ವಿಧಾನಸೌಧದಲ್ಲಿ ಶಾಸಕರ ನಿದ್ರೆಗಾಗಿ ಕುರ್ಚಿ, ಈಗ ಕೊಠಡಿಗಳಿಗೆ ಸ್ಮಾರ್ಟ್ ಲಾಕ್! 3 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚುತ್ತಿರುವಾಗ ಇಷ್ಟೊಂದು ದುಬಾರಿ ಲಾಕ್ ಅಗತ್ಯವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು (ಮಾ.1): ವಿಧಾನಸಭೆಯ ಅಧಿವೇಶನದ ವೇಳೆ ಮಧ್ಯಾಹ್ನದ ಭೋಜನದ ಬಳಿಕ ಶಾಸಕರ ಕಿರು ನಿದ್ರೆಗಾಗಿ ವಿಧಾನಸೌಧದ ಆವರಣದಲ್ಲಿ ರಿಕ್ಲೈನರ್‌ ಕುರ್ಚಿ (ವಿಶ್ರಾಂತಿ ಕುರ್ಚಿ) ಹಾಕಲು ಸ್ಪೀಕರ್‌ ಯುಟಿ ಖಾದರ್‌ ನಿರ್ಧಾರ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಈಗ 224 ಶಾಸಕರ ಕೊಠಡಿಗಳ ಬಾಗಿಲುಗಳಿಗೆ ಸ್ಮಾರ್ಟ್ ಡೋರ್ ಲಾಕರ್ ಹಾಕಲು ಸರ್ಕಾರ 3 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಇಷ್ಟೆಲ್ಲಾ ಆದ ಬಳಿಕ ಶಾಸಕರು ಕೆಲಸ ಮಾಡೋದು ಯಾವಾಗ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಒಂದೆಡೆ ರಾಜ್ಯದಲ್ಲಿ ಬಾಣಂತಿಯರ ಜೀವಕ್ಕೆ ಸೆಕ್ಯುರಿಟಿ ಇಲ್ಲದೆ ಇರುವ ಹೊತ್ತಿನಲ್ಲಿ, ಅಪರೂಪಕ್ಕೆ ಶಾಸಕರು ಉಳಿಯುವ ಶಾಸಕರ ಭವನದ ಕೋಣೆಗೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್‌ ಲಾಕ್‌ಹಾಕಿಸುವ ಉದ್ದೇಶವೇನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 347 ಬಾಣಂತಿಯರು ಸಾವು ಕಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯವೇ ತಿಳಿಸಿದೆ. ಇವರಿಗೆ ಸರ್ಕಾರ ಮಟ್ಟದಿಂದ ಕೊಂಚ ಮಟ್ಟದ ಪರಿಹಾರಕ್ಕಾದರೂ ಈ ಹಣವನ್ನು ಬಳಸಿಕೊಳ್ಳಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರ ಕೋಣೆಗಳಿಗೆ ಸ್ಮಾರ್ಟ್‌ ಡೋರ್‌ ಹಾಕಲು ವಿಧಾನಸಭೆ ಸಚಿವಾಲಯದಿಂದ ನಿರ್ಧಾರ ಮಾಡಲಾಗಿದೆ. ಶಾಸಕರ ಕೊಠಡಿಗಳಿಗೆ ದುಬಾರಿ ಲಾಕ್ ಹಾಕಿಸಲು ತೀರ್ಮಾನ ಮಾಡಲಾಗಿದೆ. ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಮತ್ತಷ್ಟು ಭದ್ರತೆ ಇದರಿಂದ ಸಿಗಲಿದೆ. ಶಾಸಕರ ಭವನದ 224 ಕೊಠಡಿಗಳಿಗೆ ದುಬಾರಿ ಸ್ಮಾರ್ಟ್ ಡೋರ್ ಲಾಕ್ ಹಾಕಿಸಲು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಇದಕ್ಕಾಗಿ ಬರೋಬ್ಬರಿ 2,99,47,500 ರೂ ವೆಚ್ಚ ಮಾಡಲು ತೀರ್ಮಾನಿಸಿದ್ದು, ಆಸ್ಕೀನ್ ಆಟೋಮೋಷನ್ ಪ್ರೈ ಲಿಮಿಟೆಡ್ ನಿಂದ ಲಾಕ್ ಖರೀದಿ ಮಾಡಲಾಗುತ್ತದೆ. ಪ್ರತಿ ಸ್ಮಾರ್ಟ್ ಡೋರ್ ಲಾಕ್ ಗೆ ದರ 49,000 ರೂಪಾಯಿ ವೆಚ್ಚವಾಗಲಿದೆ. 224 ಡೋರ್ ಲಾಕ್ ಗಾಗಿ 1,09,76,000 ರೂ ಖರ್ಚಾಗಲಿದೆ. ಸ್ಮಾರ್ಟ್ ಲಾಕರ್ 35000 ರೂಪಾಯಿ ಆಗಲಿದ್ದು, 224 ಸ್ಮಾರ್ಟ್ ಲಾಕರ್ ಗಾಗಿ 78,40,000 ರೂ ವೆಚ್ಚವಾಗಲಿದೆ. 123 ಸ್ಮಾರ್ಟ್ ಮಾನಿಟರ್ ಸೊಲ್ಯುಷನ್ ಪ್ರತಿ ಸಿಸ್ಟಮ್ ಗೆ 90,500 ರೂಪಾಯಿ ಆಗಲಿದೆ. 123 ಸಿಸ್ಟಮ್ ಗೆ ಬಳಕೆಯಾಗಲಿರುವ ಮೊತ್ತ 1,11,31,500 ರೂಪಾಯಿ. ಒಟ್ಟು ಈ ಎಲ್ಲಾ ವ್ಯವಸ್ಥೆಗೆ 2,99,47,500 ರೂ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ.

ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ದುರ್ಘಟನೆ; ಒಂದೆಡೆ ಬಾರ್ ಕ್ಯಾಶಿಯರ್ ಸಾವು, ಮತ್ತೊಂದೆಡೆ ಬಾಣಂತಿ ಸಾವು

ಸ್ಮಾರ್ಟ್‌ ಲಾಕರ್‌ ಸಿಸ್ಟಮ್‌ಗೆ ಮಾರುಕಟ್ಟೆ ದರಕ್ಕಿಂತ ಹಚ್ಚಿನ ಮೊತ್ತ ನೀಡುತ್ತಿರುವ ಕಾರಣ ಅನುಮಾನ ವ್ಯಕ್ತವಾಗಿದೆ. ಶಾಸಕರ ಭವನದ ಕೊಠಡಿಗಳ ಭದ್ರತೆಯ ದೃಷ್ಟಿಯಿಂದ ಸ್ಮಾರ್ಟ್ ಲಾಕ್ ಎಂದು ಸರ್ಕಾರ ಹೇಳುತ್ತಿದ್ದರೂ, ಶಾಸಕರು ವರ್ಷದಲ್ಲಿ ಸರಿಯಾಗಿ 1 ತಿಂಗಳು ಕೂಡ ಉಳಿದ ಶಾಸಕರ ಭವನದ ಕೋಣೆಗಳಿಗೆ ಇಷ್ಟೊಂದು ದುಬಾರಿಯಾದ ಲಾಕ್ ಗಳು ಅಗತ್ಯವೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಬಿಮ್ಸ್‌ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