Karnataka Rain Updates; ಜಲಪಾತ, ಜಲಾಶಯ ನೋಡಲು ಜನಸಾಗರ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಪಾತ, ಜಲಾಶಯ ನೋಡಲು ಜನಸಾಗರ. ಸೆಲ್ಫಿ ತೆಗೆಯಲು ಜನರ ಹುಟ್ಟಾಟ. ಟಿಬಿ ಡ್ಯಾಂಗೆ 30 ಸಾವಿರ ಜನರ ಭೇಟಿ ಹಿನ್ನೆಲೆ 4 ತಾಸು ಸಂಚಾರ ಅಸ್ತವ್ಯಸ್ತ.
ಬೆಂಗಳೂರು (ಜು.18): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೃಷ್ಟಿಯಾಗಿರುವ ಜಲರಾಶಿಯನ್ನು ಕಣ್ತುಂಬಿಕೊಳ್ಳಲು ಜಲಪಾತ, ಜಲಾಶಯಗಳಿಗೆ ವಾರಾಂತ್ಯವಾದ ಭಾನುವಾರದಂದು ಜನಸಾಗರವೇ ಹರಿದು ಬಂದಿತ್ತು. ಶರಾವತಿ ನದಿ ಮಟ್ಟದಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಭೋರ್ಗರೆಯುತ್ತಿದೆ. ಭಾನುವಾರ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಾಗಿತ್ತು. ಕಲ್ಲು ಬಂಡೆಗಳ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕಿ ಬೀಳುವ ಜಲಪಾತದ ನಯನಮನೋಹರ ದೃಶ್ಯಾವಳಿಯನ್ನು ಪ್ರವಾಸಿಗರು ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ವೀಕ್ಷಿಸಿದರು. ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಕೊಡಗಿನ ಅಬ್ಬಿ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದ್ದು, ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತದತ್ತ ಆಗಮಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಪಾಲ್ಸ್, ಗೊಡಚಿನಮಲ್ಕಿ ಜಲಪಾತಗಳನ್ನು ವೀಕ್ಷಿಸಲು ಸಹ ಭಾನುವಾರ ಸಾವಿರಾರು ಪ್ರವಾಸಿಗರು ದಾಂಗುಡಿಯಿಟ್ಟಿದ್ದರು. ಆದರೆ ಪ್ರವಾಸಿಗರು ಸೆಲ್ಫಿ, ಫೋಟೋ, ವಿಡಿಯೋಗಳಿಗಾಗಿ ಅಪಾಯಕಾರಿ ಸ್ಥಳಕ್ಕೆ ತೆರಳುತ್ತಿದ್ದುದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಭಾನುವಾರ 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಕೆಲವು ಪ್ರವಾಸಿಗರು ತಮ್ಮ ಜೀವವನ್ನೂ ಲೆಕ್ಕಿಸದೆ ನದಿಯಲ್ಲಿ ಈಜಾಡಿದ್ದು, ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಮುನಿರಾಬಾದಿಗೆ ಆಗಮಿಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 4 ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಇದೇ ವೇಳೆ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ, ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಜಲಾಶಯ, ಗಗನಚುಕ್ಕಿ ಜಲಪಾತ ನೋಡಲು ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.
ನಯಾಗರದ ಜಲಧಾರೆಗೆ ಬಣ್ಣಗಳ ಚಿತ್ತಾರ ಮೂಡಿಸಿದ ಕಾಮನಬಿಲ್ಲು: viral video
ಕೋಲಾರ್‌ಖಾನ್ ಗಂಗೇಗಿರಿ ಮಾರ್ಗದಲ್ಲಿ ಜಲಪಾತ ವೈಭವ
ಮಲೆನಾಡಿನಲ್ಲಿ ಮುಂಗಾರು ಬಿರುಸುಗೊಂಡರೆ ಸಾಕು ಕೆಲವೆಡೆ ಇರುವ ನೈಸರ್ಗಿಕ ಜಲಪಾತಗಳು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆದು ಆಕರ್ಷಿಸುತ್ತಿವೆ. ಅಂತೆಯೇ, ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಕಡಬಗೆರೆಯಿಂದ ಕೋಲಾರ್‌ಖಾನ್ ಗಂಗೇಗಿರಿ ಮಾರ್ಗದ ಅರಣ್ಯ ಪ್ರದೇಶದಲ್ಲಿ ಹಾಗೂ ಎಸ್ಟೇಟ್‌ಗಳಲ್ಲಿ ಜಲಪಾತಗಳು ಸೃಷ್ಟಿಯಾಗಿ ನೀರು ಧುಮ್ಮಿಕ್ಕುತ್ತಿದೆ.
ಸ್ಥಳೀಯರಷ್ಟೇ ಅಲ್ಲದೆ, ಪ್ರವಾಸಿಗರು ಸಹ ಈ ಜಲಪಾತದ ವೈಭವವನ್ನು ಸವಿಯುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಮಾತ್ರ ಮಲೆನಾಡಿನಲ್ಲಿ ಸ್ವಯಂ ಸೃಷ್ಠಿಯಾಗುವ ಈ ಸುಂದರ ಜಲಪಾತಗಳು ತನ್ನ ಅಂದ ಚೆಂದದ ಮೂಲಕ ಪ್ರಕೃತಿ ವೈಭವವನ್ನು ಹೆಚ್ಚಿಸಿಕೊಂಡಿರುವುದಂತು ನಿಜ.
