Asianet Suvarna News Asianet Suvarna News

ಗ್ಯಾರಂಟಿ ಯೋಜನೆ ಜಾರಿ ಬಳಿಕ ರಾಜ್ಯದ ಜಿಎಸ್‌ಟಿ ಸಂಗ್ರಹ ಭಾರೀ ಏರಿಕೆ!

ಗ್ಯಾರಂಟಿ ಯೋಜನೆ ಜಾರಿ ನಂತರ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಹೆಚ್ಚಳವಾಗಿದ್ದು, ಅದರ ಪರಿಣಾಮವಾಗಿ ಸೆಪ್ಟೆಂಬರ್‌ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದೆ. ಅದರಂತೆ ಸೆಪ್ಟೆಂಬರ್‌ ತಿಂಗಳಲ್ಲಿ 11,693 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷ ಶೇ. 20ರಷ್ಟು ಹೆಚ್ಚಿನ ಜಿಎಸ್‌ಟಿ ಸಂಗ್ರಹವಾದಂತಾಗಿದೆ.

After the implementation of the guarantee scheme the state's GST collection increase rav
Author
First Published Oct 3, 2023, 5:36 AM IST

ಬೆಂಗಳೂರು (ಅ.3) :  ಗ್ಯಾರಂಟಿ ಯೋಜನೆ ಜಾರಿ ನಂತರ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಹೆಚ್ಚಳವಾಗಿದ್ದು, ಅದರ ಪರಿಣಾಮವಾಗಿ ಸೆಪ್ಟೆಂಬರ್‌ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದೆ. ಅದರಂತೆ ಸೆಪ್ಟೆಂಬರ್‌ ತಿಂಗಳಲ್ಲಿ 11,693 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷ ಶೇ. 20ರಷ್ಟು ಹೆಚ್ಚಿನ ಜಿಎಸ್‌ಟಿ ಸಂಗ್ರಹವಾದಂತಾಗಿದೆ.

ಕೇಂದ್ರ ಹಣಕಾಸು ಸಚಿವಾಲಯ ಸೆಪ್ಟೆಂಬರ್‌ ತಿಂಗಳ ಜಿಎಸ್‌ಟಿ ಪ್ರಮಾಣದ ವರದಿ ಬಿಡುಗಡೆ ಮಾಡಿದ್ದು, ದೇಶದಲ್ಲಿ ಕಳೆದ ತಿಂಗಳು 1.62 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಅದರಲ್ಲಿ 37,657 ಕೋಟಿ ರು. ಎಸ್‌ಜಿಎಸ್‌ಟಿಯಾಗಿದ್ದರೆ, 29,818 ಕೋಟಿ ರು. ಸಿಜಿಎಸ್‌ಟಿಯಾಗಿದೆ. ಉಳಿದಂತೆ ಐಜಿಎಸ್‌ಟಿ 83,623 ಕೋಟಿ ರು. ಸಂಗ್ರಹಿಸಲಾಗಿದ್ದು, ಅದರಲ್ಲಿ 41,145 ಕೋಟಿ ರು. ಸರಕುಗಳ ಆಮದಿನಿಂದ ಸಂಗ್ರಹವಾದದ್ದಾಗಿದೆ. ಅಲ್ಲದೆ, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿನ ವ್ಯಾಪಾರ-ವಹಿವಾಟಿನ ಏರಿಕೆಯಿಂದಾಗಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶಕ್ಕೇ ಎರಡನೇ ಸ್ಥಾನ ಪಡೆದುಕೊಂಡಿದೆ.

11,933 ಕೋಟಿ ರು. ಹೆಚ್ಚಳ:

ಜಿಎಸ್‌ಟಿ ಸಂಗ್ರಹದಲ್ಲಿ ಬೇರೆಲ್ಲ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಭಾರೀ ಪ್ರಗತಿ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಕರ್ನಾಟಕದಲ್ಲಿ 9,760 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು. ಅದೇ ಈ ವರ್ಷದ ಸೆಪ್ಟೆಂಬರ್‌ನಲ್ಲಿ 11,693 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಒಟ್ಟಾರೆ 1,933 ಕೋಟಿ ರು. ಹೆಚ್ಚಿನ ಜಿಎಸ್‌ಟಿ ಸಂಗ್ರಹಿಸಲಾಗಿದೆ.

