಈ ಏಜೆಂಟರು ರಾಜ್ಯದ ಪ್ರತೀ ಜಿಲ್ಲೆಗಳಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಏಜೆಂಟರು ಹೇಳುವ ಪ್ರಕಾರ, 
1992ರಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಎಲ್ಲಾ ನಕಲಿ ಕಂಪೆನಿಗಳಿಗೂ ಸೆಬಿಯಡಿ ನೋಂದಾವಣೆಗೆ ಅವಕಾಶ ಕೊಟ್ಟಿತ್ತು. ಆದರೆ, 2013ರಲ್ಲಿ ನರೇಂದ್ರ ಮೋದಿ ಸರಕಾರ(Narendra Modi government) ಬಂದ ಮೇಲೆ ಈ ನಕಲಿ ಕಂಪೆನಿಗಳನ್ನು ಮುಚ್ಚಿಸಿ ಪ್ರಮುಖರನ್ನು ಜೈಲಿಗೆ ತಳ್ಳಲಾಗಿತ್ತು. ಈ ಬೋಗಸ್ ಕಂಪೆನಿಗಳು ಹೊಂದಿದ್ದ ಆಸ್ತಿಯನ್ನು ಸೆಬಿ ಮುಟ್ಟುಗೋಲು ಹಾಕಿದ್ದು, ಇಂದಿಗೂ ಈ ಆಸ್ತಿಗಳು ಸೆಬಿಯಡಿಯಿವೆ. ಆದರೆ, ಜನಸಾಮಾನ್ಯರು ಕಳೆದುಕೊಂಡಿರುವ ಸಾವಿರಾರು ಕೋಟಿ ರೂಪಾಯಿ ಹಣವನ್ನು ವಾಪಾಸ್ ನೀಡಲು ಸರಕಾರಗಳು ಯಾವುದೇ ಸಹಾಯ ಮಾಡಿಲ್ಲ. ನಮಗೆ ನ್ಯಾಯ ಒದಗದಿದ್ದಲ್ಲಿ ರಾಜ್ಯದ 3 ಲಕ್ಷ ಸಂತ್ರಸ್ತ ಏಜೆಂಟರು ಲೋಕಸಭೆ ಚುನಾವಣೆಯಲ್ಲಿ ನೋಟಾ ಒತ್ತೋದಾಗಿ ಸಂತ್ರಸ್ತ ಏಜೆಂಟರು ಎಚ್ಚರಿಕೆ ನೀಡಿದ್ದಾರೆ.

ಅಂದಹಾಗೆ, ಜನರ ಹಣ ಬಳಸಿ ಇಡೀ ದೇಶದಲ್ಲಿ ಸುಮಾರು 11 ಲಕ್ಷ ಎಕರೆಗೂ ಹೆಚ್ಚಿನ ಜಮೀನು ಈ ನಕಲಿ ಕಂಪೆನಿಗಳು ಹೊಂದಿವೆ. ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಬೋಗಸ್ ಕಂಪೆನಿಯಾದ ಪಿಎಸಿಎಲ್ ಲಿಮಿಟೆಡ್(PACL) ಇಂದಿಗೂ 2382 ಎಕರೆ ಜಮೀನು ಹೊಂದಿದೆ.100 ಜನ ರೈತರಿಂದ ಪಡೆದ‌ ಅರ್ಧ ಹಣದಿಂದ ಜಮೀನು ಖರೀದಿಸಿ ತನ್ನ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದೆ.‌ ಆದರೆ, ಪಿಎಸಿಎಲ್ ಸೇರಿದಂತೆ ಈ ನಕಲಿ ಕಂಪೆನಿಗಳು ಪ್ರತೀ ಹಿರಿಯ ಏಜೆಂಟರನ್ನು ನಂಬಿಸಿ ಅವರ ಮೂಲಕ 20-30 ಕೋಟಿ ರೂ. ಜನರ ಹಣ ವಸೂಲಿ ಮಾಡಿ ಮೋಸ ಮಾಡಿವೆ. ನಕಲಿ ಕಂಪೆನಿಗಳು ರಾಜ್ಯದಲ್ಲಿ ಹೊಂದಿರುವ ಯಾವುದಾದರೂ ಆಸ್ತಿ ಮಾರಿದರೂ ಸಂತ್ರಸ್ತ ಏಜೆಂಟರು ಜನರ ಹಣ ಹಿಂತಿರುಗಿಸಲು ಸಾಧ್ಯ. ಈ ಕಾರಣದಿಂದ ನಕಲಿ ಕಂಪೆನಿಗಳಿಂದ ಜನರ ಹಣ ವಾಪಾಸ್ ಪಡೆಯಲು ದೇಶ ಹಾಗೂ ರಾಜ್ಯದಲ್ಲಿ ಅನಿಯಮಿತ ಠೇವಣಿ ಯೋಜನೆ ನಿಷೇಧ ಕಾಯ್ದೆ 2019 ( ಬಡ್ಸ್ ಆ್ಯಕ್ಟ್) ಜಾರಿಗೊಳಿಸಲು ಸಂತ್ರಸ್ತ ಏಜೆಂಟರು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಈ ಸಂಬಂಧ ದೇಶದ ಪ್ರಧಾನಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಕೂಡಾ ಸಲ್ಲಿಸಿದ್ದಾರೆ. 