ಜಯಪುರ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ತೀರ್ಥಕೆರೆ ಜಲಪಾತ ಹಾಗೂ ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಅಬ್ಬಿಕಲ್ಲು ಫಾಲ್ಸ್‌ಗಳು ಸಹ ಈ ಭಾಗದಲ್ಲಿನ ಪ್ರಮುಖ ಫಾಲ್ಸ್‌ಗಳು. ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ, ಶೃಂಗೇರಿ, ಹೊರನಾಡು, ಹರಿಹರಪುರ, ಶಕಟಪುರ, ಬಸ್ತಿಮಠ, ಗೌರಿಗದ್ದೆ ಮುಂತಾದ ಕಡೆಗಳಿಗೆ ತೆರಳುವ ಪ್ರವಾಸಿಗರು, ಭಕ್ತರು ಹೆಚ್ಚಾಗಿ ಹಾಲ್ನೊರೆಯಂತೆ ಬಳುಕಿ, ಬಾಗಿ ಹರಿಯುವ ವಾಟರ್ ಫಾಲ್ಸ್‌ಗಳನ್ನು ವೀಕ್ಷಿಸುತ್ತಿದ್ದಾರೆ.
ವಾರಾಂತ್ಯದ ವೇಳೆಗೆ ಈ ಜಲಪಾತಗಳಿಗೆ ನೂರಾರು ಪ್ರವಾಸಿಗರು, ಸ್ಥಳೀಯರು ಕುಟುಂಬ ಸಮೇತರಾಗಿ, ಸ್ನೇಹಿತರೊಡಗೂಡಿ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಸೌಂದರ್ಯ ಆಸ್ವಾದಿಸಿ ಕೆಲಹೊತ್ತು ಇಲ್ಲೇ ಕುಳಿತು ಕಾಲಕಳೆದು ತೆರಳುತ್ತಾರೆ. ಮಳೆಗಾಲದ ಈ ಜಲವೈಭವವನ್ನು ಭಾನುವಾರ ನೂರಾರು ಪ್ರವಾಸಿಗರು ಭೇಟಿ ನೀಡಿ ಸೌಂದರ್ಯ ವೀಕ್ಷಿಸಿದ್ದು ಕಂಡುಬಂದಿತು.
ಉಕ್ಕಿ ಹರಿಯುತ್ತಿರುವ ಕಾವೇರಿ ನದಿ: ಮಂಡ್ಯದ ಪ್ರವಾಸಿ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧ
ಜಲಧಾರೆ ಮಧ್ಯೆ ಜನರ ಹುಚ್ಚಾಟ!
ಬೆಳಗಾವಿ ಜಿಲ್ಲಾದ್ಯಂತ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ನದಿ ಮೂಲಗಳು ಮೈದುಂಬಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ಆದರೆ, ಪ್ರವಾಸಿಗರು ಮಾತ್ರ ಜಲಪಾತಗಳಲ್ಲಿ ಸೆಲ್ಪಿಗಿಳಿಗಾಗಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದು, ಇದು ಪೊಲೀಸ್ ಇಲಾಖೆಗೆ ತಲೆನೋವಾಗಿವೆ ಪರಿಣಮಿಸಿದೆ.
ಮಳೆಗಾಲ ಆರಂಭವಾದರೆ ಸಾಕು ಪ್ರವಾಸಿಗರು ಜಲಪಾತಗಳ ಸೊಬಗನ್ನು ಸವಿಯಲು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ, ಯುವಕರ ನಡೆಸುವ ಹುಚ್ಚಾಟ ಪೊಲೀಸ್ ಇಲಾಖೆಗೆ ತಲೆನೋವು ಆಗಿ ಪರಿಗಣಿಸಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಮೂರು ರಾಜ್ಯಗಳ ಪ್ರವಾಸಿಗರಲ್ಲದೆ, ದೇಶದ ಅನೇಕ ಭಾಗಗಳಿಂದ ಪ್ರತಿವರ್ಷ ಲಕ್ಷಾಂತರ ಜನರು ಈ ಫಾಲ್ಸ್‌ನ ಸುಂದರ ದೃಶ್ಯಗಳನ್ನು ಕಣ್ಣು ತುಂಬಿಸಿಕೊಳ್ಳಲು ಕುಟುಂಬ ಸದಸ್ಯರ ಹಾಗೂ ಸ್ನೇಹಿತರೊಂದಿಗೆ ಬಂದು ಹೋಗುತ್ತಾರೆ. ಇಂದು ಈ ಫಾಲ್ಸ್‌ನಲ್ಲಿ ಯುವಕರು ಮಾಡುತ್ತಿರುವ ಹುಚ್ಚಾಟದಿಂದ ಪೊಲೀಸ್‌ರು ತಮ್ಮ ಕಾರ್ಯದ ಜತೆಗೆ ಪ್ರವಾಸಿಗರ ರಕ್ಷಣೆ ಹಾಗೂ ತಿಳಿವಳಿಕೆ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದು, ಪೊಲೀಸ್ ಇಲಾಖೆಗೆ ಇದು ಹೊರೆಯಾಗಿ ಪರಿಣಿಸಿದೆ.