ಬಂದ್‌ ನಡುವೆಯೂ ಜಿಎಸ್‌ಟಿ ಸಂಗ್ರಹ ಏರಿಕೆ:

ಅಲ್ಲದೆ, ಸೆ. 26ರಂದು ಬೆಂಗಳೂರು ಬಂದ್‌ ಹಾಗೂ ಸೆ. 29ರಂದು ರಾಜ್ಯ ಬಂದ್‌ ನಡೆಸಲಾಗಿತ್ತು. ಈ ಎರಡು ದಿನ ಬೆಂಗಳೂರು ಹಾಗೂ ರಾಜ್ಯದಲ್ಲಿ ಶೇ. 30ರಿಂದ 50ರಷ್ಟು ವ್ಯಾಪಾರ ವಹಿವಾಟು ಕುಸಿತ ಕಂಡಿತ್ತು. ಅದರಿಂದಾಗಿ ರಾಜ್ಯ ಸರ್ಕಾರಕ್ಕೆ 600 ಕೋಟಿ ರು.ಗೂ ಹೆಚ್ಚಿನ ಜಿಎಸ್‌ಟಿ ಖೋತಾ ಆಗುವಂತಾಗಿತ್ತು. ಅದರ ನಡುವೆಯೂ ಸೆಪ್ಟೆಂಬರ್‌ ತಿಂಗಳಲ್ಲಿ ಹೆಚ್ಚಿನ ಜಿಎಸ್‌ಟಿ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದೆ.

ಗ್ಯಾರಂಟಿ ಯೋಜನೆಯ ಫಲ?:

ಉತ್ಪಾದನೆ, ಮಾರಾಟ ಮತ್ತು ಖರೀದಿ ಪ್ರಮಾಣದಲ್ಲಾಗುವ ಏರಿಕೆಯಿಂದಾಗಿ ಜಿಎಸ್‌ಟಿ ಸಂಗ್ರಹವೂ ಹೆಚ್ಚಳವಾಗುವಂತಾಗಿದೆ. ಗ್ಯಾರಂಟಿ ಯೋಜನೆಗಳ ಜಾರಿ ನಂತರ ಪ್ರತಿ ತಿಂಗಳು ರಾಜ್ಯದ ಜಿಎಸ್‌ಟಿ ಸಂಗ್ರಹ ಪ್ರಮಾಣ ಹೆಚ್ಚಳವಾಗುತ್ತಿದೆ. 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ತಿಂಗಳವರೆಗೆ ಪ್ರತಿ ತಿಂಗಳೂ ಜಿಎಸ್‌ಟಿ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ಜಿಎಸ್‌ಟಿ ಪ್ರಮಾಣದಲ್ಲಿ ಏಪ್ರಿಲ್‌ ಹೊರತುಪಡಿಸಿದರೆ ಸೆಪ್ಟೆಂಬರ್‌ನಲ್ಲಿಯೇ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಗ್ಯಾರಂಟಿ ಯೋಜನೆ ಜಾರಿ ನಂತರ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಹೆಚ್ಚಳವಾಗುತ್ತಿದ್ದು, ಅದರ ಪರಿಣಾಮ ಜಿಎಸ್‌ಟಿ ಸಂಗ್ರಹದಲ್ಲೂ ಏರಿಕೆಯಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ರಾಜ್ಯದ ಜಿಎಸ್‌ಟಿ ಸಂಗ್ರಹದ ವಿವರ (ಕೋಟಿ ರು.ಗಳಲ್ಲಿ):

ತಿಂಗಳು 2022 2023 ಶೇಕಡಾವಾರು ಏರಿಕೆ

  • ಏಪ್ರಿಲ್‌ 11,820 14,593 23
  • ಮೇ 9,232 10,317 12
  • ಜೂನ್ 8,844 11,193 27
  • ಜುಲೈ 9,795 11,505 17
  • ಆಗಸ್ಟ್‌ 9,583 11,116 16
  • ಸೆಪ್ಟೆಂಬರ್‌ 9,760 11,693 20

ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿದ ಮೊದಲ 5 ರಾಜ್ಯಗಳು

ರಾಜ್ಯ ಮೊತ್ತ

  • ಮಹಾರಾಷ್ಟ್ರ 23,137 ಕೋಟಿ ರು.
  • ಕರ್ನಾಟಕ 11,693 ಕೋಟಿ ರು.
  • ತಮಿಳುನಾಡು 10,481 ಕೋಟಿ ರು.
  • ಗುಜರಾತ್‌ 10,129 ಕೋಟಿ ರು.
  • ಹರಿಯಾಣ 8,009 ಕೋಟಿ ರು.
Follow Us:
Download App:
  • android
  • ios