ಕಾಫಿನಾಡಲ್ಲಿ ಮತ್ತೆ ಹಿಜಾಬ್ ವಿವಾದ: ಬುರ್ಖಾ ಧರಿಸಿ ತರಗತಿಗಳಿಗೆ ಹೋದ ವಿದ್ಯಾರ್ಥಿನಿಯರು!
ಬುರ್ಖಾ ಧರಿಸಿದ ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿನ ಕಾರಿಡಾರ್ನಲ್ಲಿ ಓಡಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನಗರದ ಐಡಿಎಸ್ಜಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಕಾಲೇಜಿನ ಕಾರಿಡಾರ್ನಲ್ಲಿ ಓಡಾಡಿರುವುದು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.10): ಬುರ್ಖಾ ಧರಿಸಿದ ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿನ ಕಾರಿಡಾರ್ನಲ್ಲಿ ಓಡಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನಗರದ ಐಡಿಎಸ್ಜಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಕಾಲೇಜಿನ ಕಾರಿಡಾರ್ನಲ್ಲಿ ಓಡಾಡಿರುವುದು, ಬುರ್ಖಾ ಧರಿಸಿಯೇ ತರಗತಿಗಳನ್ನು ಕೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೇ ವಿಚಾರಕ್ಕೆ ಕಾಲೇಜಿನಲ್ಲಿ ಕೆಲ ಕಾಲ ಗೊಂದಲ ವಾತಾರವಣ ನಿರ್ಮಾಣವಾಗಿತ್ತು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
ತಮ್ಮ ಕಾಲೇಜಿನಲ್ಲಿ ಈ ರೀತಿಯ ಘಟನೆ ನಡೆದಿಲ್ಲ. ಎಂದಿನಂತೆ ತರಗತಿಗಳು ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಐಡಿಎಸ್ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಾಂದಿನಿ ಅವರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಧ್ಯಾಹ್ನದ ನಂತರ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಇದೇ ಕಾಲೇಜಿನಲ್ಲಿ ಹಿಜಾಬ್ ವಿವಾದ ದೊಡ್ಡ ಸದ್ದು ಮಾಡಿತ್ತು. ಎಬಿವಿಪಿ ಕಾರ್ಯಕರ್ತರು ಕೇಸರಿ ಶಲ್ಲೆ ಧರಿಸಿ ಕಾಲೇಜಿಗೆ ಬಂದರೆ, ದಲಿತ ಸಂಘಟನೆಗಳ ವಿದ್ಯಾರ್ಥಿಗಳು ನೀಲಿ ಶಲ್ಲೆ ಧರಿಸಿ ಕಾಲೇಜಿಗೆ ಬಂದಿದ್ದರು, ಹೀಗಾಗಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.