ಜನಸಾಮಾನ್ಯರ ಹಣವನ್ನು ಈ ವಿವಿಧ ಬೋಗಸ್ ಕಂಪೆನಿಗಳು ತಿಂದು ತೇಗಿದ್ದರಿಂದ ಜನರು ಅಮಾಯಕ ಏಜೆಂಟರನ್ನು ಇಂದಿಗೂ ಪ್ರಶ್ನಿಸುವುದು ಮುಂದುವರಿಸಿದ್ದಾರೆ. ಕೆಲವು ಏಜೆಂಟರಂತೂ  ಮರ್ಯಾದೆಗೆ ಅಂಜಿ ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ಬಡ್ಸ್ ಆ್ಯಕ್ಟ್ ಜಾರಿಗೊಳಿಸಿ, ಬೋಗಸ್ ಕಂಪೆನಿಗಳ ಆಸ್ತಿಯನ್ನು ಮಾರಾಟ ಮಾಡಿ ಸರಕಾರಗಳು ಜನಸಾಮಾನ್ಯರ ಹಣವನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಏಜೆಂಟರು ಒತ್ತಾಯಿಸಿದ್ದಾರೆ.

ಶೂನ್ಯ ಉಳಿತಾಯ ಖಾತೆಗೂ ಕನಿಷ್ಠ ಬ್ಯಾಲೆನ್ಸ್‌ ಕಟ್ಟಪ್ಪಣೆ; ಬ್ಯಾಂಕ್‌ಗಳ ಧೋರಣೆಗೆ ವಿದ್ಯಾರ್ಥಿಗಳು ಹೈರಾಣು!

 ಒಟ್ಟಿನಲ್ಲಿ ವಿವಿಧ ಬೋಗಸ್ ಕಂಪೆನಿಗಳ ಮೋಸದ ಜಾಲಕ್ಕೆ ಬಿದ್ದು ಜನಸಾಮಾನ್ಯರು ಹಾಗೂ ಸಂತ್ರಸ್ತ ಏಜೆಂಟರು ಭಾರೀ ಸಂಕಷ್ಟ ಎದುರಿಸುತ್ತಿದ್ದು, ನ್ಯಾಯಕ್ಕಾಗಿ ಅಲೆದಾಟ ಮುಂದುವರಿಸಿದ್ದಾರೆ. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೋಗಸ್ ಕಂಪೆನಿಗಳು ಹೊಂದಿರುವ ಆಸ್ತಿಗಳನ್ನು ಮಾರಾಟ ಮಾಡಿ ಅದರ ಮೂಲಕ ಹಣ ಕಳೆದುಕೊಂಡ ಜನರಿಗೆ ಸೊತ್ತು ಹಿಂತಿರುಗಿಸಬೇಕಿದೆ‌. ಸಂತ್ರಸ್ತ ಏಜೆಂಟರಿಗೂ ನ್ಯಾಯ ಒದಗಿಸಿ ಅವರನ್ನೂ ಆರೋಪಗಳಿಂದ ಮುಕ್ತಗೊಳಿಸಿ ನೆಮ್ಮದಿ ಜೀವನ‌ ಕಲ್ಪಿಸಬೇಕಿದೆ.

Follow Us:
Download App:
  • android
  • ios