ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾಡಿದ್ದ ಬಟ್ಟೆ ಬ್ಯಾಗ್‌ ಖರೀದಿ ಅಕ್ರಮ ಆರೋಪದ ಕುರಿತ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿದೆ.

ಬೆಂಗಳೂರು (ಮಾ.01): ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಅವರು ಭಾರತೀಯ ನಾಗರೀಕ ಸೇವೆ (ಐಎಎಸ್‌) ಅಧಿಕಾರಿ ಆಗಿರುವ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾಡಿದ್ದ ಬಟ್ಟೆ ಬ್ಯಾಗ್‌ ಖರೀದಿಯಲ್ಲಿ ಅಕ್ರಮದ ಕುರಿತ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ಈ ಮೂಲಕ ಐಪಿಎಸ್‌ ಅಧಿಕಾರಿ ಈಗಾಗಲೇ 19 ಅಂಶಗಳ ಆರೋಪಗಳನ್ನು ಮಾಡಿದ್ದು, ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ರೋಹಿಣಿ ಸಿಂಧೂರಿ ವಿರುದ್ಧ ಸರ್ಕಾರಕ್ಕೆ ತನಿಖಾ ವರದಿಯೊಂದು ಸಲ್ಲಿಕೆಯಾಗಿದ್ದು, ಸರ್ಕಾರದ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಎಸಗಿದ ಅಕ್ರಮವೊಂದರ ಕುರಿತು ವರದಿ ಇದಾಗಿದ್ದು, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಎತ್ತಿದ್ದ ಅಕ್ರಮದ ಕುರಿತು ಕೊನೆಗೂ ವರದಿ ಸಲ್ಲಿಕೆ ಆಗಿದೆ. ಈ ವರದಿಯನ್ನು ಸರ್ಕಾರ ಜಾರಿ ಮಾಡಿದರೆ ರೋಹಿಣಿ ಸಿಂಧೂರಿ ಅವರ ವಿರುದ್ಧ ಶಿಸ್ತು ಕ್ರಮ ಆಗುವುದು ಖಚಿತವಾಗಿದೆ.

IAS vs IPS: ಡಿ. ರೂಪಾ ಮತ್ತೊಂದು ಸಂಕಷ್ಟ: ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿದ ರೋಹಿಣಿ ಸಿಂಧೂರಿ

ವರದಿ ಸಲ್ಲಿಸಿದ ವಸತಿ ಇಲಾಖೆ ಕಾರ್ಯದರ್ಶಿ ಜೆ. ರವಿಶಂಕರ್‌: ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ 14,71,458 ಬಟ್ಟೆ ಬ್ಯಾಗ್ ಗಳನ್ನು ಖರೀದಿಸಲು ನಿಯಮ ಉಲ್ಲಂಘಿಸಿ ಆದೇಶ ಕೊಟ್ಟಿರುವ ಕುರಿತು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಅವರಿಂದ ಗಂಭೀರ ಸ್ವರೂಪದ ದೂರ ಸಲ್ಲಿಕೆ ಆಗಿತ್ತು. ಅವರ ದೂರಿನ ಹಿನ್ನೆಲೆಯಲ್ಲಿ ತನಿಖೆ ಮಾಡಿದ ಹಿರಿಯ ಐಎಎಸ್ ಅಧಿಕಾರಿ ಜೆ. ರವಿಶಂಕರ್ ಅವರು, ಸುಧೀರ್ಘ ವಿಚಾರಣೆ ಬಳಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ವರದಿ ಸಿದ್ಧಪಡಿಸಲು ನೇಮಕ ಆಗಿದ್ದ ವೇಳೆ ಡಿಪಿಎಆರ್‌ ಅಧಿಕಾರಿ ಆಗಿದ್ದ ಜೆ. ರವಿಶಂಕರ್‌ ಈಗ ವಸತಿ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವರದಿಯಲ್ಲಿ ಪ್ರಸ್ತಾಪವಾಗಿರುವ ಪ್ರಮುಖ ವಿವರಗಳು:

  • ರೋಹಿಣಿ ಸಿಂಧೂರಿಯವರಿಂದ ಬಟ್ಟೆ ಬ್ಯಾಗ್ ಗಳನ್ನು ಖರೀದಿ ಮಾಡುವಲ್ಲಿ ಲೋಪವಾಗಿದೆ.
  • ಬಟ್ಟೆ ಬ್ಯಾಗ್ ಗಳನ್ನು ಖರೀದಿಸಲು ಅನುಮೋದನೆ ನೀಡುವಾಗ ನಿಯಮ ಉಲ್ಲಂಘನೆ.
  • ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ 14,71,458 ಬಟ್ಟೆ ಬ್ಯಾಗ್ ಖರೀದಿಗೆ ಆದೇಶ ನೀಡುವಲ್ಲಿ ಲೋಪ.
  • ಅಗ್ಗದ ಬಟ್ಟೆ ಬ್ಯಾಗ್‌ಗಳನ್ನು ಅತಿ ಹೆಚ್ಚು ಬೆಲೆಗೆ ಸಿಂಧೂರಿಯವರು ಖರೀದಿಸಿರುವುದು ಸ್ಪಷ್ಟವಾಗಿದೆ.
  • ಬಟ್ಟೆ ಬ್ಯಾಗ್‌ಗಳನ್ನು 52 ರೂ.ಗೆ ಖರೀದಿಸುವ ಮುನ್ನ ಮುಕ್ತ ಮಾರುಕಟ್ಟೆಯಲ್ಲಿನ ಬೆಲೆ ಪರಿಗಣಿಸಿಲ್ಲ.
  • 10 ರೂ.ಗಳಿಂದ 13 ರೂ.ಗೆ ಸಿಗಬಹುದಾದ ಬ್ಯಾಗ್ 52 ರೂ.ಗೆ ಖರೀದಿಸಲಾಗಿದೆ.
  • ಬಟ್ಟೆ ಬ್ಯಾಗ್ ಖರೀದಿಸುವ ಆದೇಶಕ್ಕೆ ಪಾಲಿಕೆ ಅಥವಾ ಇತರ ಸ್ಥಳೀಯ ಸಂಸ್ಥೆಗಳಿಂದ ಘಟನೋತ್ತರ ಅನುಮತಿ ಪಡೆದಿಲ್ಲ.
  • ಕರ್ನಾಟಕ ಪಾರದರ್ಶಕ ಕಾಯ್ದೆ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ.
  • ಜಿಲ್ಲಾಧಿಕಾರಿಗಳಿಗೆ 5 ಕೋಟಿ ರೂ.ಗೆ ಮಾತ್ರ ಖರೀದಿ ಆದೇಶ ನೀಡುವ ಅಧಿಕಾರ ಇದೆ.
  • ಬಟ್ಟೆ ಬ್ಯಾಗ್‌ಗಳ ಖರೀದಿಗೆ 5 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿರುವುದು ಸ್ಪಷ್ಟವಾಗಿದೆ.

'ಡಿಕೆ ರವಿ ಕೊನೆಯ ಮೆಸೇಜ್‌ ಆಧರಿಸಿ ರೋಹಿಣಿ ವಿರುದ್ಧ ತನಿಖೆ ಮಾಡಿ'

ರಾಜ್ಯ ಸರ್ಕಾರಕ್ಕೆ ಈಗಾಗಲೇ ತನಿಖಾ ವರದಿ ಸಲ್ಲಿಕೆ ಆಗಿದ್ದು, ವರದಿಯನ್ನು ಜಾರಿಗೆ ತಂದಲ್ಲಿ ಅಕ್ರಮ ಎಲ್ಲಿ ನಡೆದಿದೆ ಎನ್ನುವುದು ಪೂರ್ಣವಾಗಿ ತಿಳಿಯಲಿದೆ. ಇನ್ನು ಭಾರತೀಯ ಸಿವಿಲ್‌ ಸರ್ವಿಸ್‌ ನಿಯಮಾವಳಿ ಅನ್ವಯ ನಿಯಮ ಉಲ್ಲಂಘನೆ ವಿಧಿಸಲಾಗುವ ಶಿಕ್ಷೆ ರೋಹಿಣಿ ಸಿಂಧೂರಿ ಅವರ ಮೇಲೆ ವಿಧಿಸಲಾಗುತ್ತದೆ